ಮುಂಡಗೋಡ: ಅತಿಹೆಚ್ಚು ವಾಹನ ಸಾಂದ್ರತೆ ಹೊಂದಿರುವ ತಾಲೂಕಿನ ಶಿರಸಿ-ಹುಬ್ಬಳ್ಳಿ (ಕುಮಟಾ-ತಡಸ್) ರಾಜ್ಯ ಹೆದ್ದಾರಿ ಸೇರಿದಂತೆ ಬಹುತೇಕ ರಸ್ತೆಗಳು ಸಂಪೂರ್ಣ ಹೊಂಡಗಳಿಂದ ಕೂಡಿವೆ. ಈ ಮಾರ್ಗವಾಗಿ ಸಂಚರಿಸುವ ವಾಹನ ಸವಾರರು ಹರಸಾಹಸ ಪಡುವಂತಾಗಿದೆ.
ಪಾಳಾ-ಹಾನಗಲ್ ರಸ್ತೆ ಸೇರಿದಂತೆ ಬಹುತೇಕ ಹೆದ್ದಾರಿಗಳ ಸ್ಥಿತಿ ಕೂಡ ಇದಕ್ಕೆ ಭಿನ್ನವಾಗಿಲ್ಲ. ಅಷ್ಟೊಂದು ರಸ್ತೆ ಹದಗೆಟ್ಟು ಹೋಗಿದೆ. ಚಾಲಕರಿಗೆ ಈ ಮಾರ್ಗವಾಗಿ ಸಂಚರಿಸುವುದೇ ಒಂದು ಹಿಂಸೆಯಾಗಿ ಪರಿಣಮಿಸಿದೆ. ಅಧಿಕಾರಿ, ಜನಪ್ರತಿನಿಧಿಗಳ ವಿರುದ್ಧ ಹಿಡಿಶಾಪ ಹಾಕುತ್ತಾ ಪ್ರಯಾಣಿಸುತ್ತಾರೆ. ರಸ್ತೆಗಳು ಇಷ್ಟೊಂದು ಹದಗೆಟ್ಟರೂ ರಸ್ತೆ ನಿರ್ವಹಣೆಗೆ ಮುಂದಾಗದೇ ಇರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
೧೩ ವರ್ಷದಿಂದ ಮರು ಡಾಂಬರೀಕರಣವಾಗದ ಹೆದ್ದಾರಿ:೨೦೧೧-೧೨ನೇ ಸಾಲಿನಲ್ಲಿ ಡಾಂಬರೀಕರಣವಾದ ಶಿರಸಿ-ಹುಬ್ಬಳ್ಳಿ ರಸ್ತೆ ೧೨ ವರ್ಷ ಕಳೆದರೂ ಮರು ಡಾಂಬರೀಕರಣ ಮಾಡಲಾಗಿಲ್ಲ. ಪ್ರತಿ ವರ್ಷ ಮಳೆಗಾಲ ಮುಗಿದ ತಕ್ಷಣ ದುರಸ್ತಿ ಹಾಗೂ ನಿರ್ವಹಣೆ ಹೆಸರಲ್ಲಿ ತೇಪೆ ಹಚ್ಚುವ ಕೆಲಸ ಮಾಡುತ್ತಾ ಬರಲಾಗಿದೆ. ಮರು ಡಾಂಬರೀಕರಣದ ಗೋಜಿಗೆ ಹೋಗಿಲ್ಲ. ಇದು ಸಾರ್ವಜನಿಕರ ಅಸಮಾಧಾನಕ್ಕೆ ಕಾರಣವಾಗಿದೆ.
ಸದ್ಯ ಮಳೆ ಇರುವುದರಿಂದ ತಾತ್ಕಾಲಿಕವಾಗಿ ಜಲ್ಲಿ ಹಾಕಿ ಗುಂಡಿ ಮುಚ್ಚಲಾಗಿದೆ. ರಸ್ತೆ ಮೇಲೆ ನಿಲ್ಲುವ ನೀರನ್ನು ಕಾಲುವೆ ಮೂಲಕ ಹೊರ ಹಾಕುವ ಕೆಲಸ ಮಾಡಲಾಗುತ್ತಿದೆ. ಮಳೆಗಾಲ ಮುಗಿದ ಬಳಿಕ ಡಾಂಬರೀಕರಣ ಮಾಡಲಾಗುವುದು.
ಶಿರಸಿ-ಹುಬ್ಬಳ್ಳಿ ಪಾಳಾ-ಹಾನಗಲ್ ರಸ್ತೆ ಸಂಪೂರ್ಣ ಹಾಳಾಗಿದೆ. ವಾಹನ ತಿರುಗಾಡದಷ್ಟು ದುಸ್ಥಿತಿಗೆ ತಲುಪಿವೆ. ಇದರಿಂದ ನಿತ್ಯ ಬಹಳಷ್ಟು ಅಪಘಾತಗಳು ನೆಡಯುತ್ತಿವೆ. ತಕ್ಷಣ ಗುಂಡಿಗಳನ್ನು ಮುಚ್ಚಿ ಅದನ್ನು ತಡೆಯಬೇಕು. ಮಳೆಗಾಲ ಮುಗಿದ ಬಳಿಕ ಈ ರಸ್ತೆಗಳನ್ನು ಸಂಪೂರ್ಣ ಮರು ಡಾಂಬರೀಕರಣ ಮಾಡಬೇಕು.