ಜಲ ಸಂಕಷ್ಟ ವರ್ಷದಲ್ಲಿ ಕುಡಿಯುವ ನೀರನ್ನು ಕಾಯ್ದಿರಿಸದೆ ತಮಿಳುನಾಡಿಗೆ ಕಾವೇರಿ ನೀರು ಹರಿಸುತ್ತಿರುವ ರಾಜ್ಯಸರ್ಕಾರದ ವಿರುದ್ಧ ಮಂಡ್ಯ ತಾಲೂಕಿನ ವಿವಿಧ ಗ್ರಾಮಗಳ ರೈತರು ನಗರದಲ್ಲಿ ಎತ್ತಿನ ಗಾಡಿ, ಟ್ರಾಕ್ಟರ್‌ಗಳ ಮೆರವಣಿಗೆ ನಡೆಸಿದರು.
ಮಂಡ್ಯ: ಜಲಸಂಕಷ್ಟ ವರ್ಷದಲ್ಲಿ ಕುಡಿಯುವ ನೀರನ್ನು ಕಾಯ್ದಿರಿಸದೆ ತಮಿಳುನಾಡಿಗೆ ನೀರು ಹರಿಸುತ್ತಿರುವ ರಾಜ್ಯಸರ್ಕಾರದ ವಿರುದ್ಧ ಮಂಡ್ಯ ತಾಲೂಕಿನ ವಿವಿಧ ಗ್ರಾಮಗಳ ರೈತರು ನಗರದಲ್ಲಿ ಗುರುವಾರ ಎತ್ತಿನ ಗಾಡಿ, ಟ್ರಾಕ್ಟರ್‌ಗಳ ಮೆರವಣಿಗೆ ನಡೆಸಿದರು ತಾಲೂಕಿನ ಇಂಡುವಾಳು, ಸಿದ್ದಯ್ಯನ ಕೊಪ್ಪಲು, ಸುಂಡಹಳ್ಳಿ, ಕಿರಗಂದೂರು ಹಾಗೂ ಮೊಳೆ ಕೊಪ್ಪಲು ಗ್ರಾಮದ ರೈತರು ಎತ್ತಿನ ಗಾಡಿ, ಟ್ರಾಕ್ಟರ್, ಬೈಕ್‌ಗಳಲ್ಲಿ ಮೆರವಣಿಗೆ ಮೂಲಕ ಬೆಂಗಳೂರು-ಮೈಸೂರು ಹೆದ್ದಾರಿ ಮೂಲಕ ಮಂಡ್ಯಕ್ಕೆ ಆಗಮಿಸಿದರು. ನಗರದ ಜಯಚಾಮರಾಜೇಂದ್ರ ಒಡೆಯರ್‌ವೃತ್ತದಲ್ಲಿ ಮಾನವ ಸರಪಳಿ ರಚಿಸಿ ವಾಹನ ಸಂಚಾರಕ್ಕೆ ಅಡ್ಡಿಪಡಿಸಿದ ರೈತರು, ಕೇಂದ್ರ -ರಾಜ್ಯ ಸರ್ಕಾರದ ವಿರುದ್ಧ ಧಿಕ್ಕಾರದ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಮಂಡಕ್ಕೆ ಆಗಮಿಸಿದ್ದ ಕೂಡಲಸಂಗಮದ ಶ್ರೀ ಬಸವ ಜಯ ಮೃತ್ಯುಂಜಯ ಸ್ವಾಮೀಜಿ ನಗರದ ಜಯಚಾಮರಾಜೇಂದ್ರ ಒಡೆಯರ್ ವೃತ್ತದಿಂದ ರೈತರ ಜೊತೆಗೂಡಿ ಎತ್ತಿನಗಾಡಿ ಏರಿ ಮೆರವಣಿಗೆಯಲ್ಲಿ ಸಾಗಿದರು. ಜಿಲ್ಲಾ ರೈತ ಹಿತರಕ್ಷಣಾ ಸಮಿತಿ ಧರಣಿ ಸ್ಥಳಕ್ಕೆ ತೆರಳಿ ನಿರಂತರ ಧರಣಿಯಲ್ಲಿ ಭಾಗಿಯಾದ ರೈತ ಸಮೂಹ ಜಲಾಶಯಗಳಿಂದ ನೆರೆ ರಾಜ್ಯಕ್ಕೆ ನಿರಂತರ ನೀರು ಹರಿಸುವ ಮೂಲಕ ಅಣೆಕಟ್ಟೆಯನ್ನು ಬರಿದು ಮಾಡಲಾಗುತ್ತಿದೆ. ಈ ಕೂಡಲೇ ನೆರೆ ರಾಜ್ಯಕ್ಕೆ ಹರಿಸುತ್ತಿರುವ ನೀರು ಸ್ಥಗಿತ ಮಾಡಬೇಕು, ಕೇಂದ್ರ ಸರ್ಕಾರ ಮಧ್ಯಪ್ರವೇಶಿಸಿ ಪರಿಹಾರ ರೂಪಿಸಬೇಕು, ಸಂಕಷ್ಟ ಸನ್ನಿವೇಶದಲ್ಲಿ ಅನುಕೂಲವಾಗುವಂತೆ ಸಂಕಷ್ಟ ಸೂತ್ರ ರೂಪಿಸಬೇಕು ಎಂದು ಒತ್ತಾಯಿಸಿದರು. ಇಂಡುವಾಳು ಗ್ರಾಮದ ರೈತ ಮುಖಂಡ ಚಂದ್ರಶೇಖರ್, ಇ.ಬಸವರಾಜು, ಕೃಷ್ಣೆಗೌಡ, ಉಮಾಶಂಕರ್, ದೇವೇಗೌಡ, ಸಿದ್ದಯ್ಯನ ಕೊಪ್ಪಲು ಗ್ರಾಮದ ರಮೇಶ್ ರಾಜು, ನಟೇಶ್, ತಮ್ಮೇಗೌಡ, ತಮ್ಮಣ್ಣ, ಶಿವಣ್ಣ, ನಾಗರಾಜು, ಸಿದ್ದರಾಮು, ನಂಜೇಗೌಡ, ಸುಂಡಹಳ್ಳಿಗ್ರಾಮದ ಶಿವಸ್ವಾಮಿ, ಸಿದ್ದಲಿಂಗಯ್ಯ, ದೇವರಾಜು, ಮೊಳೆ ಕೊಪ್ಪಲು ಗ್ರಾಮದ ಅಂದಾನಿ, ಬೆಟ್ಟೇಗೌಡ, ಶಂಕರ್, ಶಿವರಾಮ, ಹೊನ್ನಪ್ಪ, ಕಿರಗಂದೂರು ಗ್ರಾಮದ ಸಿದ್ದಯ್ಯ, ಕರಿಯಪ್ಪ, ಚಿಕ್ಕಯ್ಯ ನೇತೃತ್ವ ವಹಿಸಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.