ಅಂಕಗಳು ಪ್ರತಿಭಾವಂತರನ್ನು ಅಳೆವ ಮಾನದಂಡವಲ್ಲ: ಪ್ರಕಾಶಮಾನ ಪತ್ರಿಕೆ ಸಂಪಾದಕ ಸ್ವಾಗತ್

KannadaprabhaNewsNetwork |  
Published : Jul 11, 2025, 11:48 PM IST
11ಎಚ್ಎಸ್ಎನ್17 :  | Kannada Prabha

ಸಾರಾಂಶ

ಶಿಕ್ಷಣ ಎಂದರೆ ಯಾವುದನ್ನು ಮಾಡಬೇಕು ಎನ್ನುವುದಕ್ಕಿಂತ ಯಾವುದನ್ನು ಮಾಡಬಾರದು ಎಂಬುದನ್ನು ಹೇಳಿಕೊಡುವಂಥದ್ದು. ನಮ್ಮ ಕಾಲೇಜು ಪ್ರಾರಂಭವಾದ ದಿನದಿಂದ ಉತ್ತಮ ಫಲಿತಾಂಶ ನೀಡುವ ಮೂಲಕ ನಮ್ಮ ವಿದ್ಯಾರ್ಥಿಗಳು ಜಿಲ್ಲೆ ಮತ್ತೆ ರಾಜ್ಯಕ್ಕೆ ಟಾಪರ್‌ಗಳಾಗಿ ಹೊರ ಹೊಮ್ಮುತ್ತಿದೆ.

ಕನ್ನಡಪ್ರಭ ವಾರ್ತೆ ಹಾಸನ

ಕೇವಲ ಪರೀಕ್ಷೆಯಲ್ಲಿ ೧೦೦ಕ್ಕೆ ೧೦೦ ಅಂಕ ಪಡೆದವರಷ್ಟೇ ಬುದ್ದಿವಂತರಲ್ಲ. ನಮ್ಮ ನೆಚ್ಚಿನ ಕ್ಷೇತ್ರ ಯಾವುದು ಎಂಬುದನ್ನು ಸರಿಯಾದ ಸಮಯದಲ್ಲಿ ಅರಿತು ಸರಿಯಾದ ವೇದಿಕೆ ಮೂಲಕ ಅದನ್ನು ಪ್ರದರ್ಶಿಸುವ ಪ್ರತಿಯೊಬ್ಬರೂ ಪ್ರತಿಭಾವಂತರೇ ಎಂದು ಪ್ರಕಾಶಮಾನ ಪತ್ರಿಕೆ ಸಂಪಾದಕ ಸ್ವಾಗತ್ ಎಂ.ಎಸ್ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ನಗರದ ಬ್ರಿಗೇಡ್ ಪಿಯು ಕಾಲೇಜಿನಲ್ಲಿ ಹಮ್ಮಿಕೊಳ್ಳಲಾಗಿದ್ದ ಪ್ರತಿಭಾ ಪುರಸ್ಕಾರ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಇಂದು ಬಹುತೇಕ ಶಿಕ್ಷಣ ಸಂಸ್ಥೆಗಳು ವಿದ್ಯಾರ್ಥಿಗಳನ್ನು ಅಂಕ ಗಳಿಸುವ ಯಂತ್ರಗಳನ್ನಾಗಿ ಮಾಡುತ್ತಿದ್ದು, ವಿದ್ಯಾರ್ಥಿಗಳ ಆಯ್ಕೆಯ ಕ್ಷೇತ್ರಗಳನ್ನು ಗುರುತಿಸುವಲ್ಲಿ ಹಿಂದೆ ಬೀಳುತ್ತಿವೆ. ವಿದ್ಯಾರ್ಥಿ ಜೀವನದಲ್ಲಿ ಉತ್ತಮವಾಗಿ ವ್ಯಾಸಂಗ ಮಾಡಿ ಅಂಕ ಪಡೆಯುವುದು ತಪ್ಪಲ್ಲ. ಆದರೆ ಅಂಕಗಳೇ ಜೀವನದಲ್ಲಿ ಪ್ರತಿಭಾವಂತರನ್ನು ಅಳೆಯುವ ಮಾನದಂಡವಾಗಬಾರದು. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಸಿಕ್ಕ ಅವಕಾಶಗಳನ್ನು ಸದುಪಯೋಗಪಡಿಸಿಕೊಳ್ಳುವ ಮೂಲಕ ನೆಚ್ಚಿನ ಕ್ಷೇತ್ರಗಳನ್ನು ಆಯ್ಕೆ ಮಾಡಿಕೊಂಡು ಬದುಕನ್ನು ಸದೃಢವಾಗಿ ರೂಪಿಸಿಕೊಳ್ಳಬೇಕೆಂದು ಕರೆ ನೀಡಿದರು.

ಇಂಗ್ಲಿಷ್ ವಿಭಾಗದ ಸಂಪನ್ಮೂಲ ವ್ಯಕ್ತಿ ಲಕ್ಷ್ಮೀ ಪ್ರಸನ್ನ ಮಾತನಾಡಿ, ಕೇವಲ ಅಕ್ಷರ ಕಲಿತವನು ಅಕ್ಷರವಂತನಾಗುತ್ತಾನೆ. ಅಕ್ಷರದೊಟ್ಟಿಗೆ ಸಮಾಜಮುಖಿ ಜ್ಞಾನ ಹೊಂದಿದವರಷ್ಟೇ ವಿದ್ಯಾವಂತರಾಗುತ್ತಾರೆ. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಜನ್ಮಕೊಟ್ಟ ತಂದೆ- ತಾಯಿ, ಅಕ್ಷರ ಕಲಿಸಿದ ಗುರು ಹಾಗೂ ಸಮಾಜಕ್ಕೆ ಕೃತಜ್ಞರಾಗಿರಬೇಕು. ಇಂದು ದೊಡ್ಡ ದೊಡ್ಡ ಸಾಧನೆಗೈದ ಸಾಧಕರಾರೂ ಒಂದೇ ಪ್ರಯತ್ನಕ್ಕೆ ಉನ್ನತ ಸ್ಥಾನಗಳನ್ನು ಏರಿದವರಲ್ಲ, ಏಳು- ಬೀಳುಗಳನ್ನು ಕಂಡು ಉನ್ನತ ಸ್ಥಾನಗಳನ್ನು ಅಲಂಕರಿಸಿದ್ದಾರೆ. ಉತ್ತಮ ಗುರಿ, ಸಾಧಿಸುವ ಛಲವಿದ್ದರೆ ಗೆಲುವು ಲಭ್ಯವಾಗುತ್ತದೆ ಎಂದರು.

ಕಾಲೇಜಿನ ಪ್ರಾಂಶುಪಾಲರಾದ ಎಸ್.ವಿಜಯ್ ಶಂಕರ್ ಮಾತನಾಡಿ, ಶಿಕ್ಷಣ ಎಂದರೆ ಯಾವುದನ್ನು ಮಾಡಬೇಕು ಎನ್ನುವುದಕ್ಕಿಂತ ಯಾವುದನ್ನು ಮಾಡಬಾರದು ಎಂಬುದನ್ನು ಹೇಳಿಕೊಡುವಂಥದ್ದು. ನಮ್ಮ ಕಾಲೇಜು ಪ್ರಾರಂಭವಾದ ದಿನದಿಂದ ಉತ್ತಮ ಫಲಿತಾಂಶ ನೀಡುವ ಮೂಲಕ ನಮ್ಮ ವಿದ್ಯಾರ್ಥಿಗಳು ಜಿಲ್ಲೆ ಮತ್ತೆ ರಾಜ್ಯಕ್ಕೆ ಟಾಪರ್‌ಗಳಾಗಿ ಹೊರ ಹೊಮ್ಮುತ್ತಿದ್ದು, ಉತ್ತಮ ಅಂಕಪಡೆದ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಉತ್ತಮ ಪ್ರದರ್ಶನ ನೀಡಿದ ವಿದ್ಯಾರ್ಥಿಗಳಿಗೆ ಅಭಿನಂದಿಸುವ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಈ ವರ್ಷವೂ ನಮ್ಮ ಕಾಲೇಜಿನ ವಿದ್ಯಾರ್ಥಿಗಳು ಕಾಲೇಜಿನ ಕೀರ್ತಿ ಹೆಚ್ಚಿಸಬೇಕೆಂದರು.

ದ್ವಿತೀಯ ಪಿಯುಸಿಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು. ವೇದಿಕೆ ಮೇಲೆ ಹಿರಿಯ ಪ್ರಾದ್ಯಾಪಕರಾದ ಲತಾ ಸೇರಿದಂತೆ ಇನ್ನಿತರರು ಹಾಜರಿದ್ದರು.

PREV