ಕನ್ನಡಪ್ರಭ ವಾರ್ತೆ ಮಡಿಕೇರಿ
ಮಳೆಗಾಲದಲ್ಲಿ ಕೊಡಗು ಜಿಲ್ಲೆಯಲ್ಲಿ ಕೆಸರು ಗದ್ದೆ ಕ್ರೀಡಾಕೂಟಗಳು ಆಯೋಜನೆಗೊಳ್ಳುತ್ತದೆ. ಕ್ರೀಡಾಪ್ರೇಮಿಗಳು ಕೆಸರಿನಲ್ಲಿ ಆಡುತ್ತಾ, ಓಡುತ್ತಾ, ಕುಣಿಯುತ್ತ ಕೆಸರಿನೋಕುಳಿಯಲ್ಲಿ ಮಿಂದೇಳುತ್ತಾರೆ. ಅದೇ ರೀತಿಯ ಒಂದು ಕ್ರೀಡಾಕೂಟಕ್ಕೆ ಕೊಡಗು ಜಿಲ್ಲಾ ಮರಾಠ/ಮರಾಟಿ ಸಮಾಜ ಸೇವಾ ಸಂಘದ ವತಿಯಿಂದ ಸಮುದಾಯಬಾಂಧವರಿಗಾಗಿ ಮಡಿಕೇರಿ ತಾಲೂಕಿನ 2ನೇ ಮೊಣ್ಣಂಗೇರಿಯ ಮರಾಟಿ ಸೋಮಪ್ಪನವರ ಗದ್ದೆಯಲ್ಲಿ ಆಯೋಜಿಸಿದ್ದ ಗ್ರಾಮೀಣ ಗುಡ್ಡಗಾಡು ಕೆಸರು ಗದ್ದೆ ಕ್ರೀಡಾಕೂಟ ಸಾಕ್ಷಿಯಾಯಿತು.
ಕೆಸರು ಗದ್ದೆಯಲ್ಲಿ ಕ್ರೀಡಾ ಪ್ರೇಮಿಗಳು ತಮ್ಮ ಕ್ರೀಡಾ ಪ್ರತಿಭೆಯನ್ನು ಹೊರ ಹಾಕಿದರು. ಆಟಗಾರರ ಏಳುಬೀಳುಗಳನ್ನು ಪ್ರೇಕ್ಷಕರಿಗೆ ಮನೋರಂಜನೆಯ ರಸದೌತಣವನ್ನು ನೀಡಿತ್ತು. ಚುಮು ಚುಮು ಚಳಿಯ ನಡುವೆ ಮಳೆಯ ಸಿಂಚನ ಕೂಡ ಕೀಡಾಪಟುಗಳಿಗೆ ಮತ್ತಷ್ಟು ಉತ್ತೇಜನ ನೀಡಿತ್ತು. ಮೊಣಕಾಲಿನ ವರೆಗೆ ನೀರು ತುಂಬಿದ ಕೆಸರು ಗದ್ದೆಯಲ್ಲಿ ಹಗ್ಗಜಗ್ಗಾಟ, ಹಿಮ್ಮುಖ ಓಟ, ಗೂಟ ಓಟ, ಮಡಿಕೆ ಹೊಡೆಯುವುದು, ಪಾಸಿಂಗ್ ದಿ ಬಾಲ್, ಕೆಸರುಗದ್ದೆಯಲ್ಲಿ ವಾಲಗ ಕುಣಿತ ಸ್ಪರ್ಧೆಗಳು ರೋಚಕವಾಗಿತ್ತು.ಕಾರ್ಯಕ್ರಮಕ್ಕೆ ಚಾಲನೆ: ಕೊಡಗು ಜಿಲ್ಲಾ ಮರಾಠ/ಮರಾಟಿ ಸಮಾಜ ಸೇವಾ ಸಂಘದ ಸ್ಥಾಪಕಾಧ್ಯಕ್ಷ ವಾಮನ ನಾಯ್ಕ್ ಉದ್ಘಾಟಿಸಿದರು. ಕ್ರೀಡಾಕೂಟದ ಅಧ್ಯಕ್ಷತೆಯನ್ನು ಕೊಡಗು ಜಿಲ್ಲಾ ಮರಾಠ-ಮರಾಟಿ ಸಮಾಜ ಸೇವಾ ಸಂಘ ಜಿಲ್ಲಾಧ್ಯಕ್ಷ ಎಂ.ಎಂ. ಪರಮೇಶ್ವರ್ ವಹಿಸಿದ್ದರು. ಸಂಘದ ಉಪಾಧ್ಯಕ್ಷೆ ದೇವಕ್ಕಿ.ಜಿ.ಆರ್.ನಾಯ್ಕ್, ಜಿಲ್ಲಾ ಸಂಘದ ಉಪ ಸಮಿತಿಗಳ ಅಧ್ಯಕ್ಷರಾದ ಎಂ.ಎಸ್.ವೆಂಕಪ್ಪ, ಧನಂಜಯ, ನೀರಲ್ ಕುಮಾರ್, ಕೆ.ಜಿ.ಹೊನ್ನಪ್ಪ, 2ನೇ ಮೊಣ್ಣಂಗೇರಿ ಗ್ರಾಮ ಪಂಚಾಯಿತಿ ಸದಸ್ಯೆ ಪುಷ್ಪಾವತಿ, ಮಹಿಳಾ ವೇದಿಕೆ ಅಧ್ಯಕ್ಷೆ ರತ್ನಮಂಜರಿ, ಯುವ ವೇದಿಕೆ ಅಧ್ಯಕ್ಷ ಎಂ.ಆರ್.ಮೋಹನ್, ಬ್ಯಾಂಕ್ ಆಫ್ ಬರೋಡದ ಮ್ಯಾನೇಜರ್ ಹಾಗೂ ಸಂಘದ ಸದಸ್ಯೆ ಸರಸ್ವತಿ ಬಾಲಕೃಷ್ಣ ಇತರರಿದ್ದರು.
ಜಿಲ್ಲಾಡಳಿತದಿಂದ ನಿರ್ಮಾಣ ಮಾಡುತ್ತಿರುವ ಕಟ್ಟಡ ಕಾಮಗಾರಿಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಅವರು, ಸರ್ಕಾರದಿಂದ ಬರಬೇಕಾಗಿರುವ ಅನುದಾನದ ಬಿಡುಗಡೆ ಬಗ್ಗೆ ಚರ್ಚಿಸಲು ಸಹಕರಿಸುವುದಾಗಿ ತಿಳಿಸಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಜಿಲ್ಲಾಧ್ಯಕ್ಷರಾದ ಎಂ.ಎಂ.ಪರಮೇಶ್ವರ್, ಮಾಸಿಕ ಸಭೆಯಲ್ಲಿ ತೆಗೆದುಕೊಂಡ ತೀರ್ಮಾನದಂತೆ 2ನೇ ಮೊಣ್ಣಂಗೇರಿಯ ಉಪಸಮಿತಿಯ ಪದಾಧಿಕಾರಿಗಳು ಉತ್ತಮವಾಗಿ ಕ್ರೀಡಾಕೂಟ ಆಯೋಜನೆ ಮಾಡಿದ್ದಾರೆ. ಕಾರ್ಯಕ್ರಮ ಯಶಸ್ವಿಯಾಗಲು ಸಂಪೂರ್ಣವಾಗಿ ಜನಾಂಗಬಾಂಧವರು ಸಹಕಾರ ನೀಡಿದ್ದಾರೆ. ಉಪಸಮಿತಿಗಳ ಪ್ರಾಮಾಣಿಕ ಪ್ರಯತ್ನದ ಫಲವಾಗಿ ಇಂದು ಕಾರ್ಯಕ್ರಮ ಯಶಸ್ವಿಯಾಗಿದ್ದು, ಇಂತಹ ಕಾರ್ಯಕ್ರಮಕ್ಕೆ ಜನಾಂಗಬಾಂಧವರು ಹೆಚ್ಚಿನ ಜನಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕೆಂದು ಮನವಿ ಮಾಡಿದರು.