ಕನ್ನಡಪ್ರಭ ವಾರ್ತೆ ಕುಶಾಲನಗರ
ಸ್ಥಳೀಯ ಮಹಾಲಕ್ಷ್ಮಿ ಸಭಾಂಗಣದಲ್ಲಿ ಕೌಶಲ್ಯಾಭಿವೃದ್ಧಿ ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ, ರಾಷ್ಟ್ರೀಯ ಜೀವನೋಪಾಯ ಅಭಿಯಾನ, ದೀನದಯಾಳ್ ಅಂತ್ಯೋದಯ ರಾಷ್ಟ್ರೀಯ ನಗರ ಜೀವನೋಪಾಯ ಅಭಿಯಾನ ಹಾಗೂ ಪುರಸಭೆ ವತಿಯಿಂದ ಪಟ್ಟಣ ಮಾರಾಟ ಸಮಿತಿ ಸಭೆ ಆಯೋಜಿಸಲಾಗಿತ್ತು.
ಮಾರಾಟ ಸಮಿತಿ ಅಧ್ಯಕ್ಷರು ಆಗಿರುವ ಮುಖ್ಯಾಧಿಕಾರಿ ಕೃಷ್ಣಪ್ರಸಾದ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಬೀದಿಬದಿ ವ್ಯಾಪಾರಿಗಳ ಹಿತದೃಷ್ಟಿಯಿಂದ ಅನುಕೂಲ ಕಲ್ಪಿಸಿಕೊಡುವ ಉದ್ದೇಶದಿಂದ ಪಟ್ಟಣದ ನ್ಯಾಯಾಲಯ ಬಳಿ, ಖಾಸಗಿ ಬಸ್ ನಿಲ್ದಾಣ, ಹಾಗೂ ಅರಣ್ಯ ಡಿಫೋದ ಬಳಿ ವ್ಯಾಪಾರ ವಲಯ ಗುರುತಿಸಲಾಗಿದೆ.ಈ ಬಗ್ಗೆ ಪುರಸಭೆ ಸಾಮಾನ್ಯ ಸಭೆಯಲ್ಲಿ ಅಂತಿಮ ತೀರ್ಮಾನ ಮಾಡಿ ಸರ್ಕಾರಕ್ಕೆ ವರದಿ ಕಳಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು.
ಸಮುದಾಯ ಸಂಘಟನಾಧಿಕಾರಿ ಪೂರ್ಣಕಲಾ ಮಾತನಾಡಿ, ಪುರಸಭೆ ವತಿಯಿಂದ 392 ಮಂದಿಗೆ ಸಾಲ ಸೌಲಭ್ಯ ವಿತರಿಸಲಾಗಿದೆ. ಪ್ರಥಮ ಹಂತದಲ್ಲಿ 10 ಸಾವಿರ ರು. ಹಾಗೂ ಎರಡನೇ ಹಂತದಲ್ಲಿ 20 ಸಾವಿರ ರು., ನಂತರ 50 ಸಾವಿರ ರು. ಸಾಲ ಸೌಲಭ್ಯ ವಿತರಿಸಲಾಗುತ್ತದೆ. ಈ ಸೌಲಭ್ಯವನ್ನು ವ್ಯಾಪಾರಸ್ಥರು ಸದುಪಯೋಗ ಮಾಡಿಕೊಂಡು ತಮ್ಮ ಜೀವನಮಟ್ಟವನ್ನು ಉತ್ತಮ ಪಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಈ ಸಂದರ್ಭ ಸಂಚಾರಿ ಪೊಲೀಸ್ ಸಹಾಯಕ ನಿರೀಕ್ಷಕ ಬಿ.ಕೆ.ಹರೀಶ್, ಪುರಸಭೆ ಕಂದಾಯ ನಿರೀಕ್ಷಕ ಸೋಮಶೇಖರ್, ಹಿರಿಯ ಆರೋಗ್ಯ ನಿರೀಕ್ಷಕ ಉದಯಕುಮಾರ್, ಸಮುದಾಯ ಸಂಘಟನಾಧಿಕಾರಿ ಪೂರ್ಣಕಲಾ, ಸಿಬ್ಬಂದಿ ದಾಕ್ಷಾಯಿಣಿ, ಶೃತಿ, ವಿವಿಧ ಬ್ಯಾಂಕ್ ಅಧಿಕಾರಿ, ಸಿಬ್ಬಂದಿ, ಕರ್ನಾಟಕ ಬೀದಿಬದಿ ವ್ಯಾಪಾರಿಗಳ ಸಂಘಟನೆ ಒಕ್ಕೂಟದ ಜಿಲ್ಲಾ ಸಂಚಾಲಕ ಎಸ್.ಆದಂ, ಸಲೀನಾ ಡಿ.ಕುನ್ನಾ, ಮಹೇಶ್ , ಗಣೇಶ ಮತ್ತಿತರರು ಇದ್ದರು.