ದೊಡ್ಡಬಳ್ಳಾಪುರ: ನೀರು ಜೀವನದ ಮೂಲವಾಗಿದ್ದು, ಭವಿಷ್ಯದ ಪೀಳಿಗೆಗೆ ನೀರಿನ ಸಂಪನ್ಮೂಲವನ್ನು ಉಳಿಸುವುದು ಪ್ರತಿಯೊಬ್ಬರ ಜವಾಬ್ದಾರಿ ಎಂದು ಫಾಕ್ಸ್ಕಾನ್ ಕಂಪನಿ ಉಪಾಧ್ಯಕ್ಷ ವಾವಿಪಿ ಹೇಳಿದರು
ದೊಡ್ಡಬಳ್ಳಾಪುರ: ನೀರು ಜೀವನದ ಮೂಲವಾಗಿದ್ದು, ಭವಿಷ್ಯದ ಪೀಳಿಗೆಗೆ ನೀರಿನ ಸಂಪನ್ಮೂಲವನ್ನು ಉಳಿಸುವುದು ಪ್ರತಿಯೊಬ್ಬರ ಜವಾಬ್ದಾರಿ ಎಂದು ಫಾಕ್ಸ್ಕಾನ್ ಕಂಪನಿ ಉಪಾಧ್ಯಕ್ಷ ವಾವಿಪಿ ಹೇಳಿದರು.
ತಾಲೂಕಿನ ರಘುನಾಥಪುರದಲ್ಲಿ ಫಾಕ್ಸ್ಕಾನ್ ಸಂಸ್ಥೆಯ 2026ನೇ ಸಾಲಿನ ಸಿಎಸ್‌ಆರ್ ನಿಧಿಯಡಿ ಆಯೋಜಿಸಿದ್ದ ನೀರಿನ ಸಂರಕ್ಷಣೆ ಕುರಿತ ತರಬೇತಿ ಕಾರ್ಯಾಗಾರದಲ್ಲಿ ಮಾತನಾಡಿದ ಅವರು, ಮಳೆ ನೀರಿನ ಸಂಗ್ರಹಣೆ, ಅಂತರ್ಜಲ ಮರುಪೂರಣ, ನೀರಿನ ಮಿತ ಬಳಕೆ ಹಾಗೂ ನೀರಿನ ಮೂಲಗಳ ಸಂರಕ್ಷಣೆಗೆ ಹೆಚ್ಚಿನ ಆದ್ಯತೆ ನೀಡಬೇಕಾಗಿದೆ. ನೀರಿನ ಬಳಕೆಯಲ್ಲಿ ಪ್ರತಿಯೊಬ್ಬರೂ ಜವಾಬ್ದಾರಿಯುತವಾಗಿ ನಡೆದುಕೊಂಡರೆ ಮುಂದಿನ ದಿನಗಳಲ್ಲಿ ಎದುರಾಗಬಹುದಾದ ನೀರಿನ ಸಮಸ್ಯೆಯನ್ನು ಕಡಿಮೆ ಮಾಡಲು ಸಾಧ್ಯ. ನೀರಿನ ಸಂರಕ್ಷಣೆ ಕೇವಲ ಸರ್ಕಾರ ಅಥವಾ ಸ್ಥಳೀಯ ಸಂಸ್ಥೆಗಳ ಹೊಣೆಗಾರಿಕೆಯಲ್ಲ, ಸಾರ್ವಜನಿಕರು, ಕೈಗಾರಿಕೆಗಳು ಹಾಗೂ ಸಂಘ-ಸಂಸ್ಥೆಗಳು ಕೂಡ ಇದರಲ್ಲಿ ಸಕ್ರಿಯವಾಗಿ ಕೈಜೋಡಿಸಬೇಕು ಎಂದು ತಿಳಿಸಿದರು.ಸಂಸ್ಥೆಯ ಮಾನವ ಸಂಪನ್ಮೂಲ ವಿಭಾಗದ ಮುಖ್ಯಸ್ಥೆ ನರ್ಮದಾ ಮಾತನಾಡಿ, ನೀರಿನ ಸಂರಕ್ಷಣೆಯಲ್ಲಿ ಆಧುನಿಕ ತಂತ್ರಜ್ಞಾನವನ್ನು ಪರಿಣಾಮಕಾರಿಯಾಗಿ ಬಳಸುವ ಅಗತ್ಯವಿದೆ. ನೀರಿನ ಬಳಕೆಯ ಪ್ರಮಾಣವನ್ನು ಗುರುತಿಸುವುದು, ಸೋರಿಕೆ ನಿಯಂತ್ರಿಸುವುದು, ಮಳೆ ನೀರಿನ ಸಂಗ್ರಹಣೆ ಹಾಗೂ ಮರುಬಳಕೆಗೆ ತಂತ್ರಜ್ಞಾನ ಆಧಾರಿತ ವ್ಯವಸ್ಥೆಗಳನ್ನು ಅಳವಡಿಸಿಕೊಳ್ಳುವುದರಿಂದ ನೀರಿನ ಉಳಿತಾಯ ಸಾಧ್ಯ ಎಂದು ಹೇಳಿದರು.
ರಾಜ್ಯಮಟ್ಟದ ನೀರಿನ ಸಂರಕ್ಷಣೆ ತರಬೇತುದಾರ ಶಿವಕುಮಾರ್, ನೀರಿನ ಸಂರಕ್ಷಣೆಯ ವಿವಿಧ ವಿಧಾನಗಳ ಕುರಿತು ತರಬೇತಿ ನೀಡಿದರು. ಮಳೆ ನೀರನ್ನು ಸಮರ್ಪಕವಾಗಿ ಸಂಗ್ರಹಿಸಿ ಅಂತರ್ಜಲ ಮಟ್ಟ ಹೆಚ್ಚಿಸುವುದು, ಕೆರೆ-ಕಟ್ಟೆಗಳ ಸಂರಕ್ಷಣೆ, ನೀರಿನ ವ್ಯರ್ಥ ಬಳಕೆ ತಡೆಯುವುದು ಹಾಗೂ ಕೃಷಿ ಮತ್ತು ದೈನಂದಿನ ಚಟುವಟಿಕೆಗಳಲ್ಲಿ ನೀರಿನ ಸಮರ್ಥ ಬಳಕೆಗೆ ಒತ್ತು ನೀಡಬೇಕು ಎಂದು ವಿವರಿಸಿದರು.ಕಾರ್ಯಾಗಾರದಲ್ಲಿ ನೀರಿನ ಮಹತ್ವ, ಜಲಮೂಲಗಳ ಸಂರಕ್ಷಣೆ, ಮಳೆನೀರು ಕೊಯ್ಲು, ಅಂತರ್ಜಲ ಮರುಪೂರಣ ಹಾಗೂ ನೀರಿನ ಮರುಬಳಕೆ ಕುರಿತು ಅರಿವು ಮೂಡಿಸಲಾಯಿತು. ಜತೆಗೆ ತರಬೇತಿ ಪಡೆದವರಿಗೆ ನೀರಿನ ಸಂರಕ್ಷಣೆಯ ಕಿಟ್‌ಗಳನ್ನು ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಫಾಕ್ಸ್ಕಾನ್ ಸಂಸ್ಥೆಯ ಘಟಕ ಮುಖ್ಯಸ್ಥ ನವೀದ್, ಇಎಚ್‌ಎಸ್ ಮುಖ್ಯಸ್ಥ ಪರ್ಲ್ ವಾಂಗ್, ಸಿಇಡಿ ಜರಿನ್, ಪರಿಸರ ಅಧಿಕಾರಿ ರಾಮಕೃಷ್ಣ, ಸಂಸ್ಥೆಯ ನವೀನ್, ಮುಖಂಡರಾದ ರೇಣುಕಾ ಪ್ರಸಾದ್, ಮಹೇಶ್ ಮತ್ತಿತರರು ಹಾಜರಿದ್ದರು.10ಕೆಡಿಬಿಪಿ2 -
ದೊಡ್ಡಬಳ್ಳಾಪುರದ ರಘುನಾಥಪುರದಲ್ಲಿ ಫಾಕ್ಸ್ಕಾನ್ಸ್ ಸಂಸ್ಥೆ ಹಮ್ಮಿಕೊಂಡಿದ್ದ ನೀರಿನ ಸಂರಕ್ಷಣೆ ಕಾರ್ಯಾಗಾರದಲ್ಲಿ ಕಂಪನಿ ಉಪಾಧ್ಯಕ್ಷ ವಾವಿಪಿ, ಮಾನವ ಸಂಪನ್ಮೂಲ ವಿಭಾಗದ ಮುಖ್ಯಸ್ಥೆ ನರ್ಮದಾ, ನೀರಿನ ಸಂರಕ್ಷಣೆ ತರಬೇತುದಾರ ಶಿವಕುಮಾರ್ ಇತರರು ಪಾಲ್ಗೊಂಡಿದ್ದರು.