ಹೊಸಪೇಟೆ: ಮದುವೆಗಳು ಕೇವಲ ದೈಹಿಕ ಭಾವನೆಗೆ ಸೀಮಿತವಾಗಿರದೇ ಮಾನಸಿಕವಾಗಿಯೂ ಗಟ್ಟಿಯಾಗಿರಬೇಕು. ಪರಸ್ಪರ ಅರ್ಥ ಮಾಡಿಕೊಂಡು ಜೀವನ ನಡೆಸಬೇಕು ಎಂದು ಕೊಟ್ಟೂರು ಸಂಸ್ಥಾನಮಠದ ಜ. ಶ್ರೀ ಕೊಟ್ಟೂರು ಬಸವಲಿಂಗ ಸ್ವಾಮೀಜಿ ಹೇಳಿದರು.
ಈ ಜಗತ್ತಿನಲ್ಲಿ ನಾನು, ನನ್ನದು ಎಂಬುದನ್ನು ಬಿಟ್ಟು ಪರೋಪಕಾರ ಮನೋಭಾವ ಹಾಗು ಇತರರ ಸಂತೋಷಕ್ಕಾಗಿಯೂ ಜೀವನವನ್ನು ಮುಡಿಪಾಗಿಡಬೇಕು. ಈ ನಿಟ್ಟಿನಲ್ಲಿ ಅಂಜುಮನ್ ಕಮಿಟಿಯ ಪರೋಪಕಾರಿ ಕಾರ್ಯಕ್ರಮಗಳನ್ನು ನಡೆಸುತ್ತಿದೆ. ಕೊಟ್ಟೂರು ಸ್ವಾಮಿ ಮಠದ ವತಿಯಿಂದ ಸರ್ವ ಧರ್ಮ ಸಮನ್ವಯದ ರಥೋತ್ಸವ ನಡೆಸಲಾಗುತ್ತದೆ. ಈ ರಥೋತ್ಸವದಲ್ಲಿ ಭಗವದ್ಗೀತೆ, ಕುರಾನ್, ಬೈಬಲ್ ಹಾಗೂ ಎಲ್ಲ ಧರ್ಮದವರ ಗ್ರಂಥಗಳನ್ನಿಡಲಾಗುತ್ತದೆ ಎಂದರು.
ಹೊಸಪೇಟೆ ಹುಡಾ ಅಧ್ಯಕ್ಷ ಹಾಗೂ ಅಂಜುಮನ್ ಕಮಿಟಿಯ ಅಧ್ಯಕ್ಷ ಎಚ್.ಎನ್. ಮಹಮ್ಮದ್ ಇಮಾಮ್ ನಿಯಾಜಿ ಮಾತನಾಡಿ, ಸಾಮೂಹಿಕ ವಿವಾಹಗಳಿಂದ ವಧು- ವರರ ತಂದೆ, ತಾಯಿಗಳಿಗೆ ಆರ್ಥಿಕ ಭಾರವನ್ನು ಕಡಿಮೆ ಮಾಡಿದಂತಾಗುತ್ತದೆ. ಇನ್ನು ವೈಯಕ್ತಿಕ ವಿವಾಹ ಸಮಾರಂಭಗಳಲ್ಲಿ ಕೇವಲ ಬಂಧುಗಳ ಆಶಿರ್ವಾದವಷ್ಟೇ ಇರುತ್ತದೆ. ಆದರೆ ಇಂತಹ ಸಾಮೂಹಿಕ ವಿವಾಹಗಳಲ್ಲಿ ಎಲ್ಲ ಧರ್ಮ ಗುರುಗಳ ಆಶೀರ್ವಾದ ದೊರೆಯಲಿದೆ ಎಂದರು.ಮುಸ್ಲಿಂ ಸಮುದಾಯದ ಧರ್ಮ ಗುರು ಮೆಹಬೂಬ್ ಪೀರಾ ಸಾಬ್, ಮುಖಂಡರಾದ ಆರ್ ಕೊಟ್ರೇಶ್, ಸಾಲಿ ಸಿದ್ದಯ ಸ್ವಾಮಿ, ಗುಜ್ಜಲ್ ನಾಗರಾಜ್, ರಿಯಾಜ್, ಮುಕ್ತಾರ್, ಎಮ್ ಫಿರೋಜ್ ಖಾನ್, ಎಮ್. ಡಿ. ಅಬೂಬಕ್ಕರ್, ಜಿ. ಅನ್ಸರ್ ಬಾಷಾ, ಡಾ. ಎಂ. ಡಿ. ದುರ್ವೇಶ್ ಮೈನುದ್ದಿನ್ ಮತ್ತಿತರರಿದ್ದರು.