ಅನಾಥ ಹೆಣ್ಣು ಮಕ್ಕಳಿಗೆ ವಿವಾಹ: ಧಾರೆ ಎರೆದ ಉಡುಪಿ ಡಿಸಿ

KannadaprabhaNewsNetwork |  
Published : Dec 13, 2025, 03:00 AM IST
ಉಡುಪಿ ರಾಜ್ಯ ಮಹಿಳಾ ನಿಲಯದ ಇಬ್ಬರು ಅನಾಾಥ ಯುವತಿಯರಿಗೆ ಡಿಸಿ ಸ್ವರೂಪ ಅವರು ಮುಂದೆ ನಿಂತು ಮದುವೆ ಮಾಡಿಸಿದರು. | Kannada Prabha

ಸಾರಾಂಶ

ನಿಟ್ಟೂರಿನಲ್ಲಿರುವ ರಾಜ್ಯ ಮಹಿಳಾ ನಿಲಯದ ಇಬ್ಬರು ಅನಾಥ ಹೆಣ್ಣು ಮಕ್ಕಳಿಗೆ ಜಿಲ್ಲಾಡಳಿತದ ನೇತೃತ್ವದಲ್ಲಿ ಅದ್ಧೂರಿಯಾಗಿ ವಿವಾಹ ಕಾರ್ಯಕ್ರಮ ನೆರವೇರಿದ್ದು, ಜಿಲ್ಲಾಧಿಕಾರಿಯೇ ಮುಂದೆ ನಿಂತು ಕನ್ಯಾದಾನ ಮಾಡಿದ್ದು ವಿಶೇಷವಾಗಿತ್ತು.

ಉಡುಪಿಯ ರಾಜ್ಯ ಮಹಿಳಾ ನಿಲಯದಲ್ಲಿ ಇಬ್ಬರು ಹಣ್ಣುಮಕ್ಕಳಿಗೆ ಅದ್ಧೂರಿ ವಿವಾಹ

ಉಡುಪಿ: ಇಲ್ಲಿನ ನಿಟ್ಟೂರಿನಲ್ಲಿರುವ ರಾಜ್ಯ ಮಹಿಳಾ ನಿಲಯ ಶುಕ್ರವಾರ ಇಬ್ಬರು ಅನಾಥ ಯುವತಿಯರು ಹೊಸ ಬದುಕಿಗೆ ಕಾಲಿಡುವ ಸಂಭ್ರಮಕ್ಕೆ ಸಾಕ್ಷಿಯಾಯಿತು. ಈ ಮಹಿಳಾ ನಿಲಯದ ಇಬ್ಬರು ಅನಾಥ ಹೆಣ್ಣು ಮಕ್ಕಳಿಗೆ ಜಿಲ್ಲಾಡಳಿತದ ನೇತೃತ್ವದಲ್ಲಿ ಅದ್ಧೂರಿಯಾಗಿ ವಿವಾಹ ಕಾರ್ಯಕ್ರಮ ನೆರವೇರಿದ್ದು, ಜಿಲ್ಲಾಧಿಕಾರಿಯೇ ಮುಂದೆ ನಿಂತು ಕನ್ಯಾದಾನ ಮಾಡಿದ್ದು ವಿಶೇಷವಾಗಿತ್ತು.

ವಿವಾಹವಾದ ಯುವತಿ ಸುಶೀಲಾ ಮೂಗಿ ಮತ್ತು ಕಿವುಡಿ, ತನ್ನ ಈ ನ್ಯೂನತೆ ಮೆಟ್ಟಿನಿಂತು ಮಹಿಳಾ ನಿಲಯದ ಹುಣಿಸೆ ಹಣ್ಣು ಸಂಸ್ಕರಣಾ ಘಟಕದಲ್ಲಿ ಕೆಲಸ ಮಾಡುತಿದ್ದರು. ಅವರನ್ನು ಹಾಸನ ಜಿಲ್ಲೆಯ ಹೊಳೆನರಸಿಪುರದ ನಿವಾಸಿ, ಬೆಂಗಳೂರಿನಲ್ಲಿ ಕ್ಯಾಂಟೀನ್ ನಡೆಸುವ ನಾಗರಾಜ್ ಮೆಚ್ಚಿ ಕೈ ಹಿಡಿದು, ಹೊಸ ಬಾಳು ನೀಡಿದ್ದಾರೆ.

ಇನ್ನೊಬ್ಬ ಯುವತಿ ಮಲ್ಲೇಶ್ವರಿ ಈಗ ಅಂತಿಮ ವರ್ಷದ ಪದವಿ ವಿದ್ಯಾರ್ಥಿನಿ, ಅವರನ್ನು ಎಂಕಾಂ ಮಾಡಿ ಬೆಂಗಳೂರಿನ ಬಿಬಿಎಂ ಕಂಪನಿಯಲ್ಲಿ ಉದ್ಯೋಗದಲ್ಲಿರುವ, ದ.ಕ. ಜಿಲ್ಲೆಯ ಬಪ್ಪನಾಡಿನ ಸಂಜಯ ಪ್ರಭು ಅವರು ವರಿಸಿದ್ದಾರೆ, ಮಾತ್ರವಲ್ಲ ಪತ್ನಿಯ ಮುಂದೆಯೂ ಓದಿನ ಜವಾಬ್ದಾರಿಯನ್ನೂ ಆತ ಹೊತ್ತುಕೊಂಡಿದ್ದಾರೆ.ಈ ಮಹಿಳಾ ನಿಲಯದ ಇತರ ನಿವಾಸಿಗಳು ಸಂಭ್ರಮದಿಂದ ತಮ್ಮ ಗೆಳತಿಯರ ಮದುವೆಗಾಗಿ ಇಡೀ ನಿಲಯವನ್ನೇ ಹೂವು ಮತ್ತು ರಂಗೋಲಿಗಳಿಂದ ಸಿಂಗರಿಸಿದ್ದರು. ವಿವಿಧ ಇಲಾಖೆಗಳ ಅಧಿಕಾರಿಗಳು ಸ್ವತಃ ಮದುವೆಗೆ ಬಂದವರನ್ನು ಸ್ವಾಗತಿಸುತಿದ್ದರು.

ಮಂಗಳ ವಾದ್ಯಘೋಷಗಳೊಂದಿಗೆ ಆಹ್ಪಾನಿತ ಗಣ್ಯರ ಸಮ್ಮುಖದಲ್ಲಿ ಉಡುಪಿ ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ. ಅವರೇ ಧಾರೆ ಎರೆದು, ಕನ್ಯಾದಾನ ಮಾಡಿದರು, ನಂತರ ನವ ವಿವಾಹಿತ ದಂಪತಿಗಳಿಗೆ ಆರತಿಯನ್ನೂ ಬೆಳಗಿ ಶುಭ ಹಾರೈಸಿದರು. ಡಿವೈಎಸ್ಪಿ ಪ್ರಭು, ಮಕ್ಕಳ ಮತ್ತು ಮಹಿಳಾ ಕಲ್ಯಾಣ ಇಲಾಖೆಯ ಉಪನಿರ್ದೇಶಕಿ ಶ್ಯಾಮಲಾ ಸಿ.ಕೆ. ಮತ್ತು ನಿರೂಪಣಾಧಿಕಾರಿ ಅನುರಾಧ ಹಾದಿಮನಿ ಅವರು ವಧುಗಳ ಹಿರಿಯರ ಸ್ಥಾನದಲ್ಲಿ ನಿಂತು ಮದುವೆ ಮಾಡಿಸಿದರು.ಜಿ.ಪಂ. ಉಪ ಕಾರ್ಯದರ್ಶಿ ಎಸ್.ಎಸ್. ಕಾದ್ರೋಳ್ಳಿ, ಜಿಲ್ಲಾ ವಾರ್ತಾಧಿಕಾರಿ ಮಂಜುನಾಥ್ ಬಿ., ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಅಧಿಕಾರಿ ವೀಣಾ ವಿವೇಕಾನಂದ, ರಾಜ್ಯ ಮಹಿಳಾ ನಿಲಯದ ಸಿಬ್ಬಂದಿ, ನಿವಾಸಿನಿಯರು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಿಬ್ಬಂದಿ ಮತ್ತಿತರರು ಇದ್ದರು.

ಜಿಲ್ಲಾಡಳಿತದ ವತಿಯಿಂದ ನಿಯಮದಂತೆ ನವದಂಪತಿಗಳ ಹೆಸರಿನಲ್ಲಿ ತಲಾ 50 ಸಾವಿರ ರು.ಗಳನ್ನು ಠೇವಣಿಯಾಗಿಡಲಾಗಿದೆ. ಈ ಎರಡು ಮದುವೆಗಳೊಂದಿಗೆ ಈ ಮಹಿಳಾ ನಿಲಯದಲ್ಲಿ ನಡೆದ ಅನಾಥ ಯುವತಿಯರ ಮದುವೆಗಳ ಸಂಖ್ಯೆ 27 ಆಗಿದೆ ಎಂದು ನಿಯದ ಅಧಿಕ್ಷಕಿ ಪುಷ್ಪಾರಾಣಿ ಹೇಳಿದ್ದಾರೆ.

..........ಇಲ್ಲಿನ ಯುವತಿಯರಿಗೀಗ ಭಾರಿ ಬೇಡಿಕೆ

ಇತ್ತೀಚೆಗೆ ಕೃಷಿಕರಿಗೆ ಅಥವಾ ಸಾಧಾರಣ ಉದ್ಯೋಗದಲ್ಲಿರುವ ಯುವಕರಿಗೆ ಮುಖ್ಯವಾಗಿ ಬ್ರಾಹ್ಮಣ ಸಮುದಾಯದಲ್ಲಿ ಮದುವೆಗೆ ಹೆಣ್ಣುಗಳು ಸಿಗದ ಹಿನ್ನೆಲೆಯಲ್ಲಿ, ಅಂತಹ ಯುವಕರು ಉಡುಪಿ ಈ ಮಹಿಳಾ ನಿಲಯದ ಯುವತಿಯರನ್ನು ಮದುವೆಯಾಗುವುದಕ್ಕೆ ಸಾಕಷ್ಟು ಮಂದಿ ಅರ್ಜಿ ಸಲ್ಲಿಸಿದ್ದಾರೆ. ಕಾನೂನು ಪ್ರಕ್ರಿಯೆಗಳ ಮೂಲಕ ಅವರ ಹಿನ್ನೆಲೆಯನ್ನು ಪರಿಶೀಲಿಸಿ, ನಿಲಯದ ಯುವತಿಯರು ಒಪ್ಪಿದರೆ ಮದುವೆ ಮಾಡಿಸಲಾಗುತ್ತಿದೆ. ಪ್ರಸ್ತುತ ಉಡುಪಿ ರಾಜ್ಯ ನಿಲಯದಲ್ಲಿ ಇಬ್ಬರು ಬಾಲಕಿಯರು ಸೇರಿದಂತೆ 53 ಮಂದಿ ನಿವಾಸಿಗಳಿದ್ದಾರೆ. ಅವರಿಗೆ ಸರ್ಕಾರದ ಯೋಜನೆಗಳಡಿ ಶಿಕ್ಷಣ, ಕೌಶಲಾಭಿವೃದ್ಧಿ ತರಬೇತಿ. ಉದ್ಯೋಗಗಳನ್ನು ಓದಗಿಸಿಕೊಡಲಾಗುತ್ತಿದೆ. ಇಲ್ಲಿನ ನಾಲ್ವರು ಯುವತಿಯರು ಕಾಲೇಜಿಗೂ ಹೋಗುತ್ತಿದ್ದಾರೆ, ಅವರ ಸಂಬಂಧಿಕರು ಪತ್ತೆಯಾದರೆ ಮತ್ತೆ ಕುಟುಂಬದೊಂದಿಗೆ ಸೇರ್ಪಡೆ ಮಾಡಲಾಗುತ್ತದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬಲ್ಲಮಾವಟಿ ಭಗವತಿ ದೇವಸ್ಥಾನದಲ್ಲಿ ಶಡಾಧರ ಪೂಜಾ ಸಂಪನ್ನ
ಕಡಿಮೆ ಬೆಳೆ ವಿಮಾ ಮೊತ್ತ ಸರಿಪಡಿಸಿ ಮರು ಪಾವತಿಗೆ ಆಗ್ರಹ