ಅಂಕಗಳು ತರಗತಿಗಳ ಪರೀಕ್ಷೆಯಲ್ಲಿಲ್ಲ, ಬದುಕಿನಲ್ಲಿವೆ: ನಿಜಲಿಂಗಪ್ಪ ಬಸೇಗೆಣ್ಣಿ

KannadaprabhaNewsNetwork |  
Published : May 11, 2025, 11:49 PM IST
ಹಾವೇರಿ ತಾಲೂಕಿನ ಅಗಡಿ ಗ್ರಾಮದಲ್ಲಿ ಸ್ಫೂರ್ತಿ ವಿದ್ಯಾ ಕುಟೀರದಿಂದ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಏರ್ಪಡಿಸಿದ್ದ ಪ್ರವೇಶ ಪರೀಕ್ಷೆಯ ಪ್ರೇರಣಾ ಶಿಬಿರವನ್ನು ಉದ್ಘಾಟಿಸಲಾಯಿತು. | Kannada Prabha

ಸಾರಾಂಶ

ಅಸಾಧ್ಯವಾದುದು ಯಾವುದೂ ಇಲ್ಲ. ಸಾಧನೆ ಸಾಧಕರ ಸ್ವತ್ತು. ನಿಮ್ಮ ಭವಿಷ್ಯ ನೀವೇ ರೂಪಿಸಿಕೊಳ್ಳಬೇಕು.

ಹಾವೇರಿ: ಪರೀಕ್ಷೆಯಲ್ಲಿ ಫೇಲಾಗುವುದು ಅಪರಾಧವೇನಲ್ಲ. ಆದರೆ ನಿರುತ್ಸಾಹಗೊಳ್ಳುವುದು, ಮತ್ತೆ ಪ್ರಯತ್ನ ಮಾಡದಿರುವುದು ಮಹಾಪರಾಧ. ಅಂಕಗಳು ಪರೀಕ್ಷೆಯಲ್ಲಿಲ್ಲ, ಬದುಕಿನಲ್ಲಿವೆ ಎಂದು ಶಿಕ್ಷಣ ಚಿಂತಕ ನಿಜಲಿಂಗಪ್ಪ ಬಸೇಗೆಣ್ಣಿ ತಿಳಿಸಿದರು.ತಾಲೂಕಿನ ಅಗಡಿ ಗ್ರಾಮದಲ್ಲಿ ಸ್ಫೂರ್ತಿ ವಿದ್ಯಾ ಕುಟೀರ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಏರ್ಪಡಿಸಿದ್ದ ಪ್ರವೇಶ ಪರೀಕ್ಷೆಯ ಪ್ರೇರಣಾ ಶಿಬಿರದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಅಸಾಧ್ಯವಾದುದು ಯಾವುದೂ ಇಲ್ಲ. ಸಾಧನೆ ಸಾಧಕರ ಸ್ವತ್ತು. ನಿಮ್ಮ ಭವಿಷ್ಯ ನೀವೇ ರೂಪಿಸಿಕೊಳ್ಳಬೇಕು. ಪಾಲಕರು ನಿಮ್ಮ ಮೇಲೆ ಇಟ್ಟಿರುವ ಭರವಸೆಯನ್ನು ಹುಸಿ ಮಾಡದಿರಿ. ಆತ್ಮವಿಶ್ವಾಸ ವೃದ್ಧಿಸಿಕೊಂಡು ಬರುವ ಪರೀಕ್ಷೆಯನ್ನು ಧೈರ್ಯವಾಗಿ ಎದುರಿಸಿ ಎಂದರು. ಸಾಹಿತಿ ಹನುಮಂತಗೌಡ ಗೊಲ್ಲರ ಶಿಬಿರವನ್ನು ಉದ್ಘಾಟಿಸಿ ಮಾತನಾಡಿ, ಪುಟ್ಟ ಇರುವೆ ತನಗಿಂತ ಐದು ಪಟ್ಟು ಭಾರವನ್ನು ಹೊತ್ತು ಹತ್ತಾರು ಬಾರಿ ಗೋಡೆಯನ್ನು ಏರುತ್ತದೆ, ಬೀಳುತ್ತದೆ. ಆದರೆ ಎದೆಗುಂದುವುದಿಲ್ಲ. ಆದರೆ 11ನೇ ಬಾರಿ ಮತ್ತೆ ಪ್ರಯತ್ನಿಸುತ್ತದೆ ಮತ್ತು ಯಶಸ್ವಿಯಾಗುತ್ತದೆ. ಶ್ರಮಕ್ಕೆ ಇನ್ನೊಂದು ಹೆಸರೇ ಇರುವೆ. ಶ್ರಮಪಡದೆ ಇದ್ದರೆ ನೀ ಇದ್ದಲ್ಲೇ ಇರುವೆ. ಸಂಘರ್ಷ ಮಾಡಿ, ಪ್ರಯತ್ನ ಮಾಡಿ ಸಫಲತೆ ಅವಶ್ಯವಾಗಿ ದೊರೆಯುತ್ತದೆ.ಹಣೆಬರಹದಲ್ಲಿ ಜೀವನವಿಲ್ಲ, ಆದರೆ ಹಣೆಯ ಬೆವರಿನಲ್ಲಿ ಜೀವನವಿದೆ. ಎಲ್ಲರಿಗೂ ಬೇಕಾಗುವ ಹಣ್ಣು ಕೈ ಸೇರುತ್ತದೆ. ಯಾರಿಗೂ ಬೇಡವಾದ ಬೀಜ ಭೂಮಿ ಸೇರುತ್ತದೆ. ಬೇಡವಾದ ಬೀಜದಿಂದ ಸಾವಿರಾರು ಹಣ್ಣುಗಳು ಬಿಡುವ ಕಾಲ ಬಂದೇ ಬರುತ್ತದೆ. ತಿರಸ್ಕರಿಸಿದವರಿಗೆ ತಿರುಗಿ ನಿಲ್ಲುವುದು ಸಾಧನೆ ಅಲ್ಲ, ತಿರಸ್ಕರಿಸಿದವರು ನಮ್ಮನ್ನು ತಿರುಗಿ ನೋಡುವಂತೆ ಮಾಡುವುದೇ ಸಾಧನೆ. ಡಾ. ಅಂಬೇಡ್ಕರ್, ಎಡಿಸನ್, ಎಪಿಜೆ ಅಬ್ದುಲ್ ಕಲಾಂ ಮುಂತಾದ ಸಾಧಕರು ಸ್ಫೂರ್ತಿಯಾಗಬೇಕು ಎಂದರು.ಗ್ರಾಮ ಪಂಚಾಯಿತಿ ಸದಸ್ಯ ಡಾ. ಸತೀಶ್ ಈಳಿಗೇರ ಮಾತನಾಡಿ, ವಿದ್ಯಾರ್ಥಿಗಳು ಕೀಳರಿಮೆ ಬಿಟ್ಟು ಗುರಿ ಸಾಧನೆಗೆ ನಿರಂತರ ಪ್ರಯತ್ನ ಮಾಡಬೇಕು. ಮನಸ್ಸಿನಲ್ಲಿ ಮಾರ್ಗವಿದೆ, ಪಾಲಕರ ಶ್ರಮವನ್ನು ಅರ್ಥ ಮಾಡಿಕೊಳ್ಳಬೇಕು ಎಂದರು.ಸಾಧಕ ವೀರೇಶ್ ಹಳೇರಿತ್ತಿ ಮಾತನಾಡಿ, ಸೋಲನ್ನು ಗೆಲುವನ್ನಾಗಿ ಪರಿವರ್ತಿಸಬೇಕು. ಸೋಲಿನ ಹೆದರಿಕೆ ಸತ್ತಾಗಲೇ ಗೆಲುವಿನ ಚಿಲುಮೆ ದಕ್ಕುತ್ತದೆ ಎಂದು ತಿಳಿಸಿದ ಅವರು, ಕುಟೀರದ ಶೈಕ್ಷಣಿಕ ಕಾಳಜಿಯನ್ನು ಶ್ಲಾಘಿಸಿದರು.ವಿದ್ಯಾರ್ಥಿಗಳಾದ ರಕ್ಷಿತಾ ಬಾರ್ಕಿ, ಸುಪ್ರಿಯಾ ಸುಣಗಾರ, ದ್ಯಾಮಜ್ಜ ಕಡೆಮನಿ, ಚೇತನ ಬಡಿಗೇರ, ಗುಡ್ಡಪ್ಪ ತೊದ್ಲಣ್ಣನವರ ಮಾತನಾಡಿ, ಕುಟೀರದ ಈ ಪ್ರೇರಣಾ ಶಿಬಿರ ನಮಗೆ ಪರೀಕ್ಷೆಯನ್ನು ಎದುರಿಸಲು ಧೈರ್ಯ ನೀಡಿದೆ ಎಂದರು.ಮಂಜುನಾಥ್ ಮಾನೇನವರ ಸ್ವಾಗತಿಸಿದರು. ದರ್ಶನ್ ಬಿದರಿ ನಿರೂಪಿಸಿದರು. ಪಲ್ಲವಿ ವಂದಿಸಿದರು.

PREV

Recommended Stories

ಸಂಪುಟ ಪುನರ್‌ ರಚನೆ ಸುಳಿವು : ದಲಿತ ಸಚಿವರ ಸಭೆ!
ಶೂದ್ರ ಶ್ರೀನಿವಾಸ್‌ ಸೇರಿ ಐವರಿಗೆ ಸಾಹಿತ್ಯ ಅಕಾಡೆಮಿ ಪ್ರಶಸ್ತಿ