ನಕಾಶೆ ದಾರಿ ಒತ್ತುವರಿ: ಸಮಸ್ಯೆ ಪರಿಹಾರಕ್ಕೆ ಒತ್ತಾಯ

KannadaprabhaNewsNetwork | Published : Jun 11, 2024 1:34 AM

ಸಾರಾಂಶ

ಚಳ್ಳಕೆರೆ ನಗರದ ತಾಲೂಕು ಕಚೇರಿ ಸಭಾಂಗಣದಲ್ಲಿ ತಾಲೂಕಿನ ಚನ್ನಮ್ಮನಾಗತಿಹಳ್ಳಿ ಗ್ರಾಮದಲ್ಲಿ ಹೊಲಕ್ಕೆ ದಾರಿ ಬಿಡಿಸಿಕೊಡುವಂತೆ ಒತ್ತಾಯಿಸಿ ಮನವಿ ಸಲ್ಲಿಸಿದರು.

ಕನ್ನಡಪ್ರಭ ವಾರ್ತೆ ಚಳ್ಳಕೆರೆ

ತಾಲೂಕಿನ ಚನ್ನಮ್ಮನಾಗತಿಹಳ್ಳಿ ಗ್ರಾಮದ ಕೆಲ ಜಮೀನುಗಳಿಗೆ ಹೋಗವು ನಕಾಶೆ ದಾರಿ ತೋರಿಸುವಂತೆ ಒತ್ತಾಯಿಸಿ ಗ್ರಾಮಸ್ಥರು ತಹಸೀಲ್ದಾರ್‌ಗೆ ಮನವಿ ಸಲ್ಲಿಸಿದರು.

ಕಳೆದ ಹಲವಾರು ವರ್ಷಗಳಿಂದ ಗ್ರಾಮದ ರಿ.ಸ.ನಂ.೬೬/೨, ೬೬/೩, ೬೭,೬೮,೬೯,೭೦ರಿಂದ ೧೫೦ ಸ.ನಂ. ಜಮೀನಿಗೆ ಓಡಾಡಲು ದಾರಿ ಇಲ್ಲದೆ ಕೆರೆಯಂಗಳದಲ್ಲೇ ಒಡಾಟ ನಡೆಸುತ್ತಿದ್ದೇವೆ. ಆದರೆ ಕಳೆದ ವರ್ಷ ಮಳೆಯಿಂದ ಜಮೀನುಗಳಿಗೆ ಹೋಗಲು ಅಡ್ಡಿ ಉಂಟಾಯಿತು. ಈ ಬಾರಿ ಹೆಚ್ಚಿನ ಮಳೆಯ ಸಂಭವವಿದ್ದು, ರೈತರು ಬಿತ್ತನೆ ಮಾಡಲು ಸಿದ್ಧತೆ ಮಾಡಿಕೊಂಡಿದ್ದಾರೆ. ಬೆಳೆದ ಬೆಳೆಯನ್ನು ಸಾಗಿಸಲು ದಾರಿ ಅವಶ್ಯಕತೆ ಇದೆ. ಬಿತ್ತನೆ ಮಾಡಿದ ನಂತರ ಮಳೆ ಬಂದು ಕೆರೆ ತುಂಬಿದಲ್ಲಿ ನಮ್ಮ ಜಮೀನುಗಳಿಗೆ ಹೋಗಲು ದಾರಿಯೆ ಇಲ್ಲದಾಗುತ್ತದೆ. ಆದ್ದರಿಂದ ನಕಾಶೆ ದಾರಿ ತೋರಿಸಿ ರೈತರು ಜಮೀನು ಕಾರ್ಯ ಕೈಗೊಳ್ಳಲು ಅನುವು ಮಾಡಿಕೊಡಬೇಕೆಂದು ಆಗ್ರಹಿಸಿದ್ದಾರೆ.

ನಕಾಶೆ ದಾರಿ ಒತ್ತುವರಿ ಮಾಡಿ ಸಾಗುವಳಿ ಮಾಡುತ್ತಿರುವುದರಿಂದ ಮುಂದಿನ ಜಮೀನಿನಗಳಿಗೆ ಹೋಗಲು ದಾರಿ ಇಲ್ಲವಾಗಿದೆ. ಕೆರೆ ದಾರಿಯನ್ನೆ ನೆಚ್ಚಿ ಕೆಲಸ ಕಾರ್ಯ ಮಾಡಲು ಸಾಧ್ಯವಿಲ್ಲ. ದಾರಿ ತೋರಿಸುವಂತೆ ಕಳೆದ ಎರಡ್ಮೂರು ವರ್ಷಗಳಿಂದ ಮನವಿ ನೀಡುತ್ತಲ್ಲೇ ಬಂದಿದ್ದೇವೆ ಆದರೆ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆ. ಈ ಬಾರಿಯಾದರೂ ಕೆಲಸ ಮಾಡಿಕೊಡಿ ಎಂದು ಮನವಿ ಮಾಡಿದರು.

ಮನವಿ ಸ್ವೀಕರಿಸಿದ ತಹಸೀಲ್ದಾರ್ ರೇಹಾನ್‌ ಪಾಷ ಕಂದಾಯ ಇಲಾಖೆ ದಾಖಲೆ ಪ್ರಕಾರ ದಾರಿ ನಕಾಶೆ ಇದ್ದು ಇದಕ್ಕೆ ಯಾರೂ ಅಡ್ಡಿಪಡಿಸಲು ಬರುವುದಿಲ್ಲ. ಈ ಬಗ್ಗೆ ಸಂಬಂಧಪಟ್ಟ ಕಂದಾಯ ಅಧಿಕಾರಿ ಹಾಗೂ ಶಿರಸ್ತೇದಾರರನ್ನು ಸ್ಥಳಕ್ಕೆ ಕಳಿಸಿ ಅಳತೆ ಮಾಡಿಸಿ ಸರ್ಕಾರದ ಕಾನೂನಿನಂತೆ ನಕಾಶೆ ದಾರಿಯಲ್ಲೇ ರೈತರು ಓಡಾಟ ಮಾಡಲು ಅನುವು ಮಾಡಿಕೊಡುವ ಭರವಸೆ ನೀಡಿದರು.

ಈ ವೇಳೆ ಗ್ರಾಪಂ ಸದಸ್ಯರಾದ ಶಿವಣ್ಣ, ಶಿಲ್ಪಾರಾಣಿ ಬಸವರಾಜು, ಈರಣ್ಣ, ತಿಪ್ಪೇಸ್ವಾಮಿ, ತಮ್ಮಣ್ಣ, ಹೊಟ್ಟೀರಪ್ಪ, ವೀರಪ್ಪ, ಗೌಡ್ರತಮ್ಮಣ್ಣ, ಈ. ಬಾಲರಾಜು, ಸಣ್ಣಪ್ಪ, ಕೋಣಪ್ಪ, ತಿಪ್ಪೇಸ್ವಾಮಿ, ಈರಮ್ಮ, ಲಕ್ಷ್ಮಕ್ಕ, ಜಯಮ್ಮಾ ಮುಂತಾದವರು ಉಪಸ್ಥಿತರಿದ್ದರು.

Share this article