ಶಿವಕುಮಾರ ಕುಷ್ಟಗಿ

ಗದಗ: ಅಪೌಷ್ಟಿಕತೆ ಎನ್ನುವುದು ಸದೃಢ ಸಮಾಜ ನಿರ್ಮಾಣಕ್ಕೆ ಮಾರಕ ಎಂದು ಸುಪ್ರೀಂ ಕೋರ್ಟ್ ನಿರ್ದೇಶನ ನೀಡಿದೆ. ಇದಕ್ಕಾಗಿ ರಾಜ್ಯ ಮತ್ತು ಸರ್ಕಾರಗಳು ಹಲವಾರು ಯೋಜನೆಗಳನ್ನು ರೂಪಿಸಿವೆ. ಆದರೂ ಮಕ್ಕಳಲ್ಲಿನ ಅಪೌಷ್ಟಿಕತೆ ಪ್ರಮಾಣ ನಿರೀಕ್ಷಿತ ಪ್ರಮಾಣದಲ್ಲಿ ಕಡಿಮೆಯಾಗಿಲ್ಲ.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ದಾಖಲೆಗಳ ಅನುಸಾರ ಜಿಲ್ಲೆಯಲ್ಲಿ 2025- 26ನೇ ಸಾಲಿನಲ್ಲಿ 66076 ಮಕ್ಕಳ ಪೈಕಿ 775 ಮಕ್ಕಳು ಸಾಧಾರಣ ಅಪೌಷ್ಟಿಕತೆ ಹಾಗೂ 123 ಮಕ್ಕಳು ತೀವ್ರ ಅಪೌಷ್ಟಿಕತೆ ಬಳಲುತ್ತಿರುವುದು ಪತ್ತೆಯಾಗಿದ್ದು, ಒಟ್ಟು 898 ಮಕ್ಕಳು ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ.

ವಿಶ್ವ ಆರೋಗ್ಯ ಸಂಸ್ಥೆಯ ಅಪೌಷ್ಟಿಕ ಮಕ್ಕಳನ್ನು ಗುರುತಿಸಲು ನೀಡಿರುವ ಮಾರ್ಗಸೂಚಿಗಳಲ್ಲಿ 1ರಿಂದ 6 ವರ್ಷದೊಳಗಿನ ಮಕ್ಕಳ ಎತ್ತರ ಮತ್ತು ತೂಕ ಆಧರಿಸಿ ಅಪೌಷ್ಟಿಕ ಮಕ್ಕಳನ್ನು ಗುರುತಿಸಲಾಗುತ್ತದೆ. ಆದರೆ ಜಿಲ್ಲೆಯಲ್ಲಿ ಕಳೆದ ವರ್ಷ ತಪಾಸಣೆಗೆ ಒಳಗಾದ ಮಕ್ಕಳ ಸಂಖ್ಯೆಯಲ್ಲಿಯೇ ಭಾರೀ ಇಳಿಕೆಯಾಗಿದ್ದು, ಇದು ಸಹಜವಾಗಿ ಅಪೌಷ್ಟಿಕತೆ ಮಕ್ಕಳ ಸಂಖ್ಯೆಯಲ್ಲಿಯೂ ಕಡಿಮೆಯಾಗಿದೆ ಎನ್ನುವ ಅನುಮಾನ ಸೃಷ್ಟಿಯಾಗುತ್ತಿದೆ.

ಜಿಲ್ಲೆಯಲ್ಲಿ ಇಳಿಮುಖ: ರಾಜ್ಯದ ಬೇರೆ ಜಿಲ್ಲೆಗಳಿಗೆ ಹೋಲಿಕೆ ಮಾಡಿದಲ್ಲಿ ಗದಗ ಜಿಲ್ಲೆಯಲ್ಲಿ ಕಳೆದ ಎರಡು ವರ್ಷಗಳಲ್ಲಿ ತೀವ್ರ ಅಪೌಷ್ಟಿಕ ಮಕ್ಕಳ ಸಂಖ್ಯೆ ಗಮನಾರ್ಹವಾಗಿ ಇಳಿಕೆಯಾಗಿದೆ. 2024ರ ಮಾರ್ಚ್‌ನಲ್ಲಿ (ತೀವ್ರ ಅಪೌಷ್ಟಿಕತೆಯಿಂದ ಬಳಲುವವರು) 220 ಮಕ್ಕಳಿದ್ದರೆ, 2025ರಲ್ಲಿ ಅದು 263ಕ್ಕೆ ಏರಿಕೆಯಾಗಿತ್ತು. ಇದೀಗ 2026ರ ಮಾರ್ಚ್ ವೇಳೆಗೆ 123ಕ್ಕೆ ಇಳಿದಿದ್ದು, ಕಳೆದ ವರ್ಷಕ್ಕೆ ಹೋಲಿಸಿದರೆ 140 ಹಾಗೂ 2024ರೊಂದಿಗೆ ಹೋಲಿಸಿದರೆ 97 ಮಕ್ಕಳ ಸಂಖ್ಯೆಯಲ್ಲಿ ಇಳಿಕೆಯಾಗಿದೆ.


ಶಿರಹಟ್ಟಿ, ಗದಗನಲ್ಲಿ ಹೆಚ್ಚಿವೆ: ಎರಡು ವರ್ಷಗಳ ಅವಧಿಯಲ್ಲಿ ತೀವ್ರ ಅಪೌಷ್ಟಿಕ ಮಕ್ಕಳ ಸಂಖ್ಯೆ ಅರ್ಧಕ್ಕಿಂತ ಹೆಚ್ಚು ಕಡಿಮೆಯಾಗಿರುವುದು ಆಶಾದಾಯಕ ಬೆಳವಣಿಗೆಯಾದರೂ, 123 ಮಕ್ಕಳು ಇನ್ನೂ ತೀವ್ರ ಅಪೌಷ್ಟಿಕತೆಯಿಂದ ಬಳಲುತ್ತಿರುವುದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಹಾಗೂ ಆರೋಗ್ಯ ಇಲಾಖೆಗೆ ಇದು ಎಚ್ಚರಿಕೆ ಗಂಟೆಯಾಗಿದೆ. ಅದರಲ್ಲಿಯೂ ಸದ್ಯ, ತೀವ್ರ ಅಪೌಷ್ಟಿಕತೆಯಿಂದ ಬಳಲುತ್ತಿರುವ 123 ಮಕ್ಕಳಲ್ಲಿ ಶಿರಹಟ್ಟಿ ಹಾಗೂ ಗದಗ ತಾಲೂಕುಗಳಲ್ಲಿಯೇ ಹೆಚ್ಚಿನ ಮಕ್ಕಳಿರುವುದು ಆತಂಕದ ವಿಷಯವಾಗಿದೆ.

ಜಾಗೃತಿ ಕೊರತೆ: ಮಕ್ಕಳ ಅಪೌಷ್ಟಿಕತೆ ತಡೆಗಟ್ಟಲು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಂಗನವಾಡಿಗಳ ಮೂಲಕ ಪೂರಕ ಪೌಷ್ಟಿಕ ಆಹಾರ ವಿತರಣೆ, ಮಕ್ಕಳ ಬೆಳವಣಿಗೆಯ ಮಾಸಿಕ ತಪಾಸಣೆ, ತೀವ್ರ ಅಪೌಷ್ಟಿಕ ಮಕ್ಕಳಿಗೆ ವಿಶೇಷ ಆರೈಕೆ, ಆರೋಗ್ಯ ಇಲಾಖೆಯ ಸಹಯೋಗದಲ್ಲಿ ವೈದ್ಯಕೀಯ ಪರೀಕ್ಷೆ, ಪೋಷಕರಿಗೆ ಪೌಷ್ಟಿಕ ಆಹಾರ ಹಾಗೂ ಆರೈಕೆ ಕುರಿತು ಜಾಗೃತಿ ಕಾರ್ಯಕ್ರಮಗಳನ್ನು ನಡೆಸುತ್ತಿದೆ. ಆದರೂ ಪ್ರಚಾರದ ಹಾಗೂ ಪಾಲಕರಲ್ಲಿನ ಅರಿವಿನ ಕೊರತೆಯಿಂದ ಮಕ್ಕಳಲ್ಲಿ ಅಪೌಷ್ಟಿಕತೆ ಇನ್ನೂ ಜೀವಂತವಾಗಿದೆ.ತೀವ್ರ ಅಪೌಷ್ಟಿಕತೆಯಿಂದ ಬಳಲುತ್ತಿರುವ ಮಕ್ಕಳಿಗೆ ಹೆಚ್ಚು ಪೂರಕ ಪೌಷ್ಟಿಕ ಆಹಾರ ನೀಡುವುದು ಹಾಗೂ ಪೌಷ್ಟಿಕಾಂಶ ಪುನರ್ವಸತಿ ಕೇಂದ್ರಗಳಲ್ಲಿ ಉಚಿತ ಚಿಕಿತ್ಸೆ ನೀಡುವುದು ಸೇರಿದಂತೆ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಅಪೌಷ್ಟಿಕತೆ ನಿವಾರಣೆಗೆ ಎಲ್ಲ ರೀತಿಯ ಜಾಗೃತಿ ವಹಿಸಲಾಗುತ್ತಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕಿ ರಾಧಾ ಮಣ್ಣೂರ ತಿಳಿಸಿದರು.