ಕನ್ನಡಪ್ರಭ ವಾರ್ತೆ ಮಂಗಳೂರು
‘ರೆಡ್ ರಿಬ್ಬನ್ ರನ್- ಯೂತ್ ಫಾರ್ ಎಚ್‌ಐವಿ/ ಏಡ್ಸ್’ ಘೋಷಣೆಯೊಂದಿಗೆ ಎಚ್‌ಐವಿ/ಏಡ್ಸ್ ಜಾಗೃತಿಗಾಗಿ ಭಾನುವಾರ ನಗರದಲ್ಲಿ ವಿದ್ಯಾರ್ಥಿಗಳ ಮ್ಯಾರಥಾನ್ ಸ್ಪರ್ಧೆ ನಡೆಯಿತು.ಮಹಿಳಾ ವಿಭಾಗ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನವನ್ನು ಶ್ರೀದೇವಿ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಶ್ರೇಯಾ, ದ್ವಿತೀಯ ಬಹುಮಾನವನ್ನು ವಿವೇಕಾನಂದ ಕಾಲೇಜಿನ ವಿದ್ಯಾ, ತೃತೀಯ ಬಹುಮಾನವನ್ನು ಸಂತ ಅಲೋಶಿಯಸ್ ಕಾಲೇಜಿನ ವಿಸ್ಮಯಾ ಶೆಟ್ಟಿ ಪಡೆದರು.ಪುರುಷರ ವಿಭಾಗದಲ್ಲಿ ಪುತ್ತೂರು ಸ್ವಾಮಿ ವಿವೇಕಾನಂದ ಕಾಲೇಜಿನ ರಂಗಣ್ಣ ಪ್ರಥಮ, ಕೆವಿಜಿ ಸುಳ್ಯ ಕಾಲೇಜಿನ ತಿಶಾನ್ ಮಾದಪ್ಪ ದ್ವಿತೀಯ, ಶ್ರೀನಿವಾಸ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಅಕ್ಷಯ ತೃತೀಯ ಬಹುಮಾನ ಪಡೆದರು.
ದಕ್ಷಿಣ ಕನ್ನಡ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಏಡ್ಸ್ ತಡೆಗಟ್ಟುವಿಕೆ ಮತ್ತು ನಿಯಂತ್ರಣ ಘಟಕ, ಜಿಲ್ಲಾ ಯುವಜನ ಸಬಲೀಕರಣ ಹಾಗೂ ಕ್ರೀಡಾ ಇಲಾಖೆ, ನೆಹರು ಯುವಕೇಂದ್ರ, ರಾಷ್ಟ್ರೀಯ ಸೇವಾ ಯೋಜನೆ ಘಟಕ, ರೆಡ್ ರಿಬ್ಬನ್ ಕ್ಲಬ್‌ಗಳು, ಡೆಕಾಥ್ಲಾನ್, ಭಾರತ್ ಮಾಲ್, ಸ್ಕೂಲ್ ಬುಕ್ ಕಂಪೆನಿ, ಲಯನ್ಸ್ ಕ್ಲಬ್, ಯಂಗ್ ಇಂಡಿಯಾ ಮಂಗಳೂರು, ಪ್ರಗತಿ ಸ್ಟಡಿ ಸೆಂಟರ್ ಪುತ್ತೂರು ಸಂಯುಕ್ತ ಆಶ್ರಯದಲ್ಲಿ ಈ ಸ್ಪರ್ಧೆ ಜರುಗಿತು.ನಗರದ ಮಂಗಳಾ ಕ್ರೀಡಾಂಗಣದಲ್ಲಿ ನಡೆದ ಉದ್ಘಾಟನಾ ಸಮಾರಂಭದಲ್ಲಿ ಅಪರ ಜಿಲ್ಲಾಧಿಕಾರಿ ಸಂತೋಷ್ ಕುಮಾರ್ ಮ್ಯಾರಥಾನ್‌ಗೆ ಹಸಿರು ನಿಶಾನೆ ತೋರಿಸಿದರು. ಜಿಲ್ಲಾ ಆರೋಗ್ಯ ಅಧಿಕಾರಿ ಡಾ.ಎಚ್.ಆರ್. ತಿಮ್ಮಯ್ಯ, ನೆಹರು ಯುವಕೇಂದ್ರ ಆಡಳಿತ ಅಧಿಕಾರಿ ಜಗದೀಶ್ ಕೆ., ಜಿಲ್ಲಾ ಯುವಜನ ಸಬಲೀಕರಣ ಇಲಾಖೆ ಸಹ ನಿರ್ದೇಶಕ ಪ್ರದೀಪ್ ಡಿಸೋಜ, ಮಂಗಳೂರು ವಿವಿ ರಾಷ್ಟ್ರೀಯ ಸೇವಾ ಯೋಜನೆಯ ಮಂಗಳೂರು ಕಾರ್ಯಕ್ರಮ ಅನುಷ್ಠಾನ ಅಧಿಕಾರಿ ಡಾ.ಶೇಷಪ್ಪ ಕೆ. ಮತ್ತಿತರರು ಇದ್ದರು.
ಜಿಲ್ಲಾ ಆರೋಗ್ಯ ಶಿಕ್ಷಣ ಅಧಿಕಾರಿ ಜ್ಯೋತಿ ನಿರೂಪಿಸಿದರು. ಜಿಲ್ಲಾ ಕಾರ್ಯಕ್ರಮ ಮೇಲ್ವಿಚಾರಕ ಮಹೇಶ್ ವಂದಿಸಿದರು.