ಮದುವೆ ಎಂದರೆ ಜೀವನ ರಥದ ಎರಡು ಚಕ್ರ ಇದ್ದಂತೆ

KannadaprabhaNewsNetwork |  
Published : Feb 11, 2025, 12:49 AM IST
10ಎಚ್‌ಪಿಟಿ1-ಹೊಸಪೇಟೆ ತಾಲೂಕಿನ ಕಾರಿನೂರು ಗ್ರಾಮದ ಶ್ರೀ ಪಾಂಡುರಂಗ ದೇವಸ್ಥಾನದಲ್ಲಿ ನೂತನ ಕಲ್ಯಾಣ ಮಂಟಪದ ಉದ್ಘಾಟನೆ ಹಾಗೂ ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮ ನಡೆಯಿತು. | Kannada Prabha

ಸಾರಾಂಶ

ಪ್ರತಿನಿತ್ಯವೂ ಒಬ್ಬರಿಗೊಬ್ಬರು ಅರ್ಥ ಮಾಡಿಕೊಂಡು ಜೀವನ ಸಾಗಿಸಬೇಕು.

ಹೊಸಪೇಟೆ: ಮದುವೆ ಎಂದರೆ ಜೀವನ ರಥದ ಎರಡು ಚಕ್ರಗಳಿದ್ದ ಹಾಗೆ; ಆದ್ದರಿಂದ ಪ್ರತಿನಿತ್ಯವೂ ಒಬ್ಬರಿಗೊಬ್ಬರು ಅರ್ಥ ಮಾಡಿಕೊಂಡು ಜೀವನ ಸಾಗಿಸಬೇಕು ಎಂದು ಸ್ಥಳೀಯ ಶ್ರೀ ಜಗದ್ಗುರು ಕೊಟ್ಟೂರು ಸ್ವಾಮಿ ಸಂಸ್ಥಾನ ಮಠದ ಶ್ರೀ ಬಸವಲಿಂಗ ಸ್ವಾಮೀಜಿ ಹೇಳಿದರು.

ತಾಲೂಕಿನ ಕಾರಿನೂರು ಗ್ರಾಮದ ಶ್ರೀ ಪಾಂಡುರಂಗ ದೇವಸ್ಥಾನದಲ್ಲಿ ಪ್ರವಾಸೋದ್ಯಮ ಇಲಾಖೆ ಹಾಗೂ ಲೋಕೋಪಯೋಗಿ ಇಲಾಖೆಯ ಸಹಯೋಗದಲ್ಲಿ ಭಾನುವಾರ ನೂತನ ಕಲ್ಯಾಣ ಮಂಟಪದ ಉದ್ಘಾಟನೆ ಹಾಗೂ ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.

ಅನಾವಶ್ಯಕ ಕಾರಣಗಳಿಗೆ ಅಥವಾ ಮೂರನೇ ವ್ಯಕ್ತಿಗಳ ಚುಚ್ಚು ಮಾತುಗಳಿಗೆ ಬಲಿಯಾಗದೆ ಸಾಮರಸ್ಯ ಕಾಪಾಡಿಕೊಂಡು ಹೋಗಬೇಕು. ಚುಚ್ಚುಮಾತುಗಳಿಗೆ ಬಲಿಯಾಗಿ ಎಷ್ಟೋ ಸಂಸಾರಗಳು ಬೀದಿಗೆ ಬಂದಿವೆ ಎಂದು ವಿಷಾದಿಸಿದರು.

ಇತ್ತೀಚಿನ ದಿನಗಳಲ್ಲಿ ಮದುವೆ ಎಂದರೆ ಅತ್ಯಂತ ವಿಜೃಂಭಣೆ, ದುಂದುವೆಚ್ಚ ಮಾಡುವುದೇ ಆಗಿದೆ. ಈ ರೀತಿ ಮಾಡುವುದರಿಂದ ಹೆಣ್ಣಿನ ಹಾಗೂ ಗಂಡನ ಮನೆಯವರಿಗೂ ವಿಪರೀತ ಆರ್ಥಿಕವಾಗಿ ಹೊರೆ ಆಗುವುದು. ನಂತರದ ದಿನಗಳಲ್ಲಿ ಆ ಸಾಲ ತೀರಿಸಲಾಗದೆ ಹಲವಾರು ಆರ್ಥಿಕ ಸಮಸ್ಯೆಗಳು ಉಂಟಾಗುತ್ತಿರುವುದು ಇಂದಿನ ದಿನಗಳಲ್ಲಿ ಸರ್ವೇ ಸಾಮಾನ್ಯವಾಗಿದೆ. ಆದ್ದರಿಂದ ಸಾಮೂಹಿಕ ವಿವಾಹಗಳು ಆರ್ಥಿಕವಾಗಿ ಹಿಂದುಳಿದ ದುರ್ಬಲ ವರ್ಗದವರಿಗೆ ವರದಾನವಾಗಿದೆ. ಸಾಮೂಹಿಕ ವಿವಾಹಗಳು ಹೆಚ್ಚು ನಡೆಸಬೇಕು ಎಂದರು.

ಗಂಗಾವತಿ, ಬೃಹನ್ ಮಠ ಅರಳಿಹಳ್ಳಿಯ ಪೂಜಾರಿ ಗವಿಸಿದ್ದೇಶ್ವರ ತಾತನವರು ಸಾನ್ನಿಧ್ಯ ವಹಿಸಿದ್ದರು.

ಹೊಸಪೇಟೆ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಚ್.ಎನ್. ಮೊಹಮ್ಮದ್ ಇಮಾನ್ ನಿಯಾಜಿ, ನಗರಸಭೆ ಅಧ್ಯಕ್ಷ ರೂಪೇಶ್ ಕುಮಾರ್, ಸದಸ್ಯ ಎಚ್.ಕೆ. ಮಂಜುನಾಥ, ಮುಖಂಡರಾದ ಗುಜ್ಜಲ್ ಗಣೇಶ್, ಪಿ. ವೆಂಕಟೇಶ, ಬೋಡ ರಾಮಪ್ಪ, ಹರಿಹರೇಶ್ವರ ಸೇವಾ ಟ್ರಸ್ಟ್‌ನ ಪದಾಧಿಕಾರಿಗಳಾದ ಪರಮೇಶ್ವರ, ರಂಗಯ್ಯ, ಯರಿಸ್ವಾಮಿ ಜಡಿಯಪ್ಪ ಕಾರಿಗನೂರು ಗ್ರಾಮದ ಮುಖಂಡರು ಇದ್ದರು.

PREV

Recommended Stories

ದೇಶದ ನಾಯಕರಾಗಲು ಶಾಲೆಯಲ್ಲಿ ನಾಯಕತ್ವ ವಹಿಸಿಕೊಳ್ಳಿ
ಪರಿಷ್ಕೃತ ಜಿಎಸ್‌ಟಿ ಬಡ ಜನತೆಗೆ ಅನುಕೂಲ