ಸಾರ್ವಜನಿಕರು ಭೂದಾಖಲೆ, ಆಸ್ತಿ ದಾಖಲೆಗಾಗಿ ಇನ್ನೂ ಕಚೇರಿಗೆ ಅಲೆಯಬೇಕಿಲ್ಲ. ಯಾವುದೇ ಮಧ್ಯವರ್ತಿಗಳ ವಸೂಲಿಯೂ ಬೇಕಾಗಿಲ್ಲ, ನಮ್ಮ ಆಸ್ತಿ ದಾಖಲೆಗಳನ್ನು ಇನ್ನೂ ಸುಲಭವಾಗಿ ಆನ್‌ಲೈನ್‌ನಲ್ಲಿ ಪಡೆಯಬಹುದಾಗಿದೆ.
ಸಾರ್ವಜನಿಕರು ಇನ್ನೂ ಭೂದಾಖಲೆ, ಆಸ್ತಿ ದಾಖಲೆಗಾಗಿ ಅಲೆದಾಡುವ ಅಗತ್ಯವಿಲ್ಲ
ಓರ್ವೆಲ್ಲ್ ಫರ್ನಾಂಡೀಸ್ಕನ್ನಡಪ್ರಭ ವಾರ್ತೆ ಹಳಿಯಾಳ
ಸಾರ್ವಜನಿಕರು ಭೂದಾಖಲೆ, ಆಸ್ತಿ ದಾಖಲೆಗಾಗಿ ಇನ್ನೂ ಕಚೇರಿಗೆ ಅಲೆಯಬೇಕಿಲ್ಲ. ಯಾವುದೇ ಮಧ್ಯವರ್ತಿಗಳ ವಸೂಲಿಯೂ ಬೇಕಾಗಿಲ್ಲ, ನಮ್ಮ ಆಸ್ತಿ ದಾಖಲೆಗಳನ್ನು ಇನ್ನೂ ಸುಲಭವಾಗಿ ಆನ್‌ಲೈನ್‌ನಲ್ಲಿ ಪಡೆಯಬಹುದಾಗಿದೆ.ಹೌದು. ಇದೀಗ ಹಳಿಯಾಳದ ತಹಸೀಲ್ದಾರ್ ಕಚೇರಿ (ತಾಲೂಕಾಡಳಿತ ಸೌಧ) ಈಗ ಸಂಪೂರ್ಣ ಡಿಜಿಟಲೀಕರಣಗೊಂಡಿದೆ.
ತಹಸೀಲ್ದಾರ್ ಕಚೇರಿಯಲ್ಲಿನ ರೆಕಾರ್ಡ್ ರೂಮ್ ಈಗ ಶೇ. 100ರಷ್ಟು ಗಣಕೀಕರಣಗೊಂಡಿದೆ. ಇಲ್ಲಿ ಯಾವುದೇ ದಾಖಲೆಗಳು ಕ್ಷಣದಲ್ಲಿಯೇ ಲಭ್ಯವಾಗುತ್ತಿವೆ. ಈಗ ಸಾರ್ವಜನಿಕರ ಸಮಯ ಹಾಗೂ ಹಣ ಇಲ್ಲಿ ಅಪವ್ಯಯವಾಗುವುದಿಲ್ಲ, ಹಣದ ಉಳಿತಾಯದೊಂದಿಗೆ ನೆಮ್ಮದಿಯು ಸಿಗಲಿದೆ.ಮೂಲ ದಾಖಲೆ ಹಾಳಾಗುವುದನ್ನು, ಕಳೆದು ಹೋಗುವುದನ್ನು ಹಾಗೂ ನಕಲಿ ದಾಖಲೆಗಳು ಸೃಷ್ಟಿಯಾಗುವುದನ್ನು ತಪ್ಪಿಸುವ ಉದ್ದೇಶದಿಂದ ಕರ್ನಾಟಕ ಸರ್ಕಾರ ಜಾರಿಗೊಳಿಸಿದ ಮಹತ್ವಾಕಾಂಕ್ಷೆಯ ಭೂ ಸುರಕ್ಷಾ ಯೋಜನೆಯನ್ನು ಹಳಿಯಾಳ ತಹಸೀಲ್ದಾರ್ ಕಚೇರಿ ಯಶಸ್ವಿಯಾಗಿ ಜಾರಿಗೊಳಿಸಿದೆ.
ಡಿಜಿಟಲೀಕರಣ ಕಾರ್ಯ:ಹಳಿಯಾಳದ ತಹಸೀಲ್ದಾರ್ ಕಚೇರಿಯಲ್ಲಿನ ರೆಕಾರ್ಡ್ ರೂಮ್ ದಾಖಲೆಗಳ ಡಿಜಿಟಲೀಕರಣದ ಕಾರ್ಯ ಆರಂಭಗೊಂಡಿದ್ದು 2025 ಜ. 11ರಂದು. ಹೀಗೆ ನಿರಂತರವಾಗಿ ನಡೆದ ಡಿಜಿಟಲೀಕರಣಗೊಳಿಸುವ ಕಾರ್ಯವು 2026 ಜ. 31ರಲ್ಲಿ ಮುಕ್ತಾಯಗೊಂಡಿತು. ಭೂದಾಖಲೆಗಳನ್ನು ಡಿಜಿಟಲಿಕರಣಗೊಳಿಸಲು ಒಟ್ಟು 8 ಡಾಟಾ ಆಪರೇಟರ್ ನಿರಂತರವಾಗಿ ಕಾರ್ಯವನ್ನು ಮಾಡಿದ್ದಾರೆ. ಆರಂಭದಲ್ಲಿ 6 ಡಾಟಾ ಆಪರೇಟರ್‌ಗಳಿಂದ ಡಿಜಿಟಲೀಕರಣ ಕಾರ್ಯ ಆರಂಭವಾಗಿತ್ತು, ಬೇಗನೆ ಮುಕ್ತಾಯಗೊಳಿಸುವ ದಿಸೆಯಲ್ಲಿ ಮತ್ತೆ 2 ಆಪರೇಟರ್‌ಗಳನ್ನು ಈ ಕಾರ್ಯಕ್ಕೆ ಸೇರಿಸಲಾಯಿತು. ಡಿಜಿಟಲೀಕರಣದ ಕಾರ್ಯಕ್ಕೆ 10 ಕಂಪ್ಯೂಟರ್‌ಗಳನ್ನು ಹಾಗೂ 6 ಸ್ಕ್ಯಾನರ್ ಬಳಸಲಾಯಿತು. ಸ್ಕ್ಯಾನಿಂಗ್ ಕಾರ್ಯ ತ್ವರಿತವಾಗಿ ನಡೆಯಲು ಕಚೇರಿಯ ಗ್ರಾಮ ಸಹಾಯಕರ ಸೇವೆ ಸಹ ಪಡೆಯಲಾಯಿತು. ತಾಲೂಕಾಡಳಿತ ಸೌಧದ 5 ಶಿರಸ್ತೇದಾರರು ಅಪ್‌ಲೋಡ್ ಮಾಡಿರುವ ದಾಖಲೆಗಳನ್ನು ಪರಿಶೀಲನೆ ನಡೆಸಿ ಅನುಮೋದನೆ ನೀಡಿದರು.
ಡಿಜಿಟಲೀಕರಣಗೊಂಡ ದಾಖಲೆಗಳು:ರೆಕಾರ್ಡ್ ರೂಮಿನಲ್ಲಿದ್ದ ಎಲ್ಲ ಹಳೆಯ ಕಾಗದ ಮೇಲಿದ್ದ ಭೂದಾಖಲೆಗಳನ್ನು ಕೆಡದಂತೆ ಸ್ಕ್ಯಾನಿಂಗ್ ಮಾಡಿ ಅಪ್‌ಲೋಡ್ ಮಾಡಿ ಸುರಕ್ಷಿತವಾಗಿಡಲಾಗಿದೆ. ರೆಕಾರ್ಡ್ ರೂಮಿನಲ್ಲಿನ 70595 ಫೈಲುಗಳು, 2165 ರಜಿಸ್ಟಾರ್‌ಗಳು ಡಿಜಿಟಲೀಕರಣಗೊಂಡಿದ್ದು, ಒಟ್ಟು 27 ಲಕ್ಷ 70 ಸಾವಿರ ಪುಟಗಳನ್ನು ಡಿಜಿಟಲೀಕರಣಗೊಳಿಸಲಾಗಿದೆ. ಈ ಕಡತಗಳನ್ನು ಎರಡೂ ವಿಭಾಗಗಳಲ್ಲಿ ವಿಂಗಡಿಸಲಾಗಿದೆ. ಎ-ವಿಭಾಗದಲ್ಲಿ ಮ್ಯುಟೇಶನ್ ಎಂಟ್ರಿ, ಕೈ-ಬರಹ ಉತಾರ, ಗ್ರಾಮ-ನಮೂನೆ ಇತ್ಯಾದಿ ಶಾಶ್ವತ ಹಳೆಯ ದಾಖಲೆಗಳು, ಬಿ-ವಿಭಾಗದಲ್ಲಿ 30 ವರ್ಷದ ದಾಖಲೆಗಳನ್ನು ವಿಂಗಡಿಸಿ ಶಾಶ್ವತವಾಗಿ ಸುರಕ್ಷಿತವಾಗಿಡಲಾಗಿದೆ.
ಭೂ-ಸುರಕ್ಷಾ ಪೋರ್ಟಲ್ ಬಳಸಿ:ಆಸ್ತಿ ದಾಖಲೆ ಪಡೆಯಲು ಇಚ್ಛಿಸುವವರು ತಹಸೀಲ್ದಾರ್ ಕಚೇರಿಯಲ್ಲಿನ ರೆಕಾರ್ಡ್ ರೂಮ್ ಹೊರತುಪಡಿಸಿ ಮುರ್ಕವಾಡ ಗ್ರಾಮದಲ್ಲಿನ ನಾಡಕಚೇರಿಯಲ್ಲಿ ಹಾಗೂ ತಾಲೂಕಾಡಳಿತ ಸೌಧದಲ್ಲಿರುವ ನೆಮ್ಮದಿ ಕೌಂಟರ್‌ನಲ್ಲಿ ಪಡೆಯಬಹುದು. ಸಾರ್ವಜನಿಕರು ತಮ್ಮ ಮೊಬೈಲ್ ಸಂಖ್ಯೆ ಬಳಸಿಕೊಂಡು ಭೂ-ಸುರಕ್ಷಾ ಪೋರ್ಟಲ್ ಮೂಲಕ ಜಮೀನು ದಾಖಲೆಗಳ ಪ್ರತಿಗಳನ್ನು ಸುಲಭವಾಗಿ ಡೌನ್‌ಲೋಡ್ ಮಾಡಿಕೊಳ್ಳಬಹುದು.
ಸಾರ್ವಜನಿಕರ ಹಿತದೃಷ್ಟಿ ಹಾಗೂ ಆಡಳಿತದಲ್ಲಿ ಪಾರದರ್ಶಕತೆ ತರುವ ನಿಟ್ಟಿನಲ್ಲಿ ಇಲಾಖೆಯು ಅತ್ಯಂತ ಪ್ರಮುಖವಾದ ಎ ಮತ್ತು ಬಿ ವರ್ಗದ ದಾಖಲೆಗಳನ್ನು ಸಂಪೂರ್ಣವಾಗಿ ಡಿಜಟಲೀಕರಣಗೊಳಿಸಿ ಶಾಶ್ವತವಾಗಿ ಸುರಕ್ಷಿತವಾಗಿಡಲಾಗಿದೆ. ಈ ಹೆಮ್ಮೆಯ ಯೋಜನೆಯಡಿ ಹಳಿಯಾಳ ತಾಲೂಕು ಇದೀಗ ಶೇ. 100 ಡಿಜಿಟಲ್ ತಾಲೂಕಾಗಿ ಹೊರಹೊಮ್ಮಿದೆ ಎನ್ನುತ್ತಾರೆ ತಹಸೀಲ್ದಾರ್ ಫಿರೋಜಷಾ ಸೋಮನಕಟ್ಟಿ.