ಮದ್ದೂರು: ದಾಂಪತ್ಯ ಕಲಹದ ಹಿನ್ನೆಲೆಯಲ್ಲಿ ಪತ್ನಿ ತನ್ನ ಮಗನೊಂದಿಗೆ ಸೇರಿ ಪತಿಯನ್ನು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಹತ್ಯೆಗೈದಿರುವ ಘಟನೆ ಮದ್ದೂರು ತಾಲೂಕಿನ ಚಾಪುರದೊಡ್ಡಿ ಗ್ರಾಮದಲ್ಲಿ ನಡೆದಿದೆ. ಗ್ರಾಮದ ಉಮೇಶ್ (46) ಮೇಲೆ ಪತ್ನಿ ಸವಿತಾ (65) ಹಾಗೂ ಮಗ ಶಶಾಂಕ್ (20) ಅವರುಗಳು ಮಚ್ಚು, ಮರದ ರಿಪೀಸ್ ಪಟ್ಟಿಗಳಿಂದ ಹಲ್ಲೆ ನಡೆಸಿದ್ದಾರೆ. ಇದರಿಂದ ತೀವ್ರ ರಕ್ತಸ್ರಾವದಿಂದ ಉಮೇಶ್ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾನೆ. ಘಟನೆ ವೇಳೆ ಉಮೇಶನ ರಕ್ಷಣೆಗೆ ಬಂದ ಆತನ ಅಕ್ಕ ಸರೋಜಮ್ಮ ಅವರ ಮೇಲೆ ಆರೋಪಿಗಳು ಅಟ್ಟಾಡಿಸಿಕೊಂಡು ಬಂದು ಹಲ್ಲೆ ನಡೆಸಿದ ನಂತರ ಸ್ಥಳದಿಂದ ಪರಾರಿಯಾಗಿದ್ದಾರೆ. ಘಟನೆ ನಂತರ ತಲೆಮರೆಸಿಕೊಂಡಿರುವ ಆರೋಪಿಗಳ ಪತ್ತೆಗೆ ವಿಶೇಷ ತಂಡ ರಚನೆ ಮಾಡಲಾಗಿತ್ತು. ಮದ್ದೂರು ಗ್ರಾಮಾಂತರ ಇನ್ಸ್‌ಪೆಕ್ಟರ್ ವೆಂಕಟೇಗೌಡ ಮತ್ತು ಸಿಬ್ಬಂದಿಗಳು ರಾತ್ರಿಯಿಡೀ ಕಾರ್‍ಯಾಚರಣೆ ನಡೆಸಿ ಬೆಂಗಳೂರಿನ ಚಾಮರಾಜಪೇಟೆಯಲ್ಲಿ ತಲೆಮರೆಸಿಕೊಂಡಿದ್ದ ಸವಿತಾ ಹಾಗೂ ಮಗ ಶಶಾಂಕ್‌ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಕೊಲೆಯಾದ ಉಮೇಶ್ ಹಾಗೂ ಪತ್ನಿ ಸವಿತಾ ನಡುವೆ ಹೊಂದಾಣಿಕೆ ಸಂಬಂಧ ವಿವಾದ ಉಂಟಾಗಿತ್ತು. ಈ ಹಿನ್ನೆಲೆಯಲ್ಲಿ ಕಳೆದ ಐದು ತಿಂಗಳ ಹಿಂದೆ ಸವಿತಾ ಮಗ ಶಶಾಂಕ್‌ನೊಂದಿಗೆ ಸೇರಿ ಉಮೇಶನ ಮೇಲೆ ಹಲ್ಲೆ ನಡೆಸಿ ಅವನ ಕಾಲು ಮುರಿದಿದ್ದರು. ಆ ವೇಳೆ ಬೆಸಗರಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ನಂತರ ಸವಿತಾ ಮಗನೊಂದಿಗೆ ಬೆಂಗಳೂರಿನಲ್ಲಿ ಪ್ರತ್ಯೇಕವಾಗಿ ವಾಸವಾಗಿದ್ದರು. ಪಿತೃಪಕ್ಷದ ಆಚರಣೆಗಾಗಿ ಚಾಪುರದೊಡ್ಡಿಯಲ್ಲಿರುವ ಗಂಡನ ಮನೆಗೆ ಬಂದಿದ್ದಾಗ ಉಮೇಶ ಮತ್ತು ಆತನ ಸಹೋದರಿ ಸರೋಜಮ್ಮ ಆರೋಪಿಗಳನ್ನು ತಡೆದು ಮನೆಗೆ ಬರುವುದಕ್ಕೆ ತಗಾದೆ ತೆಗೆದಿದ್ದಾರೆ. ಈ ವಿಚಾರವಾಗಿ ಗುರುವಾರ ರಾತ್ರಿ 11 ರ ಸಮಯದಲ್ಲಿ ಗಂಡ ಉಮೇಶ, ಸವಿತಾ ನಡುವೆ ಗಲಾಟೆಯಾಗಿದೆ. ಪರಿಸ್ಥಿತಿ ವಿಕೋಪಕ್ಕೆ ತಿರುಗಿದಾಗ ಮಗ ಶಶಾಂಕ್‌ನನ್ನು ಸ್ಥಳಕ್ಕೆ ಕರೆಸಿಕೊಂಡ ಸವಿತಾ, ಮಚ್ಚು ಮತ್ತು ರಿಪೀಸ್ ಪಟ್ಟಿಯಿಂದ ಗಂಡ ಉಮೇಶ ಮೇಲೆ ಹಲ್ಲೆ ನಡೆಸಿದ್ದಾರೆ. ಘಟನೆಯಿಂದಾಗಿ ತೀವ್ರವಾಗಿ ರಕ್ತಸ್ರಾವವಾಗಿ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾನೆ. ಬೆಸಗರಹಳ್ಳಿ ಠಾಣೆಯ ಪಿಎಸ್‌ಐ ಮಲ್ಲಪ್ಪ ಸಂಗಪ್ಪ ಕಂಬಾರ ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ. ಗ್ರಾಮಾಂತರ ಠಾಣೆ ಸಿಪಿಐ ವೆಂಕಟೇಗೌಡ ತನಿಖೆ ಕೈಗೊಂಡಿದ್ದಾರೆ. ಜಿಲ್ಲಾ ಪೊಲೀಸ್ ಅಧೀಕ್ಷಕ ಎನ್. ಯತೀಶ್, ಅಪರ ಪೊಲೀಸ್ ಅಧೀಕ್ಷಕ ಸಿ.ಇ. ತಿಮ್ಮಯ್ಯ, ಡಿವೈಎಸ್ಪಿ ಕೃಷ್ಣಪ್ಪ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ನಂತರ ಮಂಡ್ಯದ ಮಿಮ್ಸ್ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿದ ಶವವನ್ನು ವಾರಸುದಾರರ ವಶಕ್ಕೆ ಒಪ್ಪಿಸಲಾಗಿದೆ.