ಫುಟ್‌ಪಾತ್ ತೆರವು ವಿಚಾರದಲ್ಲಿ ಆಗಾಗ್ಗೆ ಅಧಿಕಾರಿಗಳ ಪ್ರಹಸನವೊಂದು ನಡೆಯುತ್ತದೆ.
ಮಂಜುನಾಥ ಕೆ.ಎಂ.
ಬಳ್ಳಾರಿ: ನಗರದಲ್ಲಿನ ಫುಟ್‌ಪಾತ್ ತೆರವು ವಿಚಾರದಲ್ಲಿ ಆಗಾಗ್ಗೆ ಅಧಿಕಾರಿಗಳ ಪ್ರಹಸನವೊಂದು ನಡೆಯುತ್ತದೆ. ಪೊಲೀಸರೊಂದಿಗೆ ದಿಢೀರ್ ರಸ್ತೆಗಿಳಿಯುವ ಪಾಲಿಕೆ ಅಧಿಕಾರಿಗಳು ಫುಟ್‌ಪಾತ್ ವ್ಯಾಪಾರಿಗಳನ್ನು ತೆರವುಗೊಳಿಸಿ ಜನರ ಗಮನ ಸೆಳೆಯುತ್ತಾರೆ. ಇದರಿಂದ ಪಾಲಿಕೆಗೆ ಸಾರ್ವಜನಿಕರಿಂದ ಶಹಬ್ಬಾಸ್ ಗಿರಿಯೂ ಸಿಗುತ್ತದೆ. ಆದರೆ, ಆರಂಭ ಶೂರತ್ವ ಎಂಬಂತೆ ಅಧಿಕಾರಿಗಳ ಕಾರ್ಯವೈಖರಿ ಒಂದೆರೆಡು ದಿನಗಳಲ್ಲಿಯೇ ಠುಸ್ ಎಂದು ಬಿಡುತ್ತದೆ. ಬಳಿಕ ಎಂದಿನಂತೆ ವ್ಯಾಪಾರಿಗಳು ಪಾದಚಾರಿ ರಸ್ತೆಯನ್ನು ಅತಿಕ್ರಮಿಸಿ ವ್ಯಾಪಾರ- ವಹಿವಾಟು ಮುಂದುವರಿಸುತ್ತಾರೆ.ಕಳೆದ ತಿಂಗಳು ಫುಟ್‌ಪಾತ್ ಅತಿಕ್ರಮಣ ತೆರವು ಕಾರ್ಯ ಭಾರೀ ಸದ್ದು ಮಾಡಿತ್ತು. ಪಾದಚಾರಿ ರಸ್ತೆ ಸೇರಿದಂತೆ ನಡು ರಸ್ತೆಯಲ್ಲಿಯೇ ವ್ಯಾಪಾರ ಮಾಡುವವರಿಗೆ ಪಾಲಿಕೆ ಇತಿಶ್ರೀ ಹಾಡಲಿದೆ. ಇನ್ನು ಮುಂದೆ ಪಾದಚಾರಿಗಳು ನಿರಾತಂಕವಾಗಿ ಓಡಾಡಬಹುದು ಎಂದೇ ಊಹಿಸಲಾಗಿತ್ತು. ಆದರೆ, ಪಾಲಿಕೆ ಅಧಿಕಾರಿಗಳು ರಾಜಕೀಯ ಒತ್ತಡಕ್ಕೆ ಮಣಿದು ಫುಟ್‌ಪಾತ್ ತೆರವಿನಿಂದ ಹಿಂದಕ್ಕೆ ಸರಿದಿದ್ದು ಶಹಬ್ಬಾಸ್‌ಗಿರಿ ನೀಡಿದ ಜನರಿಂದಲೇ ತೀವ್ರ ಟೀಕೆಗೆ ಗುರಿಯಾಗುತ್ತಿದ್ದಾರೆ. ಇಲ್ಲಿ ಅಧಿಕಾರಿಗಳು ಅಷ್ಟೇ ಅಲ್ಲ; ಜನರಿಂದ ಚುನಾಯಿತಗೊಂಡ ಮೇಯರ್, ಉಪ ಮೇಯರ್ ಸೇರಿದಂತೆ ಉಳಿದ ಸದಸ್ಯರ ಪಾತ್ರವೇನು? ಎಂದು ಸಾರ್ವಜನಿಕರು ಪ್ರಶ್ನಿಸುತ್ತಿದ್ದಾರೆ.
ನಗರದ ಬೆಂಗಳೂರು ರಸ್ತೆ, ಟ್ಯಾಂಕ್‌ಬಂಡ್ ರಸ್ತೆ, ತೇರುಬೀದಿ, ಬ್ರಾಹ್ಮಣಬೀದಿ, ಕೌಲ್‌ಬಜಾರ್, ರೇಡಿಯೋಪಾರ್ಕ್, ಗಾಂಧಿನಗರ, ಗ್ರಹಂ ರಸ್ತೆ, ಕೃಷ್ಣಮಾಚಾರಿ ರಸ್ತೆ ಸೇರಿದಂತೆ ಪ್ರಮುಖ ವಾಣಿಜ್ಯ ಪ್ರದೇಶಗಳ ಬಹುತೇಕ ಫುಟ್‌ಪಾತ್‌ಗಳು ಅತಿಕ್ರಮಣವಾಗಿವೆ. ಫುಟ್‌ಪಾತ್ ನಿರ್ಮಾಣವಾಗದಿರುವ ಕಡೆ ರಸ್ತೆಯಲ್ಲಿಯೇ ನಿಂತು ವ್ಯಾಪಾರ ನಡೆಸುವ ದೃಶ್ಯಗಳು ಕಂಡು ಬರುತ್ತವೆ. ಇದರಿಂದ ಪಾದಚಾರಿಗಳು ರಸ್ತೆಯಲ್ಲಿಯೇ ನಡೆದು ಹೋಗಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ. ಇದು ನಿತ್ಯ ಅಪಘಾತ ಪ್ರಕರಣಗಳಿಗೆ ಕಾರಣವಾಗಿದೆ.ಶಾಲಾ ಮಕ್ಕಳು, ಮಹಿಳೆಯರು, ಹಿರಿಯ ನಾಗರಿಕರು ಹಾಗೂ ದಿವ್ಯಾಂಗರಿಗೆ ಈ ಸಮಸ್ಯೆ ಮತ್ತಷ್ಟು ಗಂಭೀರವಾಗಿದೆ. ವಾಹನಗಳ ದಟ್ಟಣೆ ನಡುವೆ ರಸ್ತೆಯಲ್ಲೇ ನಡೆದು ಸಾಗಬೇಕಾದ ಅನಿವಾರ್ಯತೆಯಿಂದ ಪ್ರತಿದಿನ ಅಪಘಾತದ ಭೀತಿ ಕಾಡುತ್ತಿದೆ. ಹಲವೆಡೆ ಸಣ್ಣಪುಟ್ಟ ಅಪಘಾತಗಳು ಸಾಮಾನ್ಯವಾಗಿದ್ದು, ಕೆಲ ಸಂದರ್ಭಗಳಲ್ಲಿ ಜೀವಹಾನಿಗೂ ಕಾರಣವಾಗಿರುವ ಬಗ್ಗೆ ಸಾರ್ವಜನಿಕರು ಆತಂಕ ವ್ಯಕ್ತಪಡಿಸುತ್ತಿದ್ದಾರೆ.
ರಾಜಧಾನಿ ಬೆಂಗಳೂರಿನಲ್ಲಿ ಪಾದಚಾರಿಗಳ ಸುರಕ್ಷತೆಗೆ ಆದ್ಯತೆ ನೀಡುತ್ತಾ ಪ್ರತಿದಿನ ಹಲವು ಕಿಲೋಮೀಟರ್ ವ್ಯಾಪ್ತಿಯಲ್ಲಿ ಫುಟ್‌ಪಾತ್ ಅತಿಕ್ರಮಣ ತೆರವು ಕಾರ್ಯಾಚರಣೆ ನಿರಂತರವಾಗಿ ನಡೆಯುತ್ತಿದೆ. ನ್ಯಾಯಾಲಯದ ನಿರ್ದೇಶನಗಳು ಹಾಗೂ ಸಾರ್ವಜನಿಕ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ಅಲ್ಲಿನ ಸ್ಥಳೀಯ ಸಂಸ್ಥೆಗಳು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುತ್ತಿವೆ. ಆದರೆ ಬಳ್ಳಾರಿಯಲ್ಲಿ ಮಾತ್ರ ಇಂತಹ ಕ್ರಮಗಳು ಆರಂಭ ಶೂರತ್ವಕ್ಕೆ ಸೀಮಿತವಾಗಿರುವುದು ಕಂಡು ಬರುತ್ತಿದ್ದು, ಇಲ್ಲಿನ ಜನಪ್ರತಿನಿಧಿಗಳಿಗೆ ಈ ವಿಚಾರಗಳು ಗಮನಕ್ಕೆ ಬರುವುದಿಲ್ಲವೇ? ಫುಟ್‌ಪಾತ್ ಅತಿಕ್ರಮಣದಿಂದ ನಿತ್ಯ ಪಾದಚಾರಿಗಳು ರಸ್ತೆ ಅಪಘಾತಕ್ಕೀಡಾದರೂ ಮೌನ ವಹಿಸುತ್ತಿರುವುದೇಕೆ? ಜಿಲ್ಲಾಡಳಿತ ಈ ಬಗ್ಗೆ ಕೈಗೊಂಡಿರುವ ಕ್ರಮಗಳೇನು? ಎಂಬ ಪ್ರಶ್ನೆಗಳು ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿವೆ.ನಗರಾಭಿವೃದ್ಧಿ ಎಂದರೆ ಕೇವಲ ರಸ್ತೆ ಅಗಲೀಕರಣ ಅಥವಾ ಕಟ್ಟಡ ನಿರ್ಮಾಣವಲ್ಲ. ಪಾದಚಾರಿಗಳಿಗೆ ಸುರಕ್ಷಿತವಾಗಿ ಸಂಚರಿಸುವ ವಾತಾವರಣ ಕಲ್ಪಿಸುವುದು ಸಹ ಸ್ಥಳೀಯ ಆಡಳಿತದ ಮೂಲಭೂತ ಜವಾಬ್ದಾರಿಯಾಗಿದೆ. ಫುಟ್‌ಪಾತ್‌ಗಳನ್ನು ಅತಿಕ್ರಮಣದಿಂದ ಮುಕ್ತಗೊಳಿಸುವುದರ ಜೊತೆಗೆ ಮರು ಅತಿಕ್ರಮಣ ತಡೆಯಲು ಶಾಶ್ವತ ವ್ಯವಸ್ಥೆ ರೂಪಿಸಬೇಕಿದೆ.
ಮಹಾನಗರ ಪಾಲಿಕೆ ಕಳೆದ ತಿಂಗಳು ಪೊಲೀಸ್ ಇಲಾಖೆಯ ಸಹಯೋಗದೊಂದಿಗೆ ಅತಿಕ್ರಮಣ ತೆರವಿಗೆ ಮುಂದಾಗಿತ್ತು. ಆರಂಭಿಕ ಎರಡು ದಿನಗಳು ಫುಟ್‌ಪಾತ್ ತೆರವು ಕಾರ್ಯ ನಡೆಯಿತು. ಬಳಿಕ ಕಾರ್ಯಾಚರಣೆ ದಿಢೀರ್ ಸ್ಥಗಿತಗೊಂಡಿತು. ಅಧಿಕಾರಿಗಳು ಅತಿಕ್ರಮಣಕಾರರ ಪರವಾಗಿ ಇರುವುದರಿಂದಾಗಿಯೇ ಈ ಹಿಂದಿಗಿಂತಲೂ ಹೆಚ್ಚಿನ ಪ್ರಮಾಣದಲ್ಲಿ ಫುಟ್‌ಪಾತ್‌ಗಳ ಅತಿಕ್ರಮಣ ಬಳ್ಳಾರಿಯಲ್ಲಿ ಕಂಡು ಬರುತ್ತಿದೆ. ಕೂಡಲೇ ಫುಟ್‌ಪಾತ್ ತೆರವುಗೊಳಿಸಿ ಅಪಘಾತಗಳನ್ನು ತಪ್ಪಿಸಬೇಕು ಎನ್ನುತ್ತಾರೆ ನಿವೃತ್ತ ನೌಕರ ಮೃತ್ಯುಂಜಯಪ್ಪ.