ಜೀವಾವಧಿ ಶಿಕ್ಷೆಯಿಂದ ದೇಶಾದ್ಯಂತ ಗಮನ ಸೆಳೆದಿದ್ದ ಪ್ರಕರಣ
ಧಾರವಾಡ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ ಎಲ್ಲರಿಗೂ ಜಾಮೀನು
ಅರ್ಜಿಯನ್ನೇ ಸಲ್ಲಿಸದ ಎ 1 ಆರೋಪಿಗೆ ಮಾತ್ರ ಜಾಮೀನು ಇಲ್ಲಗಂಗಾವತಿ ತಾಲೂಕಿನ ಮರಕುಂಬಿ ಗ್ರಾಮದಲ್ಲಿ ಅಸ್ಪೃಶ್ಯತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೊಪ್ಪಳ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ 98 ಜನರಿಗೆ ನೀಡಿದ್ದ ಜೀವಾವಧಿ, ಮೂವರಿಗೆ 5 ವರ್ಷ ಜೈಲು ಶಿಕ್ಷೆಗೆ ಧಾರವಾಡ ಹೈಕೋರ್ಟ್ ತಡೆಯಾಜ್ಞೆ ನೀಡಿ, 99 ಜನರಿಗೆ ಜಾಮೀನು ಮಂಜೂರು ಮಾಡಿದೆ.
98 ಜನರಿಗೆ ಜೀವಾವಧಿ ಶಿಕ್ಷೆ ಪ್ರಕಟವಾಗಿತ್ತು. ಪೊಲೀಸ್ ಕಸ್ಟಡಿಯಲ್ಲಿರುವಾಗಲೇ ಓಬ್ಬರು ಆನಾರೋಗ್ಯದಿಂದ ನಿಧನರಾಗಿದ್ದರು. ಪ್ರಕರಣದ ಎ.1 ಆರೋಪಿ ಜಾಮೀನು ಅರ್ಜಿ ಸಲ್ಲಿಸದೆ ಇರುವ ಕಾರಣ ಅರ್ಜಿ ಸಲ್ಲಿಸಿದ 99 ಜನರಿಗೂ ಧಾರವಾಡ ಹೈಕೋರ್ಟ್ ಬುಧವಾರ ಜಾಮೀನು ನೀಡಿದೆ.
ಅ. 24ರಂದು ಕೊಪ್ಪಳ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರು ಮರಕುಂಬಿ ಪ್ರಕರಣದಲ್ಲಿ 101 ಜನರಿಗೆ ಶಿಕ್ಷೆ ನೀಡಿ ಆದೇಶಿಸಿದ್ದರು. 98 ಜನರಿಗೆ ಜೀವಾವಧಿ, ಮೂವರಿಗೆ 5 ವರ್ಷ ಜೈಲು ಶಿಕ್ಷೆ ವಿಧಿಸಲಾಗಿತ್ತು.
ಮರಕುಂಬಿ ಗ್ರಾಮದಲ್ಲಿ ಕ್ಷೌರದಂಗಡಿ ಮತ್ತು ಹೋಟೆಲ್‌ಗಳಿಗೆ ದಲಿತರಿಗೆ ಪ್ರವೇಶ ನೀಡದೆ ಇರುವ ಕುರಿತು ಹಲವು ವರ್ಷಗಳಿಂದ ಗಲಾಟೆಯಾಗುತ್ತಿತ್ತು. 2014ರ ಆ. 28ರಂದು ಗಂಗಾವತಿ ನಗರದ ಶಿವ ಚಿತ್ರಮಂದಿರದಲ್ಲಿ ಟಿಕೆಟ್ ತೆಗೆಸುವ ವಿಚಾರಕ್ಕೆ ಮರಕುಂಬಿ ಗ್ರಾಮದ ಮಂಜುನಾಥ ಮತ್ತು ದಲಿತ ಯುವಕರ ನಡುವೆ ಜಗಳ ನಡೆಯಿತು. ಇದಾದ ಮೇಲೆ ಮಂಜುನಾಥ ಗ್ರಾಮಕ್ಕೆ ಬಂದು ವಿಷಯ ತಿಳಿಸುತ್ತಿದ್ದಂತೆ ಸವರ್ಣೀಯರು ಕೇರಿಗೆ ನುಗ್ಗಿ ದಾಂದಲೆ ಮಾಡಿದ್ದರು. ನಾಲ್ಕು ಗುಡಿಸಲುಗಳಿಗೆ ಬೆಂಕಿ ಹಚ್ಚಿ, ಸುಟ್ಟಿದ್ದರು.
ಈಗ 101 ಜನರ ಪೈಕಿ ಓರ್ವ ಪೊಲೀಸ್ ಕಸ್ಟಡಿಯಲ್ಲಿ ನಿಧನರಾಗಿದ್ದರಿಂದ ಹಾಗೂ ಎ.1 ಆರೋಪಿ ಧಾರವಾಡ ಹೈಕೋರ್ಟಿನಲ್ಲಿ ಜಾಮೀನಿಗೆ ಅರ್ಜಿಯನ್ನೇ ಸಲ್ಲಿಸದೆ ಇರುವುದರಿಂದ ಅರ್ಜಿ ಸಲ್ಲಿಸಿದ 99 ಜನರಿಗೂ ಜಾಮೀನು ನೀಡಲಾಗಿದೆ.