ಕೊಪ್ಪಳ: ತಾಲೂಕಿನ ಬೆಟಗೇರಿಯ ಸರ್ಕಾರಿ ಪ್ರೌಢಶಾಲೆಯಲ್ಲಿ ಸಾಲುಮರದ ತಿಮ್ಮಕ್ಕ ಇಕೋ ಕ್ಲಬ್ ಹಾಗೂ ಸುಂದರ್ ಲಾಲ್ ಬಹುಗುಣ ಹಸಿರು ಪಡೆ ಸಂಯುಕ್ತಾಶ್ರಯದಲ್ಲಿ ತಾಯಿಯ ಹೆಸರಿನಲ್ಲಿ ಒಂದು ಗಿಡ 3.0 ಅಭಿಯಾನದ ಅಂಗವಾಗಿ ಶಾಲಾ ಆವರಣದಲ್ಲಿ ಗಿಡ ನೆಡುವ ಹಾಗೂ ಆಸಕ್ತ ವಿದ್ಯಾರ್ಥಿಗಳಿಗೆ ಗಿಡಗಳನ್ನು ದತ್ತು ನೀಡುವ ಕಾರ್ಯಕ್ರಮ ಜರುಗಿತು.

ಹಸಿರು ಪಡೆಯ ಸಂಚಾಲಕ ಮರ್ದಾನಲಿ ಗಡಾದ ಮಾತನಾಡಿ, ಮಾನವನ ಅತಿಯಾದ ದುರಾಸೆಯಿಂದ ಪ್ರಕೃತಿಯ ಸಮತೋಲನ ಹದಗೆಟ್ಟಿದ್ದು, ಒಂದೆಡೆ ಅನಾವೃಷ್ಟಿ ಮತ್ತೊಂದೆಡೆ ಅತಿವೃಷ್ಟಿಯಂತಹ ಸಮಸ್ಯೆ ಹೆಚ್ಚುತ್ತಿವೆ. ಪರಿಸರ ಸಂರಕ್ಷಣೆಗಾಗಿ ಪ್ರತಿಯೊಬ್ಬರೂ ಗಿಡ ನೆಟ್ಟು ಅವುಗಳನ್ನು ಪೋಷಿಸುವ ಜವಾಬ್ದಾರಿ ವಹಿಸಬೇಕು.ವಿದ್ಯಾರ್ಥಿಗಳು ತಮ್ಮ ತಾಯಿಯ ಹೆಸರಿನಲ್ಲಿ ಗಿಡಗಳನ್ನು ಬೆಳೆಸುವ ಅಭಿಯಾನ ಪರಿಸರ ಜಾಗೃತಿಗೆ ಸಹಕಾರಿಯಾಗಲಿದೆ ಎಂದು ಹೇಳಿದರು.

ಜೀವ ವಿಜ್ಞಾನ ಶಿಕ್ಷಕಿ ಸುನೀತಾ ಯಾಳಗಿ ಮಾತನಾಡಿ, ಪರಿಸರ ಮಾಲಿನ್ಯದಿಂದ ಶುದ್ಧ ಗಾಳಿ ಸಿಗದ ಪರಿಸ್ಥಿತಿ ನಿರ್ಮಾಣವಾಗಿದ್ದು, ಹಸಿರೇ ಉಸಿರು ಎಂಬ ಧ್ಯೇಯದೊಂದಿಗೆ ಹೆಚ್ಚು ಹೆಚ್ಚು ಗಿಡ ಬೆಳೆಸುವ ಅಗತ್ಯವಿದೆ ಎಂದರು.

ಶಿಕ್ಷಣ ಪ್ರೇಮಿ ಶಂಕ್ರಪ್ಪ ಬಡಿಗೇರ್ ಮಾತನಾಡಿ, ವಿದ್ಯಾರ್ಥಿಗಳು ಪಠ್ಯಾಭ್ಯಾಸದ ಜತೆಗೆ ಪರಿಸರ ಸಂರಕ್ಷಣೆಯಲ್ಲೂ ತೊಡಗಿಸಿಕೊಳ್ಳಬೇಕು. ಪ್ರತಿಯೊಬ್ಬರೂ ಒಂದೊಂದು ಗಿಡ ನೆಟ್ಟು ಪೋಷಿಸಿದರೆ ಸಮಾಜಕ್ಕೆ ಉತ್ತಮ ಕೊಡುಗೆ ನೀಡಿದಂತಾಗುತ್ತದೆ ಎಂದು ತಿಳಿಸಿದರು.

ಮುಖ್ಯ ಶಿಕ್ಷಕ ಪರಶುರಾಮ ಸಾಲ್ಮನಿ ಮಾತನಾಡಿ, ಮನೆಗೊಂದು ಮರ, ಊರಿಗೊಂದು ವನ; ಮಗುವಿಗೊಂದು ಮರ, ಶಾಲೆಗೊಂದು ವನ ಎಂಬ ಪರಿಕಲ್ಪನೆ ಸಾಕಾರಗೊಳಿಸಲು ಎಲ್ಲ ವಿದ್ಯಾರ್ಥಿಗಳು ತಮ್ಮ ತಾಯಿಯ ಹೆಸರಿನಲ್ಲಿ ಒಂದು ಗಿಡ ನೆಟ್ಟು ಪೋಷಿಸಬೇಕು ಎಂದು ಕರೆ ನೀಡಿದರು.


ಅಭಿಯಾನದ ಅಂಗವಾಗಿ ಏರ್ಪಡಿಸಿದ್ದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.

ಶಿಕ್ಷಕರಾದ ಗಿರಿಯಪ್ಪ ಹಾರನಹಳ್ಳಿ, ರಾಜಾಸಾಬ್ ಬಳಿಗಾರ್, ವೀರಯ್ಯ ಪೂಜಾರ್, ಪ್ರಕಾಶರೆಡ್ಡಿ ಗೋವಿಂದರೆಡ್ಡಿ, ಶಾಂತವೀರಯ್ಯ ಕಳ್ಳಿಮಠ ಇತರರಿದ್ದರು.