ಕನ್ನಡಪ್ರಭ ವಾರ್ತೆ ಮಳವಳ್ಳಿ
ರಥೋತ್ಸವದ ಅಂಗವಾಗಿ ಲಕ್ಷ್ಮಿ ಹಾಗೂ ನರಸಿಂಹಸ್ವಾಮಿಗೆ ವಿವಿಧ ದ್ರವ್ಯಗಳಿಂದ ಅಭಿಷೇಕ, ಮಜ್ಜನ ಸೇವೆಗಳನ್ನು ನೆರವೇರಿಸಿದ ನಂತರ ವಿವಿಧ ಆಭರಣ, ಹೂವು ಹಾಗೂ ಹಣ್ಣುಗಳಿಂದ ದೇವರನ್ನು ಅಲಂಕರಿಸಿ ಭಕ್ತರ ದರ್ಶನಕ್ಕೆ ಅನುವು ಮಾಡಿಕೊಡಲಾಯಿತು.
ನರಸಿಂಹಸ್ವಾಮಿ ಉತ್ಸವ ಮೂರ್ತಿಯನ್ನು ಹೂವಿನಿಂದ ಆಲಂಕರಿಸಿ ವಿಶೇಷ ಪೂಜೆಯೊಂದಿಗೆ ರಥೋತ್ಸವದಲ್ಲಿ ಪ್ರತಿಷ್ಠಾಪಿಸಿ ತಹಸೀಲ್ದಾರ್ ಲೋಕೇಶ್ ನೇತೃತ್ವದಲ್ಲಿ ರಥೋತ್ಸವಕ್ಕೆ ಚಾಲನೆ ನೀಡುತ್ತಿದ್ದಂತೆ ಸಾವಿರಾರು ಭಕ್ತರು ಹಣ್ಣು ಜವನ ಎಸೆತು ಭಕ್ತಿ ಸಮರ್ಪಿಸಿದರು.ಲಕ್ಷ್ಮಿ ನರಸಿಂಹಸ್ವಾಮಿ ದೇವಸ್ಥಾನದ ಸುತ್ತಲು ಒಂದು ಸುತ್ತು ರಥವನ್ನು ಎಳೆಯಲಾಯಿತು. ಮಹದೇಶ್ವರ, ದಾಸಪ್ಪ, ಜೋಗಪ್ಪ ಗುಡ್ಡರು ತಮ್ಮ ದೇವರ ಬಿರುದುಗಳೊಂದಿಗೆ ರಥದ ಮೆರವಣಿಗೆಯಲ್ಲಿ ಪಾಲ್ಗೊಂಡು ಬ್ರಹ್ಮ ರಥೋತ್ಸವನ್ನು ಯಶಸ್ವಿಯಾಗಿಸಿದರು.
ವೈಭವದ ರಥೋತ್ಸವಕ್ಕೆ ಕರ್ನಾಟಕದ ವಿವಿಧ ಜಿಲ್ಲೆಗಳು ಮಾತ್ರವಲ್ಲದೆ, ನೆರೆ ರಾಜ್ಯಗಳಾದ ತಮಿಳುನಾಡು, ಆಂಧ್ರಪ್ರದೇಶಗಳಿಂದಲೂ ಸಾವಿರಾರು ಭಕ್ತರು ಆಗಮಿಸಿ ಸ್ವಾಮಿ ಕೃಪೆಗೆ ಪಾತ್ರರಾದರು. ಹರಕೆ ವೊತ್ತ ಭಕ್ತರು ಅನ್ನಸಂತರ್ಪಣೆ ನಡೆಸಿದರು.
ಶಾಸಕ ಪಿ.ಎಂ.ನರೇಂದ್ರಸ್ವಾಮಿ ದೇವಸ್ಥಾನಕ್ಕೆ ಆಗಮಿಸಿ ಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಿ ಜನತೆಯ ಒಳಿತಿಗಾಗಿ ಪ್ರಾರ್ಥಿಸಿದರು. ದೇವಸ್ಥಾನದ ವತಿಯಿಂದ ಶಾಸಕರನ್ನು ಅಭಿನಂದಿಸಲಾಯಿತು.
12 ದಿನಗಳ ಕಾಲ ನಡೆಯುವ ಜಾತ್ರಾ ಮಹೋತ್ಸವದಲ್ಲಿ ನರಸಿಂಹಸ್ವಾಮಿಗೆ ವಿಶೇಷ ಪೂಜಾ ಕೈಂಕರ್ಯಗಳು ತೇಪ್ಪೋತ್ಸವಗಳು ಭಕ್ತಿ ಪ್ರಧಾನವಾಗಿ ನಡೆಯಲಿವೆ. ಕೊನೆ ದಿನದಂದು ಸಿದ್ದಾರ್ಥನಗರದ ಭಕ್ತರಿಂದ ಸೊಪ್ಪು ಉಪ್ಪುಸಾರು ಮುದ್ದೆಯನ್ನು ದೇವರಿಗೆ ನೈವೇದ್ಯ ಅರ್ಪಿಸುವ ಮೂಲಕ ಜಾತ್ರ ಮಹೋತ್ಸವಕ್ಕೆ ತೆರೆಕಾಣಲಿದೆ.