ಹೊಸಪೇಟೆ: ಕೇಂದ್ರ ಪುರಸ್ಕೃತ ಸ್ವದೇಶಿ ದರ್ಶನ್ 2 ರಡಿ ವಿಶ್ವ ಪಾರಂಪರಿಕ ಹಂಪಿಗೆ ಬರುವ ಪ್ರವಾಸಿಗರನ್ನು ಹೆಚ್ಚಿಸುವ ನಿಟ್ಟಿನಲ್ಲಿ ಸ್ಮಾರಕಗಳು ಮತ್ತು ಪ್ರವಾಸಿ ತಾಣಗಳ ಬಳಿ ಪ್ರಯಾಣಿಕರ ಸುರಕ್ಷತೆಯ ತಂಗುದಾಣ ಅನುಷ್ಠಾನಗೊಳಿಸಲು ಸಿದ್ಧತೆ ಮಾಡಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ ತಾಕೀತು ಮಾಡಿದರು.ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸೋಮವಾರ ಟ್ರಾವೆಲ್ಲರ್ ನೂಕ್ ಅನುಷ್ಠಾನಗೊಳಿಸುತ್ತಿರುವ ಕಾಮಗಾರಿಗಳ ಕುರಿತು ಆಯೋಜಿಸಲಾಗಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಸ್ವದೇಶಿ ದರ್ಶನ್ 2.0 ಯೋಜನೆಯಡಿ ಹಂಪಿಯ ಮಯೂರ ಭುವನೇಶ್ವರಿ ಹೋಟೆಲ್ ಹತ್ತಿರ, ಚಂದ್ರಕೇಶ್ವರ ದೇವಸ್ಥಾನ, ವಿಜಯ ವಿಠ್ಠಲ ದೇವಸ್ಥಾನ, ವಿರಪಾಕ್ಷ ದೇವಸ್ಥಾನ ಸೇರಿದಂತೆ ವಿವಿಧ ಸ್ಮಾರಕಗಳು ಮತ್ತು ಪ್ರವಾಸಿ ತಾಣಗಳ 20 ಸ್ಥಳಗಳಲ್ಲಿ ’ಟ್ರಾವೆಲ್ಲರ್ ನೂಕ್’ ಸ್ಥಾಪಿಸಬೇಕು. ಅನುಷ್ಠಾನಗೊಳಿಸಲು ಯಾವುದೇ ರೀತಿಯ ಸ್ಥಳದ ಅಭಾವ ಅಥವಾ ಇನ್ನಿತರೆ ಅಡೆತಡೆ ಉಂಟಾದಲ್ಲಿ ತ್ವರಿತವಾಗಿ ಪರಿಹಾರ ಕಂಡುಕೊಂಡು ನಿಗಧಿತ ಅವಧಿಯೊಳಗೆ ಪೂರ್ಣಗೊಳಿಸಬೇಕು ಎಂದರು.
ಸಭೆಯಲ್ಲಿ ಜಿಪಂ ಸಿಇಒ ನೋಂಗ್ಜಾಯ್ ಮಹ್ಮದ್ ಅಲಿ ಅಕ್ರಂ ಷಾ, ಹೆಚ್ಚುವರಿ ಪೋಲಿಸ್ ವರಿಷ್ಠಾಧಿಕಾರಿ ಮಂಜುನಾಥ, ನಗರಸಭೆ ಪೌರಾಯುಕ್ತ ಶಿವಕುಮಾರ್, ಹಂಪಿಯ ಪುರಾತತ್ವ ಇಲಾಖೆ ಅಧಿಕಾರಿಗಳು ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.