ಮರಿಯಮ್ಮನಹಳ್ಳಿ: ನಾರಾಯಣದೇವರ ಕೆರೆಯ ಶ್ರೀ ಲಕ್ಷ್ಮೀನಾರಾಯಣಸ್ವಾಮಿ ಹಾಗೂ ಶ್ರೀ ಆಂಜಿನೇಯಸ್ವಾಮಿಯ ಅಪರೂಪದ ಜೋಡಿ ರಥೋತ್ಸವ ಮರಿಯಮ್ಮನಹಳ್ಳಿಯಲ್ಲಿ ಏ. 6ರಂದು ಸಂಜೆ ನಡೆಯಲಿದೆ.
ಕೊಪ್ಪಳ ಜಿಲ್ಲೆಯ ಕಿನ್ನಾಳ ಗ್ರಾಮದಿಂದ ಗಂಗೂರ್ ಮನೆತನದವರಾದ ಆಗಮ ಪಂಡಿತರು ಯುಗಾದಿ ಮುನ್ನಾ ದಿನವೇ ಮರಿಯಮ್ಮನಹಳ್ಳಿಗೆ ಬರುತ್ತಾರೆ. ರಥೋತ್ಸವದ ಪೂಜಾ ವಿಧಾನಗಳಿಗೆ ಎಲ್ಲ ವ್ಯವಸ್ಥೆ ಮಾಡಿಕೊಂಡು ಯುಗಾದಿಯಿಂದ 9 ದಿನಗಳ ಕಾಲ ನಿತ್ಯವೂ ವಿಶೇಷ ಪೂಜೆಗಳು ಹಾಗೂ ಧಾರ್ಮಿಕ ಆಚರಣೆಗಳನ್ನು ನಡೆಸಿಕೊಡುವರು.
ಜೋಡಿ ರಥೋತ್ಸವದ ಕಾರ್ಯಗಳು ಯುಗಾದಿಯಂದು ಪ್ರಾರಂಭವಾಗಿ ಚೈತ್ರ ಶುದ್ಧ ದ್ವಾದಶಿ ವರೆಗೆ ಹೋಮ ಮತ್ತು ಬಲಿ ಕಾರ್ಯಗಳು ಹಾಗೂ ಸಿಂಹವಾಹನ, ನವಿಲುವಾಹನ, ಸರ್ಪವಾಹನ, ಕುದುರೆ ವಾಹನ ಉತ್ಸವಗಳೊಂದಿಗೆ ಪ್ರತಿ ದಿನವೂ ವಿಶೇಷ ಧಾರ್ಮಿಕ ಕಾರ್ಯಕ್ರಮಗಳು ಮತ್ತು ಹನುಮಂತೋತ್ಸವ (ದೇವರ ನಿಶ್ಚಿತಾರ್ಥ), ಗರುಡೋತ್ಸವ (ದೇವರ ಲಗ್ನ), ಬಿಳಿ ಆನೆ ಉತ್ಸವದ ನಂತರ ರಥೋತ್ಸವ ನಡೆಯುತ್ತವೆ.ರಥೋತ್ಸವದ ಉತ್ಸವ ಮೂರ್ತಿಗಳಿಗೆ ಟಿಪ್ಪು ಸುಲ್ತಾನ್ ನೀಡಿದ ವಜ್ರದ ಕಿರೀಟಗಳನ್ನು ತೊಡಿಸುತ್ತಾರೆ.
ದೇವರ ಕಾರ್ಯಗಳು: ದೇವರ ಲಗ್ನ- ಷಷ್ಟಿಯ ದಿನ ರಾತ್ರಿ ಚರುಪು ಎಂದರೆ ದೇವರ ಲಗ್ನದ ನಿಶ್ಚಿತಾರ್ಥ ಇರುತ್ತದೆ. ಷಷ್ಟಿ ಹಾಗೂ ಸಪ್ತಮಿ ಉತ್ಸವಗಳಲ್ಲಿ ಭಕ್ತಾದಿಗಳು ಕೊಟ್ಟ ಹಾಗೂ ರಾಜ ಮಹಾರಾಜರು ಕೊಟ್ಟ ಬಂಗಾರದ ಆಭರಣ ಹಾಗೂ ಟಿಪ್ಪು ಸುಲ್ತಾನ್ ನೀಡಿದ ವಜ್ರದ ಮೂರು ಕಿರೀಟಗಳನ್ನು ದೇವರ ವಿಗ್ರಹಗಳಿಗೆ ತೊಡಸಿ ವಿಶೇಷವಾಗಿ ಹೂವಿನಿಂದ ಅಲಂಕರಿಸಲಾಗುತ್ತದೆ. ಮರುದಿನ ಸಪ್ತಮಿಯ ರಾತ್ರಿ ಶ್ರೀರಾಮ ಚಂದ್ರ ಹಾಗೂ ಸೀತಾಮಾತೆಗೂ ದೇವಸ್ಥಾನದಲ್ಲಿ ಲಗ್ನ ನಡೆಯುತ್ತದೆ. ಮರುದಿನ ಸಪ್ತಮಿಯ ದಿನ ಬೆಳಗ್ಗೆ ನಡೆಯುವ ಹನುಮಂತ ಉತ್ಸವದಲ್ಲಿ ಊರಿನ ಶ್ರೇಷ್ಠಿಗಳು ಹಿಲಾಲ ಹಿಡಿಯುತ್ತಾರೆ. ಅಷ್ಟಮಿಯ ದಿನ ಬೆಳಗ್ಗೆ ನಡೆಯುವ ಗರುಡೋತ್ಸವದಲ್ಲಿ ಬೇರೆ ಊರಿನ ಶ್ರೇಷ್ಠಿಗಳು ಹಿಲಾಲ ಹಿಡಿಯುತ್ತಾರೆ. ನವಮಿ ದಿನ ಬೆಳಗ್ಗೆ ಬಳಿ ಆನೆ ಉತ್ಸವ ನಡೆಯುತ್ತದೆ. ಆ ದಿನವೇ ಶ್ರೀರಾಮನವಮಿ ಬ್ರಹ್ಮೋತ್ಸವ ನಡೆಯುತ್ತದೆ.ಮಧ್ಯಾಹ್ನ ವಿಶೇಷವಾಗಿ ಬೆಳಗ್ಗೆ ಮಡಿ ತೇರನ್ನು ಒಂದು ಕಡೆ ಬ್ರಾಹ್ಮಣರು, ಇನ್ನೊಂದೆಡೆ ವೈಶ್ಯರು (ಶೆಟ್ಟರು) ತೇರು ಎಳೆಯುತ್ತಾರೆ. ಈ ದೃಶ್ಯ ಬೇರೆಡೆ ನೋಡಲು ಸಿಗುವುದು ಅಪರೂಪ.
ಸಂಜೆ ಲಕ್ಷಾಂತರ ಜನರು ಶ್ರೀ ಲಕ್ಷ್ಮೀನಾರಾಯಣಸ್ವಾಮಿ ಹಾಗೂ ಶ್ರೀ ಆಂಜನೇಯಸ್ವಾಮಿ ಜೋಡಿ ರಥೋತ್ಸವದಲ್ಲಿ ಪಾಲ್ಗೊಳ್ಳುತ್ತಾರೆ.