ಹುಬ್ಬಳ್ಳಿ: ಸ್ಥಳೀಯ ಸಂಸ್ಥೆಗಳಿಗೆ ರಾಜ್ಯ ಸರ್ಕಾರದಿಂದ ಕಾಲಕಾಲಕ್ಕೆ ಅನುದಾನ ಬಿಡುಗಡೆಯಾಗಬೇಕು. ಅನುದಾನ ಬಿಡುಗಡೆ ಸಂಬಂಧ ವ್ಯವಸ್ಥೆ ರೂಪಿಸಬೇಕು ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿದರು.
ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಪೌರ ಕಾರ್ಮಿಕರಿಗೆ ನೇರ ನೇಮಕಾತಿಯಡಿ ಭಾನುವಾರ ನೇಮಕಾತಿ ಆದೇಶ ಪ್ರತಿ ವಿತರಿಸಿ ಮಾತನಾಡಿದರು.ಆಡಳಿತದಲ್ಲಿ ಯಾವುದೇ ಪಕ್ಷವಿರಲಿ, ಅನುದಾನ ಬಿಡುಗಡೆ ವ್ಯವಸ್ಥಿತವಾಗಿರಬೇಕು. ₹300 ಕೋಟಿ ಅನುದಾನ ಬಾಕಿ ಇದೆ ಎಂಬ ಮಾಹಿತಿ ಇದೆ. ಅನುದಾನ ತಡೆಹಿಡಿಯಬಾರದು. ಕೇಂದ್ರ ಸರ್ಕಾರದ ಹಣಕಾಸು ಆಯೋಗದಿಂದ ಸ್ಥಳೀಯ ಸಂಸ್ಥೆಗಳಿಗೆ ನೀಡುವ ಅನುದಾನದಲ್ಲಿ ಹೆಚ್ಚಳ ಮಾಡಿದೆ. ಮಲ ಹೊರುವ, ಗುಂಡಿಗೆ ಇಳಿಯುವ ಅನಿಷ್ಠ ಪದ್ಧತಿಯನ್ನು ಕೇಂದ್ರ ಸರ್ಕಾರ ತೊಡೆದು ಹಾಕಿದೆ ಎಂದರು.
ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿ ಅಧ್ಯಕ್ಷ, ಶಾಸಕ ಪ್ರಸಾದ ಅಬ್ಬಯ್ಯ ಮಾತನಾಡಿ, ನೇರ ನೇಮಕಾತಿ ಮತ್ತು ನೇರ ಸಂಬಳ ಪಾವತಿಯ ಸಮಸ್ಯೆ ಬಹಳ ದಿನದಿಂದ ಇದೆ. ಇದಕ್ಕೆ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಸಿದ್ದರಾಮಯ್ಯ ಸರ್ಕಾರ ಕಾರ್ಯ ಮಾಡುಸುತ್ತಿದೆ. ಮೈಸೂರಿನಲ್ಲಿ ಪೌರ ಕಾರ್ಮಿಕರನ್ನು ನೇರ ನೇಮಕಾತಿ ಮಾಡಿಕೊಳ್ಳಲಾಗಿದೆ. ಅದರಂತೆ ಅವಳಿ ನಗರದಲ್ಲೂ ನೇರ ನೇಮಕಾತಿ ಮಾಡಿಕೊಳ್ಳುವಂತೆ ಮುಖ್ಯಮಂತ್ರಿ ಗಮನ ಸೆಳೆಯಲಾಗುವುದು ಎಂದರು.ಶಾಸಕ ಮಹೇಶ ಟೆಂಗಿನಕಾಯಿ ಮಾತನಾಡಿ, 870 ಪೌರ ಕಾರ್ಮಿಕರನ್ನು ನೇರ ನೇಮಕಾತಿ ಮಾಡಿಕೊಳ್ಳಬೇಕಿತ್ತು. ಸದ್ಯ 127 ಪೌರ ಕಾರ್ಮಿಕರನ್ನು ನೇಮಕ ಮಾಡಿಕೊಳ್ಳಲಾಗಿದೆ. ಉಳಿದವರನ್ನೂ ಶೀಘ್ರದಲ್ಲಿ ನೇಮಕ ಮಾಡಿಕೊಳ್ಳಬೇಕು. ಬಾಕಿ ಹಣ ಬಿಡುಗಡೆ ಮಾಡಬೇಕು. ಈ ಕುರಿತು ರಾಜ್ಯ ಸರ್ಕಾರದ ಗಮನ ಸೆಳೆಯುವುದಾಗಿ ತಿಳಿಸಿದರು. ಮೇಯರ್ ರಾಮಪ್ಪ ಬಡಿಗೇರ ಪ್ರಾಸ್ತಾವಿಕವಾಗಿ ಮಾತನಾಡಿದರು.
ಆಯುಕ್ತ ಡಾ. ರುದ್ರೇಶ ಘಾಳಿ, ಉಪ ಮೇಯರ್ ದುರ್ಗಮ್ಮ ಬಿಜವಾಡ, ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ರಾಜಣ್ಣ ಕೊರವಿ, ಪಾಲಿಕೆ ಸದಸ್ಯರಾದ ಉಮಾ ಮುಕುಂದಿ, ರೂಪಾ ಶೆಟ್ಟಿ, ದೊರಾಜ್ ಮಣಿಕುಂಟ್ಲಾ, ಅರ್ಜುನ ಪಾಟೀಲ, ಸರಸ್ವತಿ ಧೋಂಗಡಿ, ಪ್ರೀತಿ ಖೋಡೆ, ಪೌರ ಕಾರ್ಮಿಕರ ಸಂಘದ ಜಿಲ್ಲಾಧ್ಯಕ್ಷ ವಿಜಯ ಗುಂಟ್ರಾಳ ಇತರರು ಇದ್ದರು.