ಧಾರವಾಡ: ವಿದ್ಯಾರ್ಥಿಗಳ ಪ್ರತಿಭೆಗೆ ಮನ್ನಣೆ ಸಿಗಬೇಕು, ಆಗ ಮಾತ್ರ ಅವರು ಪಟ್ಟ ಪರಿಶ್ರಮ ಸಾರ್ಥಕವಾಗುತ್ತದೆ. ಜೀವನದಲ್ಲಿ ಕೇವಲ ಅಂಕಗಳಿಕೆ ಮಾತ್ರ ಅಂತಿಮವಲ್ಲ. ಪಠ್ಯ ಹೊರತು ಪಡಿಸಿ ವಿದ್ಯಾರ್ಥಿಗಳಲ್ಲಿನ ಕೌಶಲ್ಯ ಹೊರತರುವ ಪ್ರಯತ್ನವಾಗಬೇಕಾಗಿದೆ. ಕೇವಲ ಓದಿನಿಂದ ಸಾಧನೆ ಅಲ್ಲ. ಕ್ರೀಡೆ, ಸಾಂಸ್ಕೃತಿಕ ಚಟುವಟಿಕೆ, ಹಾಡುಗಾರಿಕೆ, ನೃತ್ಯದಂತಹ ಹವ್ಯಾಸಗಳು ಸಹ ಮಕ್ಕಳ ಭವಿಷ್ಯ ರೂಪಿಸಬಲ್ಲದು ಎಂದು ಜೆಎಸ್ಸೆಸ್ ಕಾರ್ಯದರ್ಶಿ ಡಾ. ಅಜಿತ ಪ್ರಸಾದ ಹೇಳಿದರು.
ಜೆ.ಎಸ್.ಎಸ್ ಸಭಾಭವನದಲ್ಲಿ ಆಯೋಜಿಸಿದ್ದ ಧಾರವಾಡ ಜೈನ್ ಮಿಲನದ ನೂತನ ಪದಾಧಿಕಾರಿಗಳ ಪದಗ್ರಹಣ ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಕಲಿಕಾ ಸಾಮಗ್ರಿಗಳ ವಿತರಣೆಯಲ್ಲಿ ಮಾತನಾಡಿ, ಧಾರವಾಡ ಜೈನ್ ಮಿಲನದ ಅಡಿಯಲ್ಲಿ ವಿದ್ಯಾರ್ಥಿಗಳ ಶೈಕ್ಷಣಿಕ ಏಳಿಗೆಗಾಗಿ ಪ್ರತಿ ವರ್ಷ ಶಿಷ್ಯವೇತನ ಮೂಲಕ ಅವರ ಶ್ರೇಯೋಭಿವೃದ್ಧಿಗೆ ಶ್ರಮಿಸುತ್ತಿದೆ. ಇಂದು ಸಹ ಪ್ರತಿಭಾವಂತ ಕನ್ನಡ ಮಾಧ್ಯಮ ಶಾಲೆಯ ಹೈಸ್ಕೂಲ್ ವಿದ್ಯಾರ್ಥಿಗಳಿಗೆ ಕಲಿಕಾ ಸಾಮಗ್ರಿ ವಿತರಿಸಿ ಅವರ ಶಿಕ್ಷಣಕ್ಕೆ ಸಹಾಯ ಹಸ್ತ ಚಾಚಿದೆ ಎಂದರು.ಶಾಂತರಾಜ ಮಲ್ಲಸಮುದ್ರ ಅಧ್ಯಕ್ಷತೆ ವಹಿಸಿ,ಜೈನ್ ಸಾಹಿತ್ಯ ಸಂಸ್ಕೃತಿ ಉಳಿಸುವ ಕೆಲಸ ಸಮಾಜದ ಯುವಕರಿಂದ ಆಗಬೇಕಾಗಿದೆ. ವಿದ್ಯಾರ್ಥಿಗಳು ನಯ, ವಿನಯದೊಂದಿಗೆ ಸಂಸ್ಕಾರ ಭರಿತ ಶಿಕ್ಷಣ ಪಡೆಯಬೇಕು.ಆಗ ಮಾತ್ರ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ ಎಂದರು.
ಡಾ.ಸೂರಜ್ ಜೈನ್ ಸ್ವಾಗತಿಸಿದರು, ರಾಜೇಶ್ವರಿ ಶೆಟ್ಟಿ ಸ್ವಾಗತ ಗೀತೆ ಹಾಡಿದರು. ಸುಜಾತಾ ಹಡಗಲಿ, ಸಂಗೀತಾ ಉಪಾದ್ಯೆ, ಮಹಾವೀರ ಉಪಾದ್ಯೆ, ಜಿನದತ್ತ ಹಡಗಲಿ, ಜಿನ್ನಪ್ಪ ಕುಂದಗೊಳ, ರತ್ನಾಕರ ಹೊಳಗಿ, ಮೋಹನಕುಮಾರ ಗೋಗಿ ಇದ್ದರು. ವೈಶಾಲಿ ಹೊನ್ನಪ್ಪನವರ ವಂದಿಸಿದರು.ಸುನಂದಾ ವರೂರು ನಿರೂಪಿಸಿದರು. ಇದೇ ಸಂದರ್ಭದಲ್ಲಿ ವಾಣಿ ಪ್ರಸಾದ ಮತ್ತು ಡಾ. ಅಜಿತ ಪ್ರಸಾದರವರನ್ನು ಸನ್ಮಾನಿಸಲಾಯಿತು.