ಮನುಕುಲದ ಉಳುವಿಗೆ ಗಿಡ-ಮರ ಅವಶ್ಯ: ಮುತ್ತಣ್ಣ ಸವರಗೋಳ

KannadaprabhaNewsNetwork | Published : Jun 11, 2024 1:34 AM

ಸಾರಾಂಶ

ಮರಗಳು ಇಲ್ಲದೆಯೇ ಮನುಷ್ಯರ ಬದುಕು ಊಹಿಸಲಸಾಧ್ಯ.

ಡಿ.ಎಸ್.ಪಿ. ಮುತ್ತಣ್ಣ ಸವರಗೋಳ ಹೇಳಿಕೆ । ವನಮಹೋತ್ಸವ ಕಾರ್ಯಕ್ರಮ

ಕನ್ನಡಪ್ರಭ ವಾರ್ತೆ ಕೊಪ್ಪಳ

ಮರಗಳು ಬೆಳೆದಷ್ಟು ಮನುಕುಲ ಉಳಿಯುತ್ತದೆ. ಮರಗಳು ಇಲ್ಲದೆಯೇ ಮನುಷ್ಯರ ಬದುಕು ಊಹಿಸಲಸಾಧ್ಯ ಎಂದು ಡಿ.ಎಸ್.ಪಿ ಮುತ್ತಣ್ಣ ಸವರಗೋಳ ಹೇಳಿದರು.

ಕೊಪ್ಪಳ ಚಾರಣ ಬಳಗ ಮತ್ತು ಪರಿಸರ ಪ್ರೇಮಿಗಳ ಸಹಕಾರದೊಂದಿಗೆ ನಗರದ ಜಿಲ್ಲಾ ಕ್ರೀಡಾಂಗಣ ಹತ್ತಿರ ಇರುವ ಕ್ರೀಡಾ ವಸತಿ ಶಾಲೆಯ ಹೊರಾಂಗಣದಲ್ಲಿ ವನಮಹೋತ್ಸವ ನಿಮಿತ್ತ ಹಮ್ಮಿಕೊಂಡಿದ್ದ ಸಸಿನೆಡುವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಇತ್ತೀಚೆಗೆ ಬಿಸಿಲಿನ ತಾಪ ಅತಿ ಹೆಚ್ಚುತ್ತಿರುವುದಕ್ಕೆ ಮನುಷ್ಯನ ದುರಾಶೆಗಳೇ ಕಾರಣ. ಅವನಿಗೆ ಪ್ರಕೃತಿಯ ಮೇಲೆ ಇಲ್ಲದಿರುವ ಕಾಳಜಿ ಎದ್ದು ಕಾಣುತ್ತಿದೆ. ಒಬ್ಬ ವ್ಯಕ್ತಿ ಕನಿಷ್ಠ ಒಂದು ಮರವನ್ನಾದರೂ ಬೆಳೆಸುವ ಪ್ರವೃತ್ತಿ ಬೆಳೆಸಿಕೊಂಡರೆ ನಮ್ಮ ಪರಿಸರ ತಂಪಾಗಿ ಮನುಷ್ಯರನ್ನೂ ತಂಪಾಗಿಡುತ್ತದೆ ಎಂದರು.

ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ವಿಠಲ ಜಾಬಗೌಡರ ಮಾತನಾಡಿ, ನಾವು ಮುಂದಿನ ಪೀಳಿಗೆಗೆ ಆಸ್ತಿ ಕೊಡುವುದಕ್ಕಿಂತ ಮುಖ್ಯವಾಗಿ ಪ್ರಾಕೃತಿಕ ಕೊಡುಗೆಯನ್ನು ಕೊಡುವುದು ಬಹಳ ಮುಖ್ಯ ಎಂದರು.

ಹಿರಿಯ ವಕೀಲ ವಿ.ಎಂ. ಭೂಸನೂರುಮಠ, ಡಾ. ಎಸ್.ಬಿ. ದಾನರೆಡ್ಡಿ, ಕೊಪ್ಪಳ ನಗರ ಠಾಣೆಯ ಇನ್‌ಸ್ಪೆಕ್ಟರ್ ಜಯಪ್ರಕಾಶ ಕೆ., ಡಾ. ಕವಿತಾ ಹ್ಯಾಟಿ ಮಾತನಾಡಿದರು.

ಡಾ. ವಿ.ಎಸ್. ಮಾದಿನೂರು. ಡಾ. ಅನಿರುದ್ಧ ಕುಷ್ಟಗಿ, ಬಸವರಾಜ ಸಂಕನಗೌಡರ್, ಗವಿಕುಮಾರ ಕಸ್ತೂರಿ, ಜಮುಜಾ, ಡಾ. ಬಾಲು ತಳವಾರ, ಗುರುರಾಜ ವೈ.ಜಿ., ಸಿ.ಬಿ. ಪಾಟೀಲ್, ಕ್ರೀಡಾ ಇಲಾಖೆಯ ತರಬೇತಿದಾರ ವಿಶ್ವನಾಥ, ಚಾರಣ ಬಳಗದ ಸಂಯೋಜಕ ಡಾ. ಸಿದ್ಧಲಿಂಗಪ್ಪ ಕೊಟ್ನೆಕಲ್, ಡಾ.ವಿಜಯ ಸುಂಕದ್‌, ಮಹಾಂತೇಶ ಸಂಗಟಿ, ಕ್ರೀಡಾ ವಸತಿ ಶಾಲೆಯ ಸುಮಾರು ನಲವತ್ತು ಮಕ್ಕಳು ಇದ್ದರು. ಐವತ್ತಕ್ಕೂ ಅಧಿಕ ಮರಗಳನ್ನು ನೆಡಲಾಯಿತು.

Share this article