ಮಾನವನ ಅಸ್ತಿತ್ವ ಹುಡುಕಲು ಮಂಗಳ ಗ್ರಹ ಮೈಲಿಗಲ್ಲು: ಸ್ವಾಮಿ

KannadaprabhaNewsNetwork |  
Published : Jul 21, 2026, 04:00 AM IST
Planetarium

ಸಾರಾಂಶ

ಬ್ರಹ್ಮಾಂಡದ ರಹಸ್ಯಗಳನ್ನು ಭೇದಿಸುವ ಮತ್ತು ಬಾಹ್ಯಾಕಾಶದಲ್ಲಿ ಮಾನವ ಕುಲದ ಅಸ್ತಿತ್ವ ಕಂಡುಕೊಳ್ಳುವ ಪಯಣದಲ್ಲಿ ಮಂಗಳ ಗ್ರಹವು ಅತ್ಯಂತ ಪ್ರಮುಖ ಮೈಲಿಗಲ್ಲು ಎಂದು ಭಾರತೀಯ ಮೂಲದ ನಾಸಾದ ಏರೋಸ್ಪೇಸ್‌ ಎಂಜಿನಿಯರ್‌ ಮತ್ತು ಆಸ್ಟ್ರೋನೇವ್‌ ಪ್ರಾಜೆಕ್ಟ್‌ ಮ್ಯಾನೇಜರ್‌  ಡಾ.ಸ್ವಾಮಿ ಮೋಹನ್‌ ಹೇಳಿದರು.

 ಬೆಂಗಳೂರು :  ಬ್ರಹ್ಮಾಂಡದ ರಹಸ್ಯಗಳನ್ನು ಭೇದಿಸುವ ಮತ್ತು ಬಾಹ್ಯಾಕಾಶದಲ್ಲಿ ಮಾನವ ಕುಲದ ಅಸ್ತಿತ್ವ ಕಂಡುಕೊಳ್ಳುವ ಪಯಣದಲ್ಲಿ ಮಂಗಳ ಗ್ರಹವು ಅತ್ಯಂತ ಪ್ರಮುಖ ಮೈಲಿಗಲ್ಲು ಎಂದು ಭಾರತೀಯ ಮೂಲದ ನಾಸಾದ ಏರೋಸ್ಪೇಸ್‌ ಎಂಜಿನಿಯರ್‌ ಮತ್ತು ಆಸ್ಟ್ರೋನೇವ್‌ ಪ್ರಾಜೆಕ್ಟ್‌ ಮ್ಯಾನೇಜರ್‌(ಜೆಪಿಎಲ್‌) ಡಾ.ಸ್ವಾಮಿ ಮೋಹನ್‌ ಹೇಳಿದರು.

ಸೋಮವಾರ ನಗರದ ಜವಾಹರಲಾಲ್‌ ನೆಹರು ತಾರಾಲಯದಲ್ಲಿ ಹಮ್ಮಿಕೊಂಡಿದ್ದ ಮಿಷನ್‌ ಮ್ಯಾರಥಾನ್‌- ಫ್ರೀಡಂ 250 ಮಾರ್ಸ್‌ ಆ್ಯಂಡ್‌ ಬಿಯಾಂಡ್‌ ಕುರಿತ ಸಂವಾದಲ್ಲಿ ಅವರು ಮಾತನಾಡಿದರು.

ಮಂಗಳ ಗ್ರಹವು ಭೂಮಿಗೆ ಅತ್ಯಂತ ಹತ್ತಿರದ ವಾತಾವರಣ ಹೊಂದಿದೆ

ಮಂಗಳ ಗ್ರಹವು ಭೂಮಿಗೆ ಅತ್ಯಂತ ಹತ್ತಿರದ ವಾತಾವರಣ ಹೊಂದಿದೆ. ಗುರುತ್ವಾಕರ್ಷಣೆ, ತಾಪಮಾನ ಮತ್ತು ಖನಿಜಗಳ ಲಭ್ಯತೆಯಲ್ಲಿ ಭೂಮಿಗೆ ಸಾಕಷ್ಟು ಹೋಲಿಕೆಯಿದೆ. ಶುಕ್ರ ಗ್ರಹದ ತೀವ್ರ ತಾಪಮಾನ ಅಥವಾ ಗುರು, ಶನಿ ಗ್ರಹಗಳ ಅನಿಲ ಸ್ವರೂಪಕ್ಕೆ ಹೋಲಿಸಿದರೆ, ಮಂಗಳ ಗ್ರಹದಲ್ಲಿ ತಂತ್ರಜ್ಞಾನ ಬಳಸಿಕೊಂಡು ಅಭಿವೃದ್ಧಿ ಸಾಧಿಸುವುದು ಸುಲಭ. ಮಂಗಳ ಗ್ರಹಕ್ಕೆ ತಲುಪಲು ಸುದೀರ್ಘ ಸಮಯ ಬೇಕಾಗಿರುವುದರಿಂದ ಬಾಹ್ಯಾಕಾಶ ಪ್ರಯಾಣದ ತಂತ್ರಜ್ಞಾನವನ್ನು ಮೊದಲು ಚಂದ್ರನ ಅಂಗಳದಲ್ಲಿ ಪರೀಕ್ಷಿಸಿ, ಆ ನಂತರ ಮಂಗಳ ಗ್ರಹದಲ್ಲಿ ಪ್ರಯೋಗಿಸುವುದು ಜಾಣತನದ ತಂತ್ರವಾಗಿದೆ ಎಂದು ಹೇಳಿದರು.

ನಾಸಾದಿಂದ ಮಂಗಳ ಗ್ರಹಕ್ಕೆ ಕಳುಹಿಸಲಾದ ಅತ್ಯಾಧುನಿಕ ಹಾಗೂ ಕಾರಿನ ಗಾತ್ರದ ಪರ್ಸಿವಿಯರೆನ್ಸ್ ರೋವರ್‌ ಮಂಗಳ ಗ್ರಹದ ಮೇಲ್ಮೈನಲ್ಲಿ ಇಳಿಯುವ ಪ್ರಕ್ರಿಯೆ ಅತ್ಯಂತ ಕಷ್ಟಕರವಾಗಿತ್ತು. ನಾವು ಸಾರಿರಾರು ಬಾರಿ ತಾಂತ್ರಿಕ ತರಬೇತಿ ಹಾಗೂ ತಾಲೀಮು ನಡೆಸಿದ್ದೆವು. ಆದರೂ ಸಹ ರೋವರ್‌ ಮಂಗಳ ಗ್ರಹದ ವಾತಾವರಣಕ್ಕೆ ಪ್ರವೇಶಿಸಿದಾಗ ತೀವ್ರ ಒತ್ತಡವಿತ್ತು. ರೋವರ್‌ನ ಪ್ಯಾರಾಶೂಟ್‌ ತೆರೆದುಕೊಳ್ಳುವ ಕ್ಷಣ ನಿರ್ಣಾಯಕವಾಗಿತ್ತು. 2021ರ ಫೆ.18ರಂದು ಮಂಗಳನ ಜೆಜೆರೊ ಕುಳಿ ಪ್ರದೇಶದಲ್ಲಿ ರೋವರ್‌ ಯಶಸ್ವಿಯಾಗಿ ಇಳಿಯಿತು. ಮಂಗಳ ಗ್ರಹದಿಂದ ಮೊದಲ ಪೂರ್ಣ ಚಿತ್ರ ಬಂದ ನಂತರವಷ್ಟೇ ನಮ್ಮ 8 ವರ್ಷಗಳ ನಿರಂತರ ಶ್ರಮಕ್ಕೆ ನಿಜವಾದ ಯಶಸ್ಸು ಸಿಕ್ಕಿತ್ತು ಎಂದು ಹೇಳಿದರು.

ಶುದ್ಧ ಆಮ್ಲಜನಕವನ್ನು ಉತ್ಪಾದಿಸುವಲ್ಲಿ ಯಶಸ್ವಿ

ಪರ್ಸಿವಿಯರೆನ್ಸ್ ರೋವರ್‌ಗೆ ಅಳವಡಿಸಲಾಗಿದ್ದ ಇಂಗಾಲದ ಡೈಆಕ್ಸೈಡ್‌ನಿಂದ ಆಮ್ಲಜನಕವನ್ನು ಉತ್ಪಾದಿಸುವ ‘ಮೋಕ್ಸಿ’ ಎಂಬ ಉಪಕರಣವು ಮಂಗಳ ಗ್ರಹದ ವಾತಾವರಣದಲ್ಲೇ ಶೇ.99.9ರಷ್ಟು ಶುದ್ಧ ಆಮ್ಲಜನಕವನ್ನು ಉತ್ಪಾದಿಸುವಲ್ಲಿ ಯಶಸ್ವಿಯಾಗಿತ್ತು. ಇದು ಭವಿಷ್ಯದ ಮಾನವರಹಿತ ಮಂಗಳ ಯಾತ್ರೆಗೆ ದಿಕ್ಸೂಚಿಯಾಗಲಿದೆ ಎಂದರು.

ಬಾಹ್ಯಾಕಾಶ ಸಂಶೋಧನೆಯು ಕೇವಲ ಒಂದು ದೇಶಕ್ಕೆ ಸೀಮಿತವಲ್ಲ. ನಾವು ಯಾರು, ಎಲ್ಲಿಂದ ಬಂದೆವು, ಬ್ರಹ್ಮಾಂಡದಲ್ಲಿ ನಾವೊಬ್ಬರೇ ಇದ್ದೇವೆಯೇ ಎಂಬ ಮನುಷ್ಯರ ಮೂಲಭೂತ ಪ್ರಶ್ನೆಗಳಿಗೆ ಉತ್ತರ ಹುಡುಕುವ ಯತ್ನ ಇದಾಗಿದೆ. ಯುವಜನತೆ ಹಾಗೂ ವಿದ್ಯಾರ್ಥಿಗಳು ಕುತೂಹಲ ಮತ್ತು ಸಂಶೋಧನಾ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಇದೇ ವೇಳೆ ಜವಾಹರ ಲಾಲ್‌ ನೆಹರು ತಾರಾಲಯದ ನಿರ್ದೇಶಕ ಡಾ.ಬಿ.ಆರ್‌.ಗುರುಪ್ರಸಾದ್‌ ಅವರು, ಪರ್ಸಿವಿಯರೆನ್ಸ್ ರೋವರ್‌ನೊಂದಿಗೆ ಮಂಗಳಕ್ಕೆ ಕಳುಹಿಸಲಾಗಿದ್ದ ‘ಇಂಜನ್ಯೂನಿಟಿ’ ಎಂಬ ಹೆಲಿಕಾಪ್ಟರ್ ನಿರ್ಮಾಣದ ತಂಡದ ನೇತೃತ್ವ ವಹಿಸಿದ್ದ ಬಾಬ್‌ ಬಲರಾಮ್‌ ಅವರು ಮೈಸೂರು ಸಂಸ್ಥಾನದ ದಿವಾನರಾಗಿ ಸೇವೆ ಸಲ್ಲಿಸಿದ ಎಂ.ಎನ್‌.ಕೃಷ್ಣರಾವ್‌ ಅವರ ರಕ್ತಸಂಬಂಧಿ ಎಂಬ ಸಂಗತಿಯನ್ನು ಸ್ಮರಿಸಿದರು.ಕಾರ್ಯಕ್ರಮದಲ್ಲಿ ಅಮೆರಿಕಾದ ಕಾನ್ಸುಲೇಟ್‌ ಜನರಲ್‌ ಚೆನ್ನೈನ ಗೋಕುಲ್‌ ಕೃಷ್ಣ ಸೆಲ್ವರಾಜನ್‌, ಪಬ್ಲಿಕ್‌ ಡಿಪ್ಲೊಮೆಸಿ ಆಫೀಸರ್‌ ಎರಿಕ್‌ ಅಟ್ಕಿನ್ಸ್‌ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.
Read more Articles on

Recommended Stories

1 ತಿಂಗಳು ನಗರದಲ್ಲಿ 64,000 ಗಿಡ ನೆಡುವ ಕಾರ್‍ಯ
ಶೋಕಸಾಗರದ ನಡುವೆ ಮಣ್ಣಾದ ಚನ್ನಮ್ಮ