ಹೆದ್ದಾರಿ ವಾಹನಗಳಿಗೆ ಮಚ್ಚು ಝಳಪಿಸಿದ ಮರವಂಜಿ ಕಿಡಿಗೇಡಿ

KannadaprabhaNewsNetwork |  
Published : May 10, 2026, 01:30 AM IST
9ಕೆಡಿವಿಜಿ1, 2, 3, 4, 5, 6, 7, 8, 9, 10, 11-ಚನ್ನಗಿರಿ ತಾ. ಮರವಂಜಿ ಗ್ರಾಮದಲ್ಲಿ ಚನ್ನಗಿರಿ-ಕಡೂರು ರಾಜ್ಯ ಹೆದ್ದಾರಿಯಲ್ಲಿ ಮಚ್ಚು ಹಿಡಿದು ವಾಹನಗಳು, ಚಾಲಕರು, ಪ್ರಯಾಣಿಕರಿಗೆ ತೊಂದರೆ ಕೊಡುತ್ತಿರುವುದು ಕಿಡಿಗೇಡಿ ಯುವಕ. | Kannada Prabha

ಸಾರಾಂಶ

ಕೈಯಲ್ಲಿ ಹರಿತ ಮಚ್ಚನ್ನು ಹಿಡಿದ ಕಿಡಿಗೇಡಿಯೊಬ್ಬ ರಾಜ್ಯ ಹೆದ್ದಾರಿಯಲ್ಲಿ ಸಾಗುತ್ತಿದ್ದ ಕಾರು, ಅಪೆ ವಾಹನ, ಟಿಟಿ, ಬಸ್‌, ಲಾರಿ ಹೀಗೆ ವಾಹನಗಳನ್ನು ತಡೆದು, ಮಚ್ಚನ್ನು ಝಳಪಿಸುತ್ತ ಭಯ ಹುಟ್ಟು ಹಾಕಿದ ಘಟನೆ ಚನ್ನಗಿರಿ ತಾಲೂಕಿನ ಮರವಂಜಿ ಗ್ರಾಮದಲ್ಲಿ ನಡೆದಿದೆ.

- ಗ್ರಾಪಂ ಕಚೇರಿ ಎದುರು ಪಾನಮತ್ತ ಯುವಕನಿಗೆ ವಾಹನಗಳ ಗಾಜು ಒಡೆಯಲು ಪ್ರಚೋದನೆ! - - -

ಕನ್ನಡಪ್ರಭ ವಾರ್ತೆ ದಾವಣಗೆರೆ

ಕೈಯಲ್ಲಿ ಹರಿತ ಮಚ್ಚನ್ನು ಹಿಡಿದ ಕಿಡಿಗೇಡಿಯೊಬ್ಬ ರಾಜ್ಯ ಹೆದ್ದಾರಿಯಲ್ಲಿ ಸಾಗುತ್ತಿದ್ದ ಕಾರು, ಅಪೆ ವಾಹನ, ಟಿಟಿ, ಬಸ್‌, ಲಾರಿ ಹೀಗೆ ವಾಹನಗಳನ್ನು ತಡೆದು, ಮಚ್ಚನ್ನು ಝಳಪಿಸುತ್ತ ಭಯ ಹುಟ್ಟು ಹಾಕಿದ ಘಟನೆ ಚನ್ನಗಿರಿ ತಾಲೂಕಿನ ಮರವಂಜಿ ಗ್ರಾಮದಲ್ಲಿ ನಡೆದಿದೆ.

ಮರವಂಜಿ ಗ್ರಾಮದ ಗ್ರಾಪಂ ಕಚೇರಿ ಎದುರಿನ ಚನ್ನಗಿರಿ-ಬೀರೂರು ರಾಜ್ಯ ಹೆದ್ದಾರಿಯಲ್ಲಿ ಗ್ರಾಮದ ಕಿಡಿಗೇಡಿಯೊಬ್ಬ ಮಚ್ಚನ್ನು ಹಿಡಿದು, ಕುಡಿದ ಮತ್ತಿನಲ್ಲೋ ಅಥವಾ ಹಣ ವಸೂಲಿ ಮಾಡಲೆಂದೇ ದಾರಿಯಲ್ಲಿ ಸಾಗುತ್ತಿದ್ದ ಲಘು ವಾಹನ, ಭಾರೀ ವಾಹನ, ಸರಕು ಸಾಗಾಣಿಕೆ ವಾಹನಗಳನ್ನು ತಡೆದು ಅವುಗಳ ಚಾಲಕರು, ನಿರ್ವಾಹಕರು, ಪ್ರಯಾಣಿಕರಿಗೆ ಅವಾಚ್ಯವಾಗಿ ನಿಂದಿಸಿದ ದೃಶ್ಯಗಳು ಸೋಷಿಯಲ್ ಮೀಡಿಯಾದಲ್ಲೂ ವರದಿಯಾಗಿದೆ.

ಮರವಂಜಿ ಗ್ರಾಮದ ಕಾರ್ತಿಕ್ ಎಂಬ ಯುವಕನೇ ಮಚ್ಚು ಹಿಡಿದು, ವಾಹನಗಳ ಕಡೆಗೆ ಮಚ್ಚು ತೋರಿಸಿ, ಬೆದರಿಸುವ ದೃಶ್ಯ ಸಮೀಪದಲ್ಲೇ ಇದ್ದ ಕೆಲವರು ವೀಡಿಯೋ ಮಾಡಿಕೊಂಡು, ಆತನಿಗೆ ಪ್ರಚೋದಿಸುತ್ತಿದ್ದುದು, ಕಿಡಿಗೇಡಿ ಯುವಕ ಮಾಡುತ್ತಿದ್ದ ಕುಕೃತ್ಯ ತಡೆದು ಆತನಿಗೆ ಬೈದು ಬುದ್ಧಿ ಹೇಳುವ ಕೆಲಸ ಯಾರೂ ಮಾಡಿಲ್ಲ. ಸದ್ಯಕ್ಕೆ ಗ್ರಾಮದಲ್ಲಿ ಕಿಡಿಗೇಡಿ ಮಾಡುತ್ತಿರುವ ಕೃತ್ಯ ಈಗ ಎಲ್ಲರ ಕೆಂಗಣ್ಣಿಗೆ ಗುರಿಯಾಗಿದೆ.

ಕಾರ್ತಿಕ್‌ನ ಪುಂಡಾಟದಿಂದ ಬೆಚ್ಚಿಬಿದ್ದ ಜನರು ಏನು ಮಾಡಬೇಕೆಂದು ತೋಚದೇ ಕಂಗಾಲಾದರೆ, ದೃಶ್ಯದ ವೀಡಿಯೋ ಮಾಡಿಕೊಳ್ಳುತ್ತಿದ್ದ ಕಿಡಿಗೇಡಿಗಳು ವಾಹನಗಳ ಗಾಜನ್ನು ಒಡೆಯುವಂತೆ ಆತನಿಗೆ ಪ್ರಚೋದಿಸುತ್ತಿದ್ದ ಧ್ವನಿಗಳೂ ವೀಡಿಯೋದಲ್ಲಿ ಕೇಳಿಬರುತ್ತಿವೆ. ಈ ಘಟನೆ ನೋಡಿದರೆ ಚನ್ನಗಿರಿ ಪೊಲೀಸರ ಬಗ್ಗೆ ಇಂತಹ ಕಿಡಿಗೇಡಿಗಳಿಗೆ ಯಾವುದೇ ಭಯವೇ ಇಲ್ಲವೇನೋ ಎಂದೆನಿಸುತ್ತದೆ.

ಇಂತಹ ಕುಕೃತ್ಯ ಎಸಗಿ, ಜನರಲ್ಲಿ ಭಯ ಹುಟ್ಟು ಹಾಕಿದ್ದ ಕಿಡಿಗೇಡಿ ಹಾಗೂ ಆತನಿಗೆ ಪ್ರಚೋದಿಸಿದವರ ವಿರುದ್ಧವೂ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡು, ಅಂತಹವರನ್ನು ತಿದ್ದಿ ತೀಡುವ ಕೆಲಸ ಪೊಲೀಸ್ ಇಲಾಖೆಯಿಂದ ‍‍‍ಆಗಬೇಕಿದೆ. ಈ ಬಗ್ಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಲು ಅಧೀನ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಬೇಕಾಗಿದೆ.

- - -

(ಬಾಕ್ಸ್‌) * ಕಿಡಿಗೇಡಿಗಳ ಕುಕೃತ್ಯ, ಪೊಲೀಸ್ ಭಯವಿಲ್ಲವೇ? ದಾವಣಗೆರೆ ನಗರ, ಜಿಲ್ಲೆಯಲ್ಲಿ ಕಿಡಿಗೇಡಿಗಳು ಮತ್ತೆ ಬಾಲ ಬಿಚ್ಚಲು ಶುರುಮಾಡಿದ್ದಾರೆ. ಯಾರದ್ದೋ ಜನ್ಮದಿನವೆಂದು ರಾಜರೋಷವಾಗಿ ರಸ್ತೆಗಳಲ್ಲೇ ಕೇಕ್ ಕತ್ತರಿಸುವುದು, ನಡು ರಾತ್ರಿ ಪಟಾಕಿ ಸಿಡಿಸಿ, ಗದ್ದಲ ಎಬ್ಬಿಸುವುದು, ಕಂಠಪೂರ್ತಿ ಕುಡಿದು ಜನವಸತಿ ಪ್ರದೇಶಗಳು ಮತ್ತಿತರೆ ಕಡೆಗಳಲ್ಲಿ ಗಲಾಟೆ ಮಾಡುವುದು ಹೆಚ್ಚಾಗುತ್ತಿದೆ. ಈ ಬೆಳವಣಿಗೆ ಜಿಲ್ಲಾ ಪೊಲೀಸ್ ಇಲಾಖೆ ಗಂಭೀರವಾಗಿ ಪರಿಗಣಿಸಬೇಕಾಗಿದೆ.

ಅತಿ ವೇಗ, ಅಜಾಗರೂಕತೆ ವಾಹನ ಚಾಲನೆ ಮಾಡುವವರು, ತಮ್ಮ ತಪ್ಪಿದ್ದರೂ ವಯಸ್ಸನ್ನೂ ನೋಡದೇ, ಬಾಯಿಗೆ ಬಂದಂತೆ ಮಾತನಾಡುವ ಚಿತ್ರ-ವಿಚಿತ್ರ ಹೇರ್ ಕಟ್ಟಿಂಗ್ ಮಾಡಿಸಿಕೊಂಡು, ಸೊಂಟದ ಮೇಲೆ ಸರಿಯಾಗಿ ನಿಲ್ಲದ ಪ್ಯಾಂಡ್, ಅರೆಬರೆ ಕಿತ್ತುಹೋದ ಚಡ್ಡಿ, ಟೀ ಶರ್ಟ್‌ಗಳನ್ನು ಧರಿಸಿದ ವಿಚಿತ್ರ ವರ್ತನೆಯ ಕಿಡಿಗೇಡಿಗಳನ್ನೂ ಮಟ್ಟಹಾಕುವ ಕೆಲಸವಾಗಬೇಕಿದೆ. ಸದ್ಯ ಈಗಿನ ಯುವಪೀಳಿಗೆಗೆ ಪೊಲೀಸ್ ಅಂದರೆ ಭಯವೇ ಇಲ್ಲದಂತಾಗಿದೆ. ಪೊಲೀಸರು ತಮ್ಮ ಲಾಠಿಗೆ ಕೆಲಸ ಕೊಡದಿರುವುದೂ ಇದಕ್ಕೆ ಕಾರಣವಾಗಿದೆ.

ಹಿಂದೆಲ್ಲಾ ಎಸ್‌ಐ ಆದವರು ಸ್ವತಃ ಬೈಕ್‌, ಜೀಪುಗಳಲ್ಲಿ ಸುತ್ತಾಡುತ್ತಿದ್ದರು. ಗಸ್ತು ಪೊಲೀಸರು ಯಾವುದೇ ಕರೆ ಬಂದರೆ ತಕ್ಷಣಕ್ಕೆ ಬಂದು ಸ್ಪಂದಿಸುತ್ತಿದ್ದರು. ಆದರೆ, ಬಾರ್ ಅಂಡ್ ರೆಸ್ಟೋರೆಂಟ್, ನಾನ್ ವೆಜ್‌ ಹೋಟೆಲ್‌ಗಳು, ಬಾರ್‌ಗಳು ಜನವಸತಿ ಪ್ರದೇಶ, ಸರ್ಕಾರಿ ಬಾಲಕಿಯರು, ಯುವತಿಯರ ಹಾಸ್ಟೆಲ್‌ಗಳ ಬಳಿ ಇವೆ. ಆದರೆ, ಅಂತಹ ಕಡೆಯೂ ಪೊಲೀಸರ ಗಸ್ತು ಇಲ್ಲ. ರಾತ್ರಿ ಮದ್ಯ ಸೇವಿಸಿ ಗಲಾಟೆ ಮಾಡುವವರು, ಜನವಸತಿ ಪ್ರದೇಶದಲ್ಲಿ ಕೇಕೆ ಹೊಡೆಯುವ ಕಿಡಿಗೇಡಿಗಳನ್ನು ಪ್ರಶ್ನಿಸಿದರೆ ಜಗಳಕ್ಕೆ ಇಳಿಯುವುದು ಸಾಮಾನ್ಯವಾಗಿದೆ. ಇನ್ನಾದರೂ ಪೊಲೀಸರು ಸಾರ್ವಜನಿಕವಾಗಿ ಲಾಠಿಗೆ ಕೆಲಸ ಕೊಟ್ಟು, ಇಲಾಖೆ ಏನು ಮಾಡಬಲ್ಲದು ಎಂಬುದನ್ನು ತೋರಿಸಬೇಕು. ಅಲ್ಲಿಯವರೆಗೂ ಇಂತಹ ಕಿಡಿಗೇಡಿಗಳಿಗೆ ಪೊಲೀಸರ ಬಗ್ಗೆ ಭಯ ಬರುವುದಿಲ್ಲ ಎಂಬ ಮಾತು ಸಾರ್ವಜನಿಕರಿಂದ ಸಹಜವಾಗಿ ಕೇಳಿಬರುತ್ತಿದೆ.

- - -

-9ಕೆಡಿವಿಜಿ1, 2, 3, 4, 5, 6, 7, 8, 9, 10, 11:

ಚನ್ನಗಿರಿ ತಾ. ಮರವಂಜಿ ಗ್ರಾಮದಲ್ಲಿ ಚನ್ನಗಿರಿ-ಕಡೂರು ರಾಜ್ಯ ಹೆದ್ದಾರಿಯಲ್ಲಿ ಕಿಡಿಗೇಡಿಯೊಬ್ಬ ಮಚ್ಚು ಹಿಡಿದು ವಾಹನಗಳು, ಚಾಲಕರು, ಪ್ರಯಾಣಿಕರಿಗೆ ಬೆದರಿಸುತ್ತಿರುವುದು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಭ್ರಷ್ಟಾಚಾರದ ವಿರುದ್ಧ ವಾಟಾಳ್ ಪಕ್ಷದಿಂದ ರಾಜ್ಯಾದ್ಯಂತ ಹೋರಾಟ: ವಾಟಾಳ್ ನಾಗರಾಜ್
ಮಳೆಗಾಗಿ ಪ್ರಾರ್ಥಿಸಿ ಮಳೆರಾಯನ ಹಬ್ಬ ಆಚರಿಸಿದ ಅರಕೆರೆ ಗ್ರಾಮಸ್ಥರು