ಕ್ಷೇತ್ರದಲ್ಲಿ ವಿವಿಧ ಧಾರ್ಮಿಕ ಕಾರ್ಯ
ಕನ್ನಡಪ್ರಭ ವಾರ್ತೆ, ಬಾಳೆಹೊನ್ನೂರುಪುರಾಣ ಪ್ರಸಿದ್ಧ ಕ್ಷೇತ್ರ, ದಕ್ಷಿಣ ಕಾಶಿ ಖಾಂಡ್ಯದಲ್ಲಿ ತ್ರಯಂಬಕ ಮೃತ್ಯುಂಜಯ ಮಾರ್ಕಾಂಡೇಶ್ವರ ಸ್ವಾಮಿ ಮಹಾರಥೋತ್ಸವ ವಿಜೃಂಭಣೆಯಿಂದ ಶನಿವಾರ ನಡೆಯಿತು.ಮಹಾರಥೋತ್ಸವದ ಅಂಗವಾಗಿ ಕಳೆದ ಎರಡು ದಿನಗಳಿಂದ ಶ್ರೀಕ್ಷೇತ್ರದಲ್ಲಿ ವಿವಿಧ ಧಾರ್ಮಿಕ ಕಾರ್ಯಗಳು ನೆರವೇರಿದ್ದು, ಗುರು-ಗಣಪತಿ ಪೂಜೆ, ಪುಣ್ಯಾಹ, ದೇವನಾಂದಿ, ಗಣಪತಿ ಹೋಮಗಳು, ಗಂಗೆಗಿರಿ ಪಂಚಮುಖಿ ಕ್ಷೇತ್ರದಲ್ಲಿ ಪೂಜೆ, ಧ್ವಜಾ ರೋಹಣ ಸೇರಿದಂತೆ ಹಲವು ಧಾರ್ಮಿಕ ಕಾರ್ಯ ನಡೆಯಿತು.ಶನಿವಾರ ಮಧ್ಯಾಹ್ನ ಆರಿದ್ರಾ ನಕ್ಷತ್ರದಲ್ಲಿ ಮಾರ್ಕಾಂಡೇಶ್ವರ ಸ್ವಾಮಿ ಮಹಾರಥೋತ್ಸವ ವಿವಿಧ ಧಾರ್ಮಿಕ ಕಾರ್ಯ ಗಳೊಂದಿಗೆ ವಿಧಿವತ್ತಾಗಿ ವಿಜೃಂಭಣೆಯಿಂದ ನಡೆದಿದ್ದು, ಇದಕ್ಕೂ ಮುನ್ನ ಶೃಂಗೇರಿ ಶಾರದಾ ಪೀಠದಿಂದ ವಿಶೇಷ ಪೂಜೆ ನೆರವೇರಿಸಲಾಯಿತು. ರಥೋತ್ಸವದಲ್ಲಿ ಸಂಗಮೇಶ್ವರಪೇಟೆ, ಬೊಗಸೆ, ಬಾಸಾಪುರ, ಕಡಬಗೆರೆ, ದೇವದಾನ, ಕಡವಂತಿ, ಬಾಳೆಹೊನ್ನೂರು ಸೇರಿದಂತೆ ವಿವಿಧ ಗ್ರಾಮಗಳ ಸಾವಿರಾರು ಭಕ್ತರು ಭಾಗವಹಿಸಿದ್ದರು. ರಥೋತ್ಸವಕ್ಕೂ ಮುನ್ನ ಶ್ರೀಸ್ವಾಮಿ ವಿಗ್ರಹವನ್ನು ದೇವಾಲಯದ ಸುತ್ತಲೂ ವಾದ್ಯಗೋಷ್ಠಿಯೊಂದಿಗೆ ಪ್ರದಕ್ಷಿಣೆ ಮಾಡಲಾಯಿತು.ರಥೋತ್ಸವದ ಸಂದರ್ಭದಲ್ಲಿ ಭಕ್ತಾದಿಗಳು ತಾವು ಬೆಳೆದ ಭತ್ತ, ಅಡಕೆ, ಕಾಫಿ, ಏಲಕ್ಕಿ, ಕಾಳುಮೆಣಸು, ಬಾಳೆಹಣ್ಣು ಸೇರಿದಂತೆ ಹಲವು ದವಸ, ಧಾನ್ಯಗಳನ್ನು, ಫಲ ಪುಷ್ಪವನ್ನು ಮಹಾರಥದೆಡೆಗೆ ಎರಚಿ ಭಕ್ತಿ ಸಮರ್ಪಿಸಿದರು. ಜಾತ್ರಾ ಮಹೋತ್ಸವದ ಅಂಗವಾಗಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಧಾರ್ಮಿಕ ಕಾರ್ಯಕ್ರಮಗಳು ಕಮ್ಮರಡಿ ಲಕ್ಷ್ಮಿನಾರಾಯಣ ಸೋಮಯಾಜಿಗಳ ನೇತೃತ್ವದಲ್ಲಿ ನಡೆಯಿತು. ಭಕ್ತರಿಗೆ ಅನ್ನಸಂತರ್ಪಣೆ ನೆರವೇರಿಸಲಾಯಿತು. ರಥೋತ್ಸವದಲ್ಲಿ ದೇವಸ್ಥಾನ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಎಸ್.ವಿ. ಮಂಜುನಾಥ್ ಸೇರಿದಂತೆ ಪ್ರಮುಖರು ಭಾಗವಹಿಸಿದ್ದರು.
ಶನಿವಾರ ರಾತ್ರಿ ಶಯನೋತ್ಸವ ನಡೆಯಿತು. ಭಾನುವಾರ ಪ್ರಭೋಧೋತ್ಸವ, ಯಾತ್ರಾ ಹೋಮ, ಅವಭೃತೋತ್ಸವ, ವಸಂತೋತ್ಸವ, ರಾತ್ರಿ ತೆಪ್ಪೋತ್ಸವ, ಸೋಮವಾರ ಸಂಪ್ರೋಕ್ಷಣೆ ಹೋಮ, ರುದ್ರಾಭಿಷೇಕ, ರುದ್ರಹೋಮ ನಡೆಯಲಿದೆ.೮ಬಿಹೆಚ್‌ಆರ್ ೧:ಬಾಳೆಹೊನ್ನೂರು ಸಮೀಪದ ಖಾಂಡ್ಯ ಮಾರ್ಕಾಂಡೇಶ್ವರ ರಥೋತ್ಸವ ವಿಜೃಂಭಣೆಯಿಂದ ನಡೆಯಿತು.