ಚನ್ನಸಾಗರದಹಟ್ಟಿ ಪಿಡಿಒ ಮೇಲೆ ಹಲವು ಗ್ರಾಮಸ್ಥರ ಆಕ್ರೋಶ

KannadaprabhaNewsNetwork |  
Published : Jun 20, 2026, 01:30 AM IST
ಫೋಟೋ 19ಪಿವಿಡಿ1ಸಿ.ಕೆ.ಪುರ ಗ್ರಾಪಂ ಕಾರ್ಯಾಲಯ.ಫೋಟೋ 19ಪಿವಿಡಿ2ರವಿ ಪಾಳೇಗಾರ,ಫೋಟೋ 19ಪಿವಿಡಿ3ಸಿ.ಕೆ.ಪುರ ಗ್ರಾಪಂ ಪಿಡಿಒರಂಗಸ್ವಾಮಿ   | Kannada Prabha

ಸಾರಾಂಶ

ತಾಲೂಕಿನ ಗಡಿ ಭಾಗದ ಸಿ.ಕೆ.ಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚನ್ನಸಾಗರದಹಟ್ಟಿ ಸೇರಿ ವಿವಿಧ ಗ್ರಾಮಗಳಲ್ಲಿ ಮೂಲಭೂತ ಸೌಕರ್ಯಗಳ ಸಮಸ್ಯೆಗಳು ತಾಂಡವಾಡುತ್ತಿದ್ದು, ಗ್ರಾಪಂಗೆ ಬೇಕಾಬಿಟ್ಟಿ ಭೇಟಿ ಹಿನ್ನೆಲೆಯಲ್ಲಿ ಗ್ರಾಪಂ ಅಭಿವೃದ್ಧಿ ಅಧಿಕಾರಿ (ಪಿಡಿಒ) ರಂಗಸ್ವಾಮಿ ಅವರ ಕಾರ್ಯವೈಖರಿಯ ವಿರುದ್ಧ ಸಾರ್ವಜನಿಕರ ಆಕ್ರೋಶ ಭುಗಿಲೆದ್ದಿದೆ.

ಕನ್ನಡಪ್ರಭ ವಾರ್ತೆ ಪಾವಗಡ

ತಾಲೂಕಿನ ಗಡಿ ಭಾಗದ ಸಿ.ಕೆ.ಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚನ್ನಸಾಗರದಹಟ್ಟಿ ಸೇರಿ ವಿವಿಧ ಗ್ರಾಮಗಳಲ್ಲಿ ಮೂಲಭೂತ ಸೌಕರ್ಯಗಳ ಸಮಸ್ಯೆಗಳು ತಾಂಡವಾಡುತ್ತಿದ್ದು, ಗ್ರಾಪಂಗೆ ಬೇಕಾಬಿಟ್ಟಿ ಭೇಟಿ ಹಿನ್ನೆಲೆಯಲ್ಲಿ ಗ್ರಾಪಂ ಅಭಿವೃದ್ಧಿ ಅಧಿಕಾರಿ (ಪಿಡಿಒ) ರಂಗಸ್ವಾಮಿ ಅವರ ಕಾರ್ಯವೈಖರಿಯ ವಿರುದ್ಧ ಸಾರ್ವಜನಿಕರ ಆಕ್ರೋಶ ಭುಗಿಲೆದ್ದಿದೆ.

ಸಮರ್ಪಕ ಕುಡಿಯುವ ನೀರು,ನೈರ್ಮಲ್ಯ ಹಾಗೂ ಶೌಚಗೃಹ ನಿರ್ಮಾಣ ಮತ್ತು ಚರಂಡಿಗಳ ದುರಸ್ತಿ ಕುರಿತು ಹಲವು ಬಾರಿ ಮನವಿ ಸಲ್ಲಿಸಿ ಸಮಸ್ಯೆ ಗಮನಕ್ಕೆ ತಂದಿದ್ದರೂ ಯಾವುದೇ ಶಾಶ್ವತ ಪರಿಹಾರ ನೀಡಿಲ್ಲ ಎಂದು ಆರೋಪಿಸಿರುವ ಗ್ರಾಮಸ್ಥರು,ತಕ್ಷಣ ಪಿಡಿಒ ಅವರನ್ನು ವರ್ಗಾವಣೆ ಮಾಡಿ ಸೇವೆ ಮಾಡುವ ಅಧಿಕಾರಿಯನ್ನು ನೇಮಿಸುವಂತೆ ಆಗ್ರಹಿಸಿದ್ದಾರೆ.ಕಳೆದ ನಾಲ್ಕು ದಿನದ ಹಿಂದೆ ಬಿದ್ದ ಭಾರಿ ಮಳೆಯಿಂದ ಮನೆಗಳಿಗೆ ನೀರು ನುಗ್ಗಿ ಜನಜೀವನ ಅಸ್ತವ್ಯಸ್ತಗೊಂಡಿದೆ.ಈ ಸಂಬಂಧ ಪತ್ರಿಕೆಗಳಲ್ಲಿ ಸುದ್ದಿಯಾಗಿದ್ದರೂ ಸಂಬಂಧಪಟ್ಟ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಸಮಸ್ಯೆ ಪರಿಶೀಲಿಸುವ ಅಥವಾ ಜನರ ಅಹವಾಲು ಆಲಿಸುವ ಕನಿಷ್ಠ ಪ್ರಯತ್ನವೂ ಸಹ ಮಾಡಿಲ್ಲ. ಪರಿಸ್ಥಿತಿ ಗಂಭೀರವಾಗುತ್ತಿದ್ದಂತೆ ಗ್ರಾಮಸ್ಥರೇ ತಲಾ 15ರಿಂದ 20ಸಾವಿರ ತಮ್ಮ ಸ್ವಂತ ಹಣ ಶೇಖರಿಸಿ ಖರ್ಚು ಮಾಡಿ ಟ್ರಾಕ್ಟರ್‌ಗಳ ಮೂಲಕ ಬೆಟ್ಟ-ಗುಡ್ಡಗಳಿಂದ ತಂದ ಮಣ್ಣಿನಿಂದ ರಸ್ತೆ ಹಾಗೂ ಮನೆಗಳ ಸುತ್ತಮುತ್ತ ತಗ್ಗು ಪ್ರದೇಶಗಳನ್ನು ಎತ್ತರಗೊಳಿಸುವ ಕೆಲಸ ಕೈಗೊಂಡಿದ್ದಾರೆ.ಲಕ್ಷಾಂತರ ರುಗಳ ಹಣ ಖರ್ಚು ಮಾಡಿ ದುರಸ್ತಿ ಕಾರ್ಯಕೈಗೊಂಡಿದ್ದರೂ ಗ್ರಾಪಂ ಅಧಿಕಾರಿಗಳು ಸ್ವಂದಿಸಿಲ್ಲ.ಯಾವುದೇ ನೆರವು ದೊರೆತಿಲ್ಲ ಎಂದು ದೂರಿದ್ದಾರೆ.

ಚನ್ನಸಾಗರದಹಟ್ಟಿ ಗ್ರಾಮದ ಸುರೇಶ್ ಮಾತನಾಡಿ,ಗ್ರಾಮದ ಮೂಲಭೂತ ಸಮಸ್ಯೆಯ ದೂರಿನ ಮೇರೆಗೆ ಇತ್ತೀಚೆಗೆ ಜಿಲ್ಲಾಧಿಕಾರಿ ಚನ್ನಸಾಗರದಹಟ್ಟಿ ಗ್ರಾಮಕ್ಕೆ ಭೇಟಿ ನೀಡಿ ಕುಡಿಯುವ ನೀರು, ಸ್ವಚ್ಛತೆ ಮತ್ತು ಮೂಲಸೌಕರ್ಯ ಸಮಸ್ಯೆಗಳ ಬಗ್ಗೆ ಪರಿಶೀಲನೆ ನಡೆಸಿ ಅಗತ್ಯ ಕ್ರಮ ಕೈಗೊಳ್ಳುವಂತೆ ತಾಪಂ ಇಒ ಹಾಗೂ ಪಿಡಿಒಗೆ ಸೂಚಿಸಿದ್ದರು. ಮಹಿಳೆಯರು ಕೂಡ ತಮ್ಮ ಅಹವಾಲುಗಳನ್ನು ಸಲ್ಲಿಸಿದ್ದರು.ಆದರೆ ಆ ಸೂಚನೆಗಳನ್ನು ಅಧಿಕಾರಿಗಳು ಗಂಭೀರವಾಗಿ ಪರಿಗಣಿಸದೇ ನಿರ್ಲಕ್ಷ್ಯ ವಹಿಸಿದ ಪರಿಣಾಮ ಇಂದು ಜನರು ಮಳೆ ನೀರಿನ ಅವಾಂತರಕ್ಕೆ ತುತ್ತಾಗಿದ್ದಾರೆ. ಅಧಿಕಾರಿಗಳ ನಿರ್ಲಕ್ಷ್ಯದಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿರುವುದಷ್ಟೇ ಅಲ್ಲ, ಸರ್ಕಾರಕ್ಕೂ ಕೆಟ್ಟ ಹೆಸರು ಬರುತ್ತಿದೆ. ಆದ್ದರಿಂದ ಪಿಡಿಒ ವಿರುದ್ಧ ಸೂಕ್ತ ಕ್ರಮ ಜರುಗಿಸಬೇಕೆಂದು ಒತ್ತಾಯಿಸಿದರು.

ಸಿ.ಕೆ.ಪುರ ಗ್ರಾಮದ ಯುವಕ ರವಿ ಪಾಳೇಗಾರ್ ಮಾತನಾಡಿ, ಪಂಚಾಯಿತಿ ವ್ಯಾಪ್ತಿಯ ಎಲ್ಲಾ ಗ್ರಾಮಗಳಲ್ಲಿಯೂ ಕುಡಿಯುವ ನೀರು, ಸ್ವಚ್ಛತೆ ಹಾಗೂ ಮೂಲಭೂತ ಸೌಕರ್ಯಗಳ ಸಮಸ್ಯೆಗಳು ಉಲ್ಬಣಗೊಳ್ಳುತ್ತಿವೆ. ಆದರೆ ಜನರ ಸಮಸ್ಯೆಗಳಿಗೆ ಸ್ಪಂದಿಸುವ ಬದಲು ಕೆಲವೇ ವ್ಯಕ್ತಿಗಳ ಪರವಾಗಿ ಆಡಳಿತ ನಡೆಯುತ್ತಿದೆ ಎಂಬ ಭಾವನೆ ಸಾರ್ವಜನಿಕರಲ್ಲಿ ಮೂಡಿದೆ. ಅಭಿವೃದ್ಧಿ ಕಾಮಗಾರಿಗಳು ಮತ್ತು ಜನರ ಅಗತ್ಯಗಳಿಗೆ ಆದ್ಯತೆ ನೀಡದ ಅಧಿಕಾರಿಗಳನ್ನು ಮುಂದುವರಿಸುವುದು ಸೂಕ್ತವಲ್ಲ. ಸಾರ್ವಜನಿಕರ ಸಂಕಷ್ಟಗಳಿಗೆ ಸ್ಪಂದಿಸದ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸಬೇಕು.ಇಲ್ಲವಾದರೆ ಪ್ರತಿಭಟನೆಗೆ ಸಜ್ಜಾಗುವುದಾಗಿ ಎಚ್ಚರಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಶಾಸಕರು ಅವರವರ ಆತ್ಮಸಾಕ್ಷಿಗೆ ಮತ ಚಲಾಯಿಸಿದ್ದಾರೆ
ಸೂಕ್ತ ಪರಿಷ್ಕರಣೆಯಿಂದ 14 ಲಕ್ಷ ಮತಗಳು ವಿಮರ್ಶೆಗೆ ಒಳಪಡುತ್ತದೆ: ಸಂಸದ ಕೋಟಾ ಶ್ರೀನಿವಾಸ ಪೂಜಾರಿ