ಬೆಂಗಳೂರು : ‘ಬೆಂಗಳೂರು ಹಸಿರೂರು’ ಅಭಿಯಾನದ ಮೂಲಕ ಆ.15ರಿಂದ ಸೆ.15ರವರೆಗೆ ನಗರದಲ್ಲಿ 9.64 ಕೋಟಿ ರು. ವೆಚ್ಚದಲ್ಲಿ 64,000 ಗಿಡಗಳನ್ನು ನೆಡಲಾಗುತ್ತದೆ ಎಂದು ಬೆಂಗಳೂರು ನಗರಾಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ತಿಳಿಸಿದ್ದಾರೆ.
ಜಿಬಿಎ ಅರಣ್ಯ ವಿಭಾಗದಿಂದ ಸಸಿ ನೆಡುವ ಕಾರ್ಯಕ್ರಮಕ್ಕೆ ಸಂಬಂಧಿಸಿದಂತೆ ಅಧಿಕಾರಿಗಳೊಂದಿಗೆ ಸೋಮವಾರ ಸಭೆ ನಡೆಸಿ ಸುದ್ದಿಗೋಷ್ಠಿ ನಡೆಸಿದ ಅವರು, ಗಿಡ ನೆಟ್ಟು ಸಮರ್ಪಕವಾಗಿ ಪೋಷಿಸಿದರೆ ತಾಪಮಾನ ಹಾಗೂ ವಾಯು ಮಾಲಿನ್ಯವನ್ನು ಕಡಿಮೆ ಮಾಡಬಹುದು. ನಗರದ ಸೌಂದರ್ಯ ಮತ್ತು ಪರಿಸರವೂ ವೃದ್ಧಿಯಾಗಲಿದೆ. ಸಾರ್ವಜನಿಕ ಮತ್ತು ಖಾಸಗಿ ಸಹಭಾಗಿತ್ವದಲ್ಲಿ ಅಭಿಯಾನ ನಡೆಯಲಿದೆ ಎಂದರು.
ಮಹಾಗನಿ, ಟಬೆಯಾ ರೋಸಿಯಾ, ಹೊಂಗೆ, ಬೇವು, ನೇರಳೆ ಮುಂತಾದ ಗಟ್ಟಿಯಾದ, ಗುಣಮಟ್ಟದ ಮರಗಳನ್ನಷ್ಟೇ ನೆಡಲಾಗುತ್ತದೆ. ಬಡಾವಣೆಗಳಲ್ಲಿ ಅಗತ್ಯವಿರುವ ಸಸಿಗಳನ್ನು ನೆಟ್ಟ ನಂತರ ಉಳಿದ ಸಸಿಗಳನ್ನು ಕೆರೆಗಳ ಸುತ್ತಮುತ್ತ ಹಾಗೂ ಉದ್ಯಾನ ಸೇರಿದಂತೆ ಸಾರ್ವಜನಿಕ ಸ್ಥಳಗಳಲ್ಲಿ ನೆಡಲಾಗುವುದು. 6 ಅಡಿ ಎತ್ತರದ ಸಸಿಗಳನ್ನು 12 ಅಡಿ ಅಂತರದಲ್ಲಿ ನೆಡಬೇಕು ಎನ್ನುವ ಸೂಚನೆ ನೀಡಲಾಗಿದೆ. ಪಾಲಿಕೆಗಳ ಬಜೆಟ್‌ನಲ್ಲಿ ಮೀಸಲಿಟ್ಟಿರುವ ಹಣ ಬಳಸಿಕೊಂಡು ಸಸಿ ನೆಡಲಾಗುತ್ತದೆ. 3 ವರ್ಷ ನೀರೆರೆದು ನಿರ್ವಹಿಸುವ ಜವಾಬ್ದಾರಿಯನ್ನು ನೀಡಲಾಗಿದೆ ಎಂದು ಸಚಿವರು ತಿಳಿಸಿದರು.
ಗಿಡಗಳ ಮೇಲೆ ನಿಗಾ: ಎಲ್ಲೆಲ್ಲಿ, ಎಷ್ಟು ಸಸಿಗಳನ್ನು ನೆಡಲಾಗಿದೆ ಎಂಬ ಮಾಹಿತಿಯು ಜಿಯೋ-ಲೊಕೇಷನ್ ಸಹಿತ ಪಾಲಿಕೆಯ ವೆಬ್‌ಸೈಟ್‌ನಲ್ಲಿ ಅಪ್ಡೇಟ್ ಮಾಡಲಾಗುತ್ತದೆ. ನಾಗರಿಕರು ಕೂಡ ಈ ಮಾಹಿತಿಯನ್ನು ನೋಡಬಹುದು ಎಂದು ಸಚಿವ ಕೃಷ್ಣ ಬೈರೇಗೌಡ ಮಾಹಿತಿ ನೀಡಿದರು. ಸಭೆಯಲ್ಲಿ ಮುಖ್ಯ ಆಯುಕ್ತ ಮಹೇಶ್ವರ್ ರಾವ್ ಹಾಗೂ ಇತರೆ ಅಧಿಕಾರಿಗಳು ಉಪಸ್ಥಿತರಿದ್ದರು.
ನಾಗರಿಕರು ಆನ್‌ಲೈನ್ ಮೂಲಕ ಮನವಿ ಸಲ್ಲಿಸಿ
ನಗರದ ನಿವಾಸಿಗಳು, ಕ್ಷೇಮಾಭಿವೃದ್ಧಿ ಸಂಘಗಳು ತಮ್ಮ ಬಡಾವಣೆಗಳಲ್ಲಿ ಕನಿಷ್ಠ 30 ಸಸಿಗಳನ್ನು ನೆಡಲು ಅವಕಾಶವಿದ್ದಲ್ಲಿ ಆ.10 ರೊಳಗಾಗಿ ಪಾಲಿಕೆಯ ವೆಬ್‌ಸೈಟ್ https://gbatreeplantation.com ಮೂಲಕ ಮನವಿ ಸಲ್ಲಿಸಬಹುದು. ಪಾಲಿಕೆಯಿಂದ ಪರಿಶೀಲಿಸಿ 40,000 ಸಸಿಗಳನ್ನು ವಿತರಿಸಲಾಗುತ್ತದೆ.
ಒಂದು ಮರ ಕಡಿಯುವ ಮುನ್ನ 10 ಸಸಿ ನೆಡುವ ವೆಚ್ಚ ಪಾವತಿಸಬೇಕು
ಪಾಲಿಕೆ, ಮೆಟ್ರೋ ಸೇರಿದಂತೆ ವಿವಿಧ ಇಲಾಖೆಗಳ ಅಭಿವೃದ್ಧಿ ಕಾಮಗಾರಿಗಳಿಗಾಗಿ ಮರಗಳನ್ನು ಕಡಿಯುವ ಮೊದಲು, ಒಂದು ಮರಕ್ಕೆ 10 ಸಸಿಗಳನ್ನು ನೆಡಲು ಆಗುವ ವೆಚ್ಚವನ್ನು ಜಿಬಿಎ ಅರಣ್ಯ ವಿಭಾಗಕ್ಕೆ ಪಾವತಿಸಬೇಕು. ಈ ವರ್ಷದಿಂದಲೇ ಈ ಪದ್ಧತಿ ಜಾರಿಯಾಗುತ್ತದೆ ಎಂದು ಸಚಿವರು ತಿಳಿಸಿದರು.
ಗಿಡಗಳನ್ನು ನೆಡುವ ಅಭಿಯಾನ ಕೇವಲ ಪೇಪರ್ ದಾಖಲೆಗಳಿಗೆ ಸೀಮಿತವಾಗಬಾರದು. ಗಿಡ ನೆಡುವ ಉದ್ದೇಶ ಯಶಸ್ವಿಯಾಗಲು ನಾಗರಿಕರ ಸಹಭಾಗಿತ್ವ ಅಗತ್ಯ. ಅವರು ಕೂಡ ಪೋಷಣೆ ಮಾಡಿ ನಿಗಾ ವಹಿಸಲು ಕೋರಲಾಗಿದೆ.
-ಕೃಷ್ಣ ಬೈರೇಗೌಡ, ಬೆಂಗಳೂರು ನಗರಾಭಿವೃದ್ಧಿ ಸಚಿವ
ಸಸಿಗಳನ್ನು ಮಳೆಗಾಲದಲ್ಲಿ ಹಾಕದೆ ಇನ್ಯಾವಾಗಾ ನೆಡುತ್ತೀರಾ?: ಕೃಷ್ಣ
ಬೆಂಗಳೂರು : ಮಳೆಗಾಲದಲ್ಲಿ ಸಸಿಗಳನ್ನು ನೆಡದೆ ಬೇರೆ ಯಾವಾಗ ನೆಡುತ್ತಿರಾ? ಜೂನ್‌ನಲ್ಲಿ ಮಳೆಗಾಲ ಆರಂಭವಾಗುವುದು ಗೊತ್ತಿಲ್ಲವೇ? ಅಥವಾ ಮಳೆಗಾಲ ಬದಲಾಯಿತೇ? ನೀವು ಹುಟ್ಟುವ ಮೊದಲು, ನಂತರದ ವರ್ಷಗಳಲ್ಲೂ ಜೂನ್‌ನಲ್ಲಿಯೇ ತಾನೆ ಮಳೆಯಾಗುವುದು? ಸಸಿ ನೆಡುವ ಕಾರ್ಯಕ್ಕೆ ಚಾಲನೆ ನೀಡದೆ ಏನು ಮಾಡುತ್ತಿದ್ರಿ? ಅನುದಾನ ಮೀಸಲಿಟ್ಟಿದ್ದರೂ ನಗರದಲ್ಲಿ ಸಸಿಗಳನ್ನು ನೆಡಲು ನಿರ್ಲಕ್ಷ್ಯ ತೋರಿದ ಜಿಬಿಎ ಅಧಿಕಾರಿಗಳಿಗೆ ಬೆಂಗಳೂರು ನಗರಾಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ಅವರು ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ.
ನಗರದಲ್ಲಿ ಗಿಡ ನೆಡುವ ಯೋಜನೆ, ನಿರ್ವಹಣೆ ಕುರಿತು ಜಿಬಿಎ ಅರಣ್ಯ ಇಲಾಖೆಯೊಂದಿಗೆ ಸೋಮವಾರ ಸಭೆ ನಡೆಸಿದ ಸಚಿವರು, ಮಾರ್ಚ್ ಕೊನೆಯಲ್ಲೇ ಬಜೆಟ್ ಆಗಿದೆ. ಮೇನಲ್ಲಿ ಆದರೂ ಗಿಡ ನೆಡುವ ಕಾರ್ಯಕ್ಕೆ ಚಾಲನೆ ನೀಡಬೇಕಿತ್ತಲ್ಲವೇ? ನಿಮ್ಮಿಷ್ಟದಂತೆ ಹೇಗೆ ಬೇಕಾದಂತೆ ವ್ಯವಸ್ಥೆಯ ನಡೆಯಬೇಕಾ? ಎಲ್ಲಾ ಅದ್ವಾನವಾಗಿಯೇ ಇರಬೇಕಾ? ಈಗ ಮಾಡುತ್ತೇವೆ, ಆಗ ಮಾಡುತ್ತೇವೆ ಎನ್ನುವುದನ್ನೇ ನಾನು ಕೇಳಬೇಕಾ? ಎಂದು ಅಧಿಕಾರಿಗಳನ್ನು ಸಚಿವರು ಪ್ರಶ್ನಿಸಿದರು.
ಗಿಡ ನೆಡುವ ಕಾರ್ಯಕ್ರಮ ಕಡತಗಳಿಗೆ ಮಾತ್ರ ಸೀಮಿತವಾಗಬಾರದು. ನೆಟ್ಟ ಗಿಡ ಬೆಳೆಯಬೇಕು. ಸರಿಯಾಗಿ ನಿರ್ವಹಣೆಯಾಗಬೇಕು. ಇಲ್ಲದಿದ್ದರೆ ಗಿಡ ನೆಟ್ಟಿರುವುದು ಎಲ್ಲಿ, ನಿರ್ವಹಣೆ ಆಗುತ್ತಿದೆಯೋ ಇಲ್ಲವೋ? ಎನ್ನುವುದು ಗೊತ್ತಾಗುವುದೇ ಇಲ್ಲ. ಗಿಡಗಳ ನೆಡುವ ವಿಚಾರದಲ್ಲಿ ಏನಾಗುತ್ತಿದೆ ಎನ್ನುವುದು ಯಾರಿಗೂ ಗೊತ್ತಾಗುವುದಿಲ್ಲ? ಇದರಲ್ಲಿ ಹೊಣೆಗಾರಿಕೆ ಎನ್ನುವುದೇ ಇರುವುದಿಲ್ಲ ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದರು. ಗಿಡ ನೆಡುವ ಕಾರ್ಯದಲ್ಲಿ ನಾಗರಿಕರನ್ನು ಸೇರ್ಪಡೆ ಮಾಡಿಕೊಳ್ಳುವ ಮೂಲಕ ಪಾರದರ್ಶಕತೆ ಕಾಪಾಡಿಕೊಳ್ಳಬೇಕು ಎಂದು ಅಧಿಕಾರಿಗಳಿಗೆ ಸಚಿವರು ಸಲಹೆ ನೀಡಿದರು.
