ಕನ್ನಡಪ್ರಭ ವಾರ್ತೆ ಹಾಸನ
ಸುಪ್ರೀಂ ಕೋರ್ಟಿನ ತೀರ್ಪಿನಂತೆ ಒಳ ಮೀಸಲಾತಿ ಕಾರ್ಯರೂಪಕ್ಕೆ ತರುವ ನಿಟ್ಟಿನಲ್ಲಿ ರಾಜ್ಯದ ಸಚಿವ ಸಂಪುಟ ಕೂಡ ಸಮ್ಮತಿ ಸೂಚಿಸಿರುವುದಕ್ಕೆ ಆಲ್ ಇಂಡಿಯಾ ಬಹುಜನ ಸಮಾಜ ಪಾರ್ಟಿ ಸ್ವಾಗತಿಸುತ್ತದೆ. ವಿಳಂಬ ಮಾಡದೇ ಜಾರಿಗೆ ತರಬೇಕು. ಜೊತೆಗೆ ರಾಜ್ಯ ಸರ್ಕಾರವು ತಕ್ಷಣ ಕಾಂತರಾಜ ವರದಿಯನ್ನು ಕೂಡ ಜಾರಿ ಮಾಡಬೇಕೆಂದು ಆಲ್ ಇಂಡಿಯಾ ಬಹುಜನ ಸಮಾಜ ಪಾರ್ಟಿ ರಾಜ್ಯಾಧ್ಯಕ್ಷ ಮಾರಸಂದ್ರ ಮುನಿಯಪ್ಪ ಆಗ್ರಹಿಸಿದರು.ನಗರದಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ದತ್ತಾಂಶ ಸಂಗ್ರಹಣೆ ನೆಪ ಒಡ್ಡಿ ನಿವೃತ್ತ ನ್ಯಾಯಾಧೀಶರ ಅಧ್ಯಕ್ಷತೆಯಲ್ಲಿ ಮತ್ತೊಂದು ಆಯೋಗ ರಚಿಸಿರುವುದು ಅನಾವಶ್ಯಕ ಮತ್ತು ಕಾಲಹರಣದ ತಂತ್ರವಾಗಿದೆ. ಆದ್ದರಿಂದ ಒಳಮೀಸಲಾತಿಯನ್ನು ವಿಳಂಬ ಮಾಡದೆ ಕೂಡಲೇ ಜಾರಿಗೆ ತರಬೇಕೆಂದು ಆಲ್ ಇಂಡಿಯಾ ಬಹುಜನ ಸಮಾಜ ಪಾರ್ಟಿ ಸರ್ಕಾರವನ್ನು ಒತ್ತಾಯಿಸುತ್ತದೆ. ಕರ್ನಾಟಕದಲ್ಲಿ ಪರಿಶಿಷ್ಟ ಜಾತಿಯ ವಿವಿಧ ಜಾತಿಗಳ ಜನಸಂಖ್ಯೆಗೆ ಸಂಬಂಧಪಟ್ಟಂತಹ ಮಾಹಿತಿಯು ಹಾವನೂರು ಆಯೋಗದಿಂದ ಮೊದಲ್ಗೊಂಡು ನ್ಯಾಯಮೂರ್ತಿ ಸದಾಶಿವ ಆಯೋಗ, ಕಾಂತರಾಜ ಆಯೋಗ ಹಾಗೂ ಜೆ. ಸಿ. ಮಾದುಸ್ವಾಮಿ ಸಮಿತಿಗಳು ನೀಡಿರುವ ವರದಿಗಳಲ್ಲಿ ಲಭ್ಯವಿದೆ. ಅವನ್ನು ಪರಿಗಣಿಸಿ ಸಮಸ್ಯೆಯನ್ನು ಬಗೆಹರಿಸಲು ಸಾಧ್ಯವಿತ್ತು. ೩೦ ವರ್ಷಗಳ ಹಿಂದೆಯೇ ಒಳ ಮೀಸಲಾತಿಗೆ ಸಂಬಂಧಪಟ್ಟ ಸಮಸ್ಯೆ ಸರ್ಕಾರಗಳ ಗಮನಕ್ಕೆ ಬಂದ ಕೂಡಲೇ ಬಗೆಹರಿಸುವ ಸಾಧ್ಯತೆಗಳು ಇದ್ದವು. ಆದರೆ ಈ ಸಮಸ್ಯೆಯನ್ನು ಜೀವಂತವಾಗಿ ಇಟ್ಟು ನೂರೊಂದು ಜಾತಿಗಳ ಮಧ್ಯೆ ಅಪನಂಬಿಕೆ ಉಂಟು ಮಾಡಿ ರಾಜಕೀಯ ಲಾಭ ಪಡೆಯಲು ಕಾಂಗ್ರೆಸ್, ಬಿಜೆಪಿ ಜೆಡಿಎಸ್ ಪಕ್ಷಗಳು ಕುತಂತ್ರ ನಡೆಸಿದವು ಎಂದರು.
ದೇಶದಲ್ಲಿ, ರಾಜ್ಯದಲ್ಲಿ ಸರ್ಕಾರಿ ಹುದ್ದೆಗಳ ಖಾಸಗೀಕರಣದಿಂದಾಗಿ, ಸರ್ಕಾರಿ ವಲಯದಲ್ಲಿ ಕೇವಲ ಶೇಕಡ ೧ರಷ್ಟು ಮಾತ್ರ ಉದ್ಯೋಗವಕಾಶಗಳು ಸೃಷ್ಟಿಯಾಗುತ್ತಿದ್ದು, ಉಳಿದ ೯೯% ಉದ್ಯೋಗಗಳು ಖಾಸಗಿ ವಲಯದಲ್ಲಿ ಸೃಷ್ಟಿಯಾಗುತ್ತಿವೆ. ಇಂತಹ ಪರಿಸ್ಥಿತಿಯಲ್ಲಿ ಖಾಸಗಿ ವಲಯದಲ್ಲೂ ಎಸ್. ಸಿ, ಎಸ್. ಟಿ, ಓಬಿಸಿಗಳು ಮೀಸಲಾತಿ ಪಡೆಯಬೇಕಾದದ್ದು ಅನಿವಾರ್ಯವಾಗಿದೆ. ಈ ನಿಟ್ಟಿನಲ್ಲಿ ಎಲ್ಲರೂ ಒಂದುಗೂಡಿ ಹೋರಾಡುವುದು ಅಗತ್ಯವಾಗಿದೆ. ಆದ್ದರಿಂದ ಮೀಸಲಾತಿ ಪ್ರಮಾಣ ಏನೇ ಸಿಕ್ಕರೂ ಮುಂದಿನ ಹೋರಾಟಕ್ಕೆ ನೂರೊಂದು ಪರಿಶಿಷ್ಟ ಜಾತಿಗಳು ಐಕ್ಯತೆ ಕಾಪಾಡಿಕೊಳ್ಳಬೇಕೆಂದು ಆಲ್ ಇಂಡಿಯಾ ಬಹುಜನ ಸಮಾಜ ಪಾರ್ಟಿ ಮನವಿ ಮಾಡುತ್ತದೆ. ಮತ್ತೊಂದು ಮುಖ್ಯವಾದ ವಿಷಯವೇನೆಂದರೆ ಪರಿಶಿಷ್ಟ ಜಾತಿ, ಪಂಗಡದಂತೆ ಅತಿ ಹಿಂದುಳಿದ ವರ್ಗಗಳಿಗೆ ಕರ್ನಾಟಕದಲ್ಲಿ ಮೀಸಲಾತಿಯ ಪ್ರಮಾಣದಲ್ಲಿ ಅನ್ಯಾಯವಾಗಿದೆ. ಆದಕಾರಣ ಮೇಲ್ಜಾತಿಗಳ ಒತ್ತಡಕ್ಕೆ ಮಣಿಯದೆ ರಾಜ್ಯ ಸರ್ಕಾರವು ಕಾಂತರಾಜ ವರದಿಯನ್ನು ತಕ್ಷಣದಿಂದ ಜಾರಿಗೆ ತರಬೇಕೆಂದು ಆಲ್ ಇಂಡಿಯಾ ಬಹುಜನ ಸಮಾಜ ಪಾರ್ಟಿ ಒತ್ತಾಯಿಸುತ್ತದೆ ಎಂದು ಹೇಳಿದರು.ಇನ್ನು ನಮ್ಮ ಪಾರ್ಟಿಗೆ ರಾಜ್ಯ ಸಮಿತಿ ನೇಮಕಾತಿ ಆದೇಶ ಮಾಡಿದ್ದು, ಶಿವಮ್ಮ ರಾಜ್ಯ ಉಪಾಧ್ಯಕ್ಷರ, ದೇವರಾಜು ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆಗೊಂಡಿದ್ದಾರೆ. ಜಿಲ್ಲಾ ಸಮಿತಿ ಸಂಯೋಜಕರಾಗಿ ದೇವರಾಜು, ಜಿಲ್ಲಾಧ್ಯಕ್ಷರಾಗಿ ಹೆಚ್ ಎಸ್. ಕುಮಾರ್ ಗೌರವ್, ಉಪಾಧ್ಯಕ್ಷರಾಗಿ ಎ.ಎಸ್. ರಂಗಯ್ಯ ಅಡಗೂರು, ರವಿಕುಮಾರ್, ಜಿಲ್ಲಾ ಪ್ರದಾನ ಕಾರ್ಯದರ್ಶಿ ದೇವರಾಜು, ಲಕ್ಷ್ಮೀಶ್, ರಾಜು ಇವರನ್ನು ಆಯ್ಕೆ ಮಾಡಲಾಗಿದೆ ಎಂದು ತಿಳಿಸಿದರು. ಪತ್ರಿಕಾಗೋಷ್ಠಿಯಲ್ಲಿ ಆಲ್ ಇಂಡಿಯಾ ಬಹುಜನ ಸಮಾಜ ಪಾರ್ಟಿ ಜಿಲ್ಲಾಧ್ಯಕ್ಷ ಹೆಚ್.ಎಸ್. ಕುಮಾರ್ ಗೌರವ್, ಮಾದಿಗ ದಂಡೋರ ಜಿಲ್ಲಾಧ್ಯಕ್ಷ ಟಿ.ಆರ್. ವಿಜಯ ಕುಮಾರ್, ಜಿಲ್ಲಾ ಸಮಿತಿ ಸಂಯೋಜಕ ದೇವರಾಜು ತಿರುಪತಿಹಳ್ಳಿ, ಉಪಾಧ್ಯಕ್ಷ ಎ.ಎಸ್. ರಂಗಯ್ಯ, ಕಾರ್ಯದರ್ಶಿ ದೇವರಾಜು ಮೊದಲಾದವರಿದ್ದರು.