ಪ್ರತಿಬಿಂಬ ಕಾರ್ಯಕ್ರಮದ ಸಮಾರೋಪ ಸಮಾರಂಭಕನ್ನಡಪ್ರಭ ವಾರ್ತೆ ಹೊನ್ನಾವರ

ಅಸೂಯೆಯಿಲ್ಲದೆ ಪ್ರತಿಭೆ ಗುರುತಿಸಿ, ಗೌರವಿಸಿ, ಬೆಳೆಸುವ ಸಂಸ್ಕೃತಿಯನ್ನು ಅಳವಡಿಸಿಕೊಂಡಿರುವುದು ಹವ್ಯಕ ಸಮಾಜದ ಅತ್ಯಂತ ದೊಡ್ಡ ಶಕ್ತಿಯಾಗಿದೆ. ಸಮಾಜದ ಸಾವಿರಾರು ಪ್ರತಿಭಾವಂತರನ್ನು ವಿವಿಧ ಕ್ಷೇತ್ರಗಳಲ್ಲಿ ಸಾಧಕರನ್ನಾಗಿ ರೂಪಿಸಿರುವ ಹೆಗ್ಗಳಿಕೆ ಅಖಿಲ ಹವ್ಯಕ ಮಹಾಸಭೆಗೆ ಸಲ್ಲುತ್ತದೆ ಎಂದು ಮಹಾಸಭಾದ ಅಧ್ಯಕ್ಷ ಡಾ. ಗಿರಿಧರ ಕಜೆ ಹೇಳಿದರು.

ಪಟ್ಟಣದ ಎಸ್.ಡಿ.ಎಂ. ಕಾಲೇಜಿನ ಆರ್.ಎಸ್. ಹೆಗಡೆ ಸಭಾಂಗಣದಲ್ಲಿ ಅಖಿಲ ಹವ್ಯಕ ಮಹಾಸಭೆಯ ಕುಮಟಾ, ಹೊನ್ನಾವರ ಹಾಗೂ ಭಟ್ಕಳ, ಕಾರವಾರ ಪ್ರಾಂತ್ಯಗಳ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಲಾದ ಪ್ರತಿಬಿಂಬ ಕಾರ್ಯಕ್ರಮದ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಅಖಿಲ ಹವ್ಯಕ ಮಹಾಸಭೆ ಕಳೆದ ಹಲವು ವರ್ಷಗಳಿಂದ ಶಿಕ್ಷಣ, ಸಂಸ್ಕೃತಿ, ಸಮಾಜಸೇವೆ, ಸಾಹಿತ್ಯ, ಕೃಷಿ, ಉದ್ಯಮ, ವೈದ್ಯಕೀಯ, ವಿಜ್ಞಾನ, ಕಲೆ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಹವ್ಯಕ ಪ್ರತಿಭೆಗಳನ್ನು ಗುರುತಿಸಿ ಗೌರವಿಸುವ ಕಾರ್ಯವನ್ನು ನಿರಂತರವಾಗಿ ನಡೆಸುತ್ತಿದೆ. ಈ ನಿಟ್ಟಿನಲ್ಲಿ ರೂಪಿಸಿರುವ ವಿಜಯೀಭವ ಕಾರ್ಯಕ್ರಮದ ಮೂಲಕ ಸಮಾಜದ ಸಾಧಕರನ್ನು ಜನರ ಮುಂದೆ ಪರಿಚಯಿಸಿ, ಅವರ ಸಾಧನೆಯನ್ನು ಮುಂದಿನ ಪೀಳಿಗೆಗೆ ಪ್ರೇರಣೆಯಾಗಿ ರೂಪಿಸುವ ಪ್ರಯತ್ನ ನಡೆಯುತ್ತಿದೆ. ಹವ್ಯಕ ಸಮಾಜದ ಜನಸಂಖ್ಯೆ ಸಂಖ್ಯಾತ್ಮಕವಾಗಿ ಕಡಿಮೆಯಿರಬಹುದು. 20 ಸಾವಿರ ವೈದಿಕರು, 10 ಸಾವಿರ ಶಿಕ್ಷಕರನ್ನು ಹೊಂದಿದ ಸಮಾಜ ನಮ್ಮದು, ಅದಲ್ಲದೇ ಆದರೆ ಬ್ರಾಹ್ಮಣ ಸಮುದಾಯದಲ್ಲಿ ಅತ್ಯಂತ ದೊಡ್ಡ ಸಮುದಾಯ ಹವ್ಯಕರದ್ದಾಗಿದೆ. ಹವ್ಯಕರ ಜೀವನಶೈಲಿ, ಸಂಪ್ರದಾಯ, ಸಂಸ್ಕಾರ, ಶಿಕ್ಷಣದ ಮೇಲಿನ ಬದ್ಧತೆ, ವೈಚಾರಿಕತೆ, ಕುಟುಂಬ ವ್ಯವಸ್ಥೆ, ಆಹಾರ ಪದ್ಧತಿ ಹಾಗೂ ಆಚಾರ-ವಿಚಾರಗಳನ್ನು ಇತರ ಸಮಾಜಗಳು ಮಾದರಿಯಾಗಿ ನೋಡುತ್ತಿವೆ. ಹೀಗಾಗಿ ಸಮಾಜದ ಪ್ರತಿಯೊಬ್ಬ ಸದಸ್ಯನೂ ತನ್ನ ನಡೆ-ನುಡಿಯಲ್ಲಿ ಆದರ್ಶಪ್ರಾಯನಾಗಿರಬೇಕಾದ ಜವಾಬ್ದಾರಿ ಹೊಂದಿದ್ದಾನೆ ಎಂದು ಹೇಳಿದರು.

ಕುಮಟಾ ಡಯಟ್‌ನ ಪ್ರಾಂಶುಪಾಲ ಎನ್.ಆರ್. ಹೆಗಡೆ, ಗುಣವಂತೆ ಶಂಭುಲಿಂಗೇಶ್ವರ ದೇವಾಲಯದ ಧರ್ಮದರ್ಶಿ ನರಸಿಂಹ ಪಂಡಿತ್ ಮಾತನಾಡಿದರು.


ಕಾರ್ಯಕ್ರಮದಲ್ಲಿ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಅತ್ಯುತ್ತಮ ಸಾಧನೆ ಮಾಡಿದ ಹವ್ಯಕ ವಿದ್ಯಾರ್ಥಿಗಳಿಗೆ ಹವ್ಯಕ ಪಲ್ಲವ ಪ್ರಶಸ್ತಿ ಪ್ರದಾನ ಮಾಡಿ ಸನ್ಮಾನಿಸಲಾಯಿತು. ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಅಭಿನಂದನಾ ಪತ್ರ ಹಾಗೂ ಸ್ಮರಣಿಕೆ ನೀಡಿ ಗೌರವಿಸಲಾಯಿತು.

ಪ್ರತಿಬಿಂಬ ಕಾರ್ಯಕ್ರಮದ ಅಂಗವಾಗಿ ವಿವಿಧ ವಯೋಮಾನದ ವಿದ್ಯಾರ್ಥಿಗಳು ಹಾಗೂ ಹಿರಿಯ ನಾಗರಿಕರಿಗಾಗಿ ಆಯೋಜಿಸಲಾಗಿದ್ದ ಪ್ರಬಂಧ, ಭಾಷಣ, ಚಿತ್ರಕಲೆ, ಸಂಗೀತ, ಸಾಂಸ್ಕೃತಿಕ ಹಾಗೂ ಇತರ ಸ್ಪರ್ಧೆಗಳಲ್ಲಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಕಾರ್ಯಕ್ರಮದ ಮೂಲಕ ಸಮಾಜದ ವಿವಿಧ ವಯೋಮಾನದ ಸದಸ್ಯರಿಗೆ ತಮ್ಮ ಪ್ರತಿಭೆ ಪ್ರದರ್ಶಿಸಲು ಅವಕಾಶ ಕಲ್ಪಿಸಲಾಯಿತು.

ಮಹಿಳಾ ಹವ್ಯಕ ವೇದಿಕೆಗೆ ಚಾಲನೆ

ಸಮಾಜದಲ್ಲಿ ಮಹಿಳೆಯರ ಪಾತ್ರವನ್ನು ಇನ್ನಷ್ಟು ಬಲಪಡಿಸುವ ಉದ್ದೇಶದಿಂದ ಮಹಿಳಾ ಹವ್ಯಕ ವೇದಿಕೆಯನ್ನು ಇದೇ ಸಂದರ್ಭ ಉದ್ಘಾಟಿಸಲಾಯಿತು.

ಕಾರ್ಯಕ್ರಮದಲ್ಲಿ ಸಾಧಕರನ್ನು ಸನ್ಮಾನಿಸಿ ಅಭಿನಂದಿಸಲಾಯಿತು. ಅಖಿಲ ಹವ್ಯಕ ಮಹಾಸಭಾದ ಕಾರ್ಯದರ್ಶಿ ಆದಿತ್ಯ ಹೆಗಡೆ ಕಲಗಾರ, ಆರ್.ಜಿ. ಹೆಗಡೆ, ವಿ.ಎಸ್. ಹೆಗಡೆ, ಪ್ರತಿಬಿಂಬ ಕಾರ್ಯಕ್ರಮದ ಸಂಚಾಲಕ ವಿನಾಯಕ ಭಟ್ಟ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಅಖಿಲ ಹವ್ಯಕ ಮಹಾಸಭಾದ ನಿರ್ದೇಶಕ ಅರುಣ ಹೆಗಡೆ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಪ್ರತಿಬಿಂಬ ಕಾರ್ಯಕ್ರಮದ ಸಂಚಾಲಕ ಜಿ.ಎಸ್. ಹೆಗಡೆ ಸ್ವಾಗತಿಸಿದರು. ಸಾವಿತ್ರಿ ಭಟ್ಟ ಪ್ರಾರ್ಥಿಸಿದರು. ಈಶ್ವರ ಭಟ್ಟ ನಿರೂಪಿಸಿದರು.