ಮಾರೆಮ್ಮದೇವಿ ತನು ಬಿಂದಿಗೆ ಉತ್ಸವ ಸಂಪನ್ನ

KannadaprabhaNewsNetwork |  
Published : Sep 03, 2026, 02:45 AM IST
ಸಿರುಗುಪ್ಪ ತಾಲೂಕಿನ ಬಾಗೇವಾಡಿ ಗ್ರಾಮದಲ್ಲಿ ಶ್ರಾವಣ ಮಾಸದ ಮೂರನೇ ಮಂಗಳವಾರದಂದು ಶ್ರೀಮಾರೆಮ್ಮ ದೇವಿಯ ತನು ಬಿಂದಿಗೆ ಉತ್ಸವ ಭಕ್ತಿಭಾವದಿಂದ ಸಂಪನ್ನಗೊಂಡಿತು. | Kannada Prabha

ಸಾರಾಂಶ

ಬೆಳಗ್ಗೆ ಕುಂಬಾರರ ಮನೆಯಿಂದ ಬಿಂದಿಗೆ, ಬಳೆಗಾರರ ಮನೆಯಿಂದ ಬಳೆ, ಹೂಗಾರರ ಮನೆಯಿಂದ ಪುಷ್ಪಗಳು ಹಾಗೂ ಬಾರಕಿರ ಸಮಾಜದವರಿಂದ ಬಾಳೆಕಂಬ, ಮಾವಿನ ತೋರಣ ಮತ್ತು ತೆಂಗಿನಗರಿಗಳು ಮತ್ತು ಕಳಸ ತರಲಾಯಿತು.

ಸಿರುಗುಪ್ಪ: ತಾಲೂಕಿನ ಬಾಗೇವಾಡಿ ಗ್ರಾಮದಲ್ಲಿ ಶ್ರಾವಣ ಮಾಸದ ಮೂರನೇ ಮಂಗಳವಾರದಂದು ಶ್ರೀಮಾರೆಮ್ಮದೇವಿಯ ತನು ಬಿಂದಿಗೆ ಉತ್ಸವ ಭಕ್ತಿಭಾವದಿಂದ ಸಂಪನ್ನಗೊಂಡಿತು.

ಉತ್ಸವದ ಪ್ರಮುಖ ಆಕರ್ಷಣೆಯಾಗಿ ಗ್ರಾಮದ ಪ್ರತಿಯೊಂದು ಸಮಾಜದವರೂ ಒಗ್ಗೂಡಿ ದೇವಿಯ ಕಾರ್ಯಕ್ರಮಗಳಲ್ಲಿ ಭಾಗವಹಿಸಿದರು.

ಬೆಳಗ್ಗೆ ಕುಂಬಾರರ ಮನೆಯಿಂದ ಬಿಂದಿಗೆ, ಬಳೆಗಾರರ ಮನೆಯಿಂದ ಬಳೆ, ಹೂಗಾರರ ಮನೆಯಿಂದ ಪುಷ್ಪಗಳು ಹಾಗೂ ಬಾರಕಿರ ಸಮಾಜದವರಿಂದ ಬಾಳೆಕಂಬ, ಮಾವಿನ ತೋರಣ ಮತ್ತು ತೆಂಗಿನಗರಿಗಳು ಮತ್ತು ಕಳಸ ತರಲಾಯಿತು. ಅಲ್ಲದೆ ಗ್ರಾಪಂದಿಂದ ಮಾಂಗಲ್ಯಕ್ಕೆ ಸಂಬಂಧಿಸಿದ ಪವಿತ್ರ ಸಾಮಗ್ರಿ ತಂದು ಮೆರವಣಿಗೆ ನಡೆಸಿ, ತುಂಗಭದ್ರಾ ನದಿಯ ದಡಕ್ಕೆ ತೆರಳಲಾಯಿತು.

ನದಿಯ ದಡದಲ್ಲಿ ಗಂಗೆ ಪೂಜೆ ಗೈದು ದೇವಿಯ ತನು ಬಿಂದಿಗೆ ಅಲಂಕೃತ ಮಂಟಪದಲ್ಲಿ ಪ್ರತಿಷ್ಠಾಪಿಸಿ ದೇವಿಗೆ ಉಡಿ ತುಂಬಿ ಮಾಂಗಲ್ಯ ಧಾರಣೆ ಮಾಡಿ ಮಹಾ ಮಂಗಳಾರತಿ ನೈವೇದ್ಯ ಸಮರ್ಪಿಸಲಾಯಿತು.

ನಂತರ ಭಕ್ತಾದಿಗಳು ಕಾಯಿ-ಕರ್ಪೂರ ಬೆಳಗಿ ನೈವೇದ್ಯ ಅರ್ಪಿಸಿ ದೇವಿಗೆ ಭಕ್ತಿ ಸಮರ್ಪಿಸಿದರು. ಮಠದ ಬಸವರಾಜಯ್ಯ ಸ್ವಾಮಿ, ಸೋಮನಾಥ ಸ್ವಾಮಿ ಹಾಗೂ ಪುಗ್ಗಿ ಪ್ರಶಾಂತ ಸ್ವಾಮಿ ಶಾಸ್ತ್ರೋಕ್ತವಾಗಿ ಪೂಜೆ ಕಾರ್ಯ ನೆರವೇರಿಸಿಕೊಟ್ಟರು.

ಸಂಜೆ ವೇಳೆ ಸಕಲ ವಾದ್ಯ-ಮೇಳಗಳೊಂದಿಗೆ ತನು ಬಿಂದಿಗೆಯ ಉತ್ಸವವು ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚರಿಸಿತು. ಮೆರವಣಿಗೆಯ ಹಾದಿಯುದ್ದಕ್ಕೂ ಭಕ್ತರು ಗ್ರಾಮ ದೇವತೆಗಳಿಗೆ ಕಾಯಿ-ಕರ್ಪೂರ ಅರ್ಪಿಸಿ ಧನ್ಯತೆ ಮೆರೆದರು. ಆನಂತರ ಮೆರವಣಿಗೆಯು ಗ್ರಾಮದ ಸರಹದ್ದಿನಲ್ಲಿರುವ ಶ್ರೀಗಾಳಿ ಮಾರೆಮ್ಮ ದೇವಸ್ಥಾನದವರೆಗೆ ತೆರಳಿ ಶ್ರದ್ಧಾಭಕ್ತಿಗಳಿಂದ ದೇವಿಯ ತನು ಬಿಂದಿಗೆ ವಿಸರ್ಜಿಸಲಾಯಿತು.

ಕಾರ್ಯಕ್ರಮದಲ್ಲಿ ಬಾವಿಕಟ್ಟಿ ಪಂಪಾಪತಿ ಗೌಡ, ಎಸ್.ಅಮರೇಗೌಡ, ಕುಂಬಾರ ರುದ್ರಪ್ಪ, ಬಳೆಗಾರ ಸಿದ್ದರಾಮ, ಜೀರ ಮಲ್ಲಪ್ಪ, ಪಟ್ಟೆದ ದೇವೇಂದ್ರಪ್ಪ, ಪ್ಯಾಟೆ ನಂದೆಪ್ಪ, ಕ್ಯಾತರಿ ಲಿಂಗಪ್ಪ, ಉಲ್ತಿ ಭೀಮಣ್ಣ, ಗಡಿಗಿ ಶರಣಪ್ಪ, ಹೊಸಮನೆ ಉಪ್ಪಳಪ್ಪ, ಹಲಿಗದ ಶಿವಣ್ಣ, ಮುರಣಿ ನಾಗಪ್ಪ, ಅಮರಾಪುರ ಗಾದಿಲಿಂಗಪ್ಪ, ಮುದಕಪ್ಪ ನಾಯಕ ಸೇರಿದಂತೆ ಗ್ರಾಮದ ಹಿರಿಯರು ಹಾಗೂ ಅಪಾರ ಸಂಖ್ಯೆಯ ಭಕ್ತಾದಿಗಳು ಭಾಗವಹಿಸಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕಾಮಗಾರಿ ವಿಳಂಬ, ಕಳಪೆ ಗುಣಮಟ್ಟ: ಪೊನ್ನಣ್ಣ ಅಸಮಾಧಾನ
ಒಳಚರಂಡಿ ಜಾಲಕ್ಕೆ ಸಂಪರ್ಕ: ಡಾ. ಮಂತರ್ ಗೌಡ ಸೂಚನೆ