89ರ ಹರೆಯದಲ್ಲಿ ಪಿಎಚ್‌ಡಿ ಪದವಿ ಪಡೆದ ಮಾರ್ಕಂಡೇಯ!

KannadaprabhaNewsNetwork | Published : Sep 25, 2024 12:48 AM

ಸಾರಾಂಶ

ನನಗೆ ಮೊದಲಿನಿಂದಲೂ ಪಿಎಚ್‌ಡಿ ಮಾಡಬೇಕು ಎನ್ನುವ ಆಸೆಯಿತ್ತು. ಆದರೆ, ಈ ಅವಧಿಯಲ್ಲಿ ನಿಮಗೆ ಪಿಎಚ್‌ಡಿ ಸಿಗುವುದಿಲ್ಲ, ಈ ವಯಸ್ಸಿನಲ್ಲಿ ಇದೆಲ್ಲ ಬೇಕೆ? ಬೇಕಿದ್ದರೆ ಗೌರವ ಡಾಕ್ಟರೇಟ್‌ ಕೊಡಿಸೋಣ ಎಂಬ ಟೀಕಿಸಿದ್ದರು ಎಂದು ಮಾರ್ಕಂಡೇಯ ದೊಡಮನಿ ಹೇಳಿದರು.

ಧಾರವಾಡ:

ಜ್ಞಾನ ಪಡೆಯಲು ವಯಸ್ಸಿನ ಮಿತಿ ಇಲ್ಲ ಎನ್ನುವುದಕ್ಕೆ ಇವರೇ ಸಾಕ್ಷಿ. ಸತತವಾಗಿ 18 ವರ್ಷ ಒಂದು ವಿಷಯವಾಗಿ ಅಧ್ಯಯನ ಮಾಡಿ ತಮ್ಮ 89ನೇ ವಯಸ್ಸಿಗೆ ಡಾಕ್ಟರ್‌ ಆಫ್‌ ಫಿಲಾಸಫಿ (ಪಿಎಚ್‌.ಡಿ.) ಪದವಿ ಪಡೆಯುವ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ ಇವರು.

ನಿವೃತ್ತ ಶಿಕ್ಷಕರು, ಇಲ್ಲಿಯ ಜಯನಗರ ನಿವಾಸಿ ಮಾರ್ಕಂಡೇಯ ದೊಡಮನಿ ಕರ್ನಾಟಕ ವಿಶ್ವವಿದ್ಯಾಲಯದ 74ನೇ ಘಟಿಕೋತ್ಸವದಲ್ಲಿ ಪಿಎಚ್‌ಡಿ ಪದವಿ ಪಡೆದ ಅತ್ಯಂತ ಹಿರಿಯರು ಎನ್ನುವ ಹೆಗ್ಗಳಿಕೆಗೂ ಪಾತ್ರರಾದರು. ಸತತ 18 ವರ್ಷ ಡೋಹರ ಕಕ್ಕಯ್ಯನವರ ವಚನ ಮತ್ತು ಜೀವನ ಸಾಧನೆಯ ಬಗ್ಗೆ ಅಧ್ಯಯನ ನಡೆಸಿ, ''''''''ಶಿವಶರಣ ಡೋಹರ ಕಕ್ಕಯ್ಯ: ಒಂದು ಅಧ್ಯಯನ'''''''' ಎಂಬ ಮಹಾಪ್ರಬಂಧ ಮಂಡಿಸಿ ಕನ್ನಡ ಅಧ್ಯಯನ ಪೀಠದ ಪಿಎಚ್‌ಡಿ ಪದವಿ ಜತೆಗೆ ಡಾಕ್ಟರ್ ಮಾರ್ಕಂಡೇಯ ಆಗಿ ಹೊರಹೊಮ್ಮಿದರು.

ಟೀಕೆಗೆ ಉತ್ತರ:

ನನಗೆ ಮೊದಲಿನಿಂದಲೂ ಪಿಎಚ್‌ಡಿ ಮಾಡಬೇಕು ಎನ್ನುವ ಆಸೆಯಿತ್ತು. ಆದರೆ, ಈ ಅವಧಿಯಲ್ಲಿ ನಿಮಗೆ ಪಿಎಚ್‌ಡಿ ಸಿಗುವುದಿಲ್ಲ, ಈ ವಯಸ್ಸಿನಲ್ಲಿ ಇದೆಲ್ಲ ಬೇಕೆ? ಬೇಕಿದ್ದರೆ ಗೌರವ ಡಾಕ್ಟರೇಟ್‌ ಕೊಡಿಸೋಣ ಎಂಬ ಟೀಕಿಸಿದ್ದರು. ಆದರೆ ನಾನು ಮಾತ್ರ ಟೀಕೆಗಳಿಗೆ ಕಿವಿಗೊಡದೆ ನನ್ನ ಸಾಧನೆ ಮಾಡಿದ್ದೇನೆ. ಯಾವ ವಿಷಯ ತೆಗೆದುಕೊಳ್ಳಬೇಕು ಎಂದು ಯೋಚನೆಯಲ್ಲಿದ್ದೆನು. ಆಗ ಶಿವಶರಣ ಹರಳಯ್ಯನಿಗೆ ಸರಿಸಮಾನವಾಗಿ ಕಾಯಕದಲ್ಲಿ ತೊಡಗಿಸಿಕೊಂಡಿದ್ದ ವ್ಯಕ್ತಿ ಶಿವಶರಣ ಡೋಹರ ಕಕ್ಕಯ್ಯ ಅವರ ವಿಚಾರ ಹೊಳೆಯಿತು. ಪ್ರೊ. ನಿಂಗಪ್ಪ ಮುದೇನೂರು ಅವರ ಮಾರ್ಗದರ್ಶನದಲ್ಲಿ ಅಧ್ಯಯನ ಮಾಡಿದೆ. ಪಿಎಚ್‌ಡಿ ಮಂಡಿಸಲು ಹೆಚ್ಚು ಕಾಲ ಹಿಡಿಯಿತು. ಕವಿವಿಯ ಕನ್ನಡ ವಿಭಾಗದ ಮುಖ್ಯಸ್ಥರು ಸಹಾಯ ಮಾಡಿದ್ದಾರೆ ಎಂದು ಪತ್ರಿಕೆಗೆ ಪ್ರತಿಕ್ರಿಯೆ ನೀಡಿದರು.

ತಮ್ಮ 89ನೇ ಇಳಿ ವಯಸ್ಸಿನಲ್ಲೂ ಕಲಿಯಬೇಕು ಎಂಬ ಹುಮ್ಮಸ್ಸಿನಿಂದ ಪಿಎಚ್‌ಡಿ ಮಂಡಿಸಿ ಪದವಿ ಪಡೆದ ಮಾರ್ಕಂಡೇಯ ದೊಡ್ಡಮನಿ ಇಂದಿನ ಯುವಕರಿಗೆ ಮಾದರಿಯಾಗಿದ್ದಾರೆ. ಕಲಿಕೆಗೆ ಯಾವುದೇ ನಿರ್ಬಂಧ ಇಲ್ಲ ಎನ್ನುವುದನ್ನು ಮಾರ್ಕಂಡೇಯ ತೋರಿಸಿಕೊಟ್ಟಿದ್ದಾರೆ ಎಂದು ಪದವಿ ಪ್ರದಾನ ಮಾಡಿದ ಉನ್ನತ ಶಿಕ್ಷಣ ಸಚಿವ ಡಾ.. ಎಂ.ಸಿ. ಸುಧಾಕರ ಮೆಚ್ಚುಗೆ ವ್ಯಕ್ತಪಡಿಸಿದರು.

Share this article