ಪ್ರೇಕ್ಷಕರನ್ನು ಯುದ್ಧಭೂಮಿಗೆ ಕರೆದೊಯ್ದ ಹುತಾತ್ಮರು ನಾಟಕ!

KannadaprabhaNewsNetwork |  
Published : Mar 25, 2024, 12:50 AM IST
24ಕೆಡಿವಿಜಿ8-ದಾವಣಗೆರೆಯಲ್ಲಿ ಹಿರಿಯ ರಂಗಕರ್ಮಿ ರವೀಂದ್ರ ಎಚ್.ಅರಳಗುಪ್ಪಿ ಹುತಾತ್ಮರು ಏಕವ್ಯಕ್ತಿ ನಾಟಕದಲ್ಲಿ ಅಭಿನಯಿಸಿರುವುದು. ..................24ಕೆಡಿವಿಜಿ9-ದಾವಣಗೆರೆಯಲ್ಲಿ ಹನ್ಮಂತ್‌ ಪೂಜಾರ್‌ರ ಹುತಾತ್ಮರು ಏಕವ್ಯಕ್ತಿ ನಾಟಕ ಪ್ರದರ್ಶನ ಉದ್ಘಾಟನೆಯಲ್ಲಿ ಡಾ.ಎಂ.ಜಿ.ಈಶ್ವರಪ್ಪ ಮಾತನಾಡಿದರು. | Kannada Prabha

ಸಾರಾಂಶ

ದಾವಣಗೆರೆ ವಿಶ್ವವಿದ್ಯಾನಿಲಯದ ದೃಶ್ಯಕಲಾ ಮಹಾ ವಿದ್ಯಾಲಯದ ಸಭಾಂಗಣದಲ್ಲಿ ಭಾನುವಾರ ಸಂಜೆ ನಡೆದ ಹುತಾತ್ಮರು ಏಕವ್ಯಕ್ತಿ ನಾಟಕವು ನೋಡುಗರನ್ನು ಮಂತ್ರಮುಗ್ದಗೊಳಿಸಿತು. ಯೋಧನ ಪಾತ್ರಧಾರಿಯ ಅಭಿನಯ, ಮಾತುಗಳು, ಗುಂಡು, ಸಿಡಿಮದ್ದಿನ ಸದ್ದುಗಳು ನೋಡುಗರನ್ನು ಕೆಲಹೊತ್ತು ಯುದ್ಧಭೂಮಿಗೆ ಕರೆದೊಯ್ದಂತಹ ಅನುಭವ ಕೊಟ್ಟವು.

- ರವೀಂದ್ರ ಅರಳುಗುಪ್ಪಿ ಏಕವ್ಯಕ್ತಿ ಅಭಿನಯಕ್ಕೆ ಮಾರುಹೋದ ಪ್ರೇಕ್ಷಕರು

- - - ಕನ್ನಡಪ್ರಭ ವಾರ್ತೆ, ದಾವಣಗೆರೆ ಹುತಾತ್ಮರು ಏಕವ್ಯಕ್ತಿ ನಾಟಕವು ರಜಾ ದಿನವಾದ ಭಾನುವಾರ ನೋಡುಗರನ್ನು ಮಂತ್ರಮುಗ್ದರಾಗಿ ಮಾಡಿತು. ಯೋಧನ ಪಾತ್ರಧಾರಿಯ ಅಭಿನಯ, ಮಾತುಗಳು, ಗುಂಡು, ಸಿಡಿಮದ್ದಿನ ಸದ್ದುಗಳು ನೋಡುಗರನ್ನು ಕೆಲಹೊತ್ತು ಯುದ್ಧಭೂಮಿಗೆ ಕರೆದೊಯ್ದಂತಹ ಅನುಭವ ಕೊಟ್ಟವು.

ನಗರದ ದಾವಣಗೆರೆ ವಿಶ್ವವಿದ್ಯಾನಿಲಯದ ದೃಶ್ಯಕಲಾ ಮಹಾ ವಿದ್ಯಾಲಯದ ಸಭಾಂಗಣದಲ್ಲಿ ಭಾನುವಾರ ಸಂಜೆ ಹನ್ಮಂತ್ ಪೂಜಾರ್ ರಚಿಸಿದ ಹುತಾತ್ಮರು ಏಕವ್ಯಕ್ತಿ ನಾಟಕವು ಹೀಗೆ ನೋಡುಗರನ್ನು ಸೆಳೆದಿಟ್ಟರೆ, ಬಹುಮುಖ ಪ್ರತಿಭೆಯಾದ ರವೀಂದ್ರ ಅರಳಗುಪ್ಪಿ ಅಭಿನಯ ನೋಡುಗರನ್ನು ಮಂತ್ರಮುಗ್ಧರನ್ನಾಗಿಸಿತು.

ಅನ್ವೇಷಕರ್ ಆರ್ಟ್ ಫೌಂಡೇಷನ್‌ನಿಂದ ಅನ್ವೇಷಕರು ರಂಗಯಾತ್ರೆ ಭಾಗವಾಗಿ ಈಗಾಗಲೇ ಶಿವಮೊಗ್ಗ, ಚಿಕ್ಕಮಗಳೂರು, ಹಾಸನ, ಮಂಡ್ಯ, ಮೈಸೂರು, ಚಾಮರಾಜ ನಗರ ಇತರೆಡೆ ಪಿಯು ಕಾಲೇಜುಗಳ ಪಠ್ಯ ಆದರಿಸಿದ ನಾಟಕಗಳ ಮೂಲಕ ತನ್ನದೇ ಹೆಜ್ಜೆ ಗುರುತು ಮೂಡಿಸುತ್ತಿದೆ. ಇದೀಗ ದಾವಣಗೆರೆಯಲ್ಲಿ ಹುತಾತ್ಮರು ಏಕವ್ಯಕ್ತಿ ನಾಟಕ ಪ್ರದರ್ಶನದ ಮೂಲಕ ಎಲ್ಲರ ಪ್ರಶಂಸೆಗೆ ಪಾತ್ರವಾಗಿದೆ.

ಹುತಾತ್ಮರು ಏಕವ್ಯಕ್ತಿ ನಾಟಕ ಪ್ರದರ್ಶನವನ್ನು ಹಿರಿಯ ಜಾನಪದ ತಜ್ಞ ಡಾ.ಎಂ.ಜಿ.ಈಶ್ವರಪ್ಪ ಉದ್ಘಾಟಿಸಿ, ತಂಡದ ಪ್ರಯತ್ನಕ್ಕೆ ಶುಭಾರೈಸಿದರು. ಹಿರಿಯ ವಿಚಾರವಾದಿ, ಪ್ರಾಧ್ಯಾಪಕ ಡಾ.ಎಚ್.ವಿಶ್ವನಾಥ, ಹಿರಿಯ ಪತ್ರಕರ್ತರಾದ ಬಾ.ಮ. ಬಸವರಾಜಯ್ಯ, ಬಿ.ಎನ್.ಮಲ್ಲೇಶ, ನಾಟಕ ರಚನೆಕಾರ ಹನ್ಮಂತ್ ಪೂಜಾರ್, ಎಸ್.ಎಸ್.ಸಿದ್ದರಾಜು ಇತರರು ಉದ್ಘಾಟನಾ ಸಮಾರಂಭದಲ್ಲಿದ್ದರು. ಕೊರೋನಾ ನಂತರ ಮತ್ತೆ ಸಂಸ್ಥೆ ತನ್ನ ಕಾರ್ಯ ಚಟುವಟಿಕೆ ಪುನಾರಂಭಿಸಿದ್ದು, ನಗರದಲ್ಲಿ ಹುತಾತ್ಮರು ಏಕವ್ಯಕ್ತಿ ನಾಟಕ ಪ್ರದರ್ಶನದ ಮೂಲಕ ಶುಭಾರಂಭ ಮಾಡಿದೆ.

ರಂಗದ ಮೇಲೆ ಹಿರಿಯ ಕಲಾವಿದ ರವೀಂದ್ರ ಎಚ್. ಅರಳಗುಪ್ಪಿ ಏಕವ್ಯಕ್ತಿಯಾಗಿ ಅಭಿನಯಿಸಿ, ತಮ್ಮಲ್ಲಿ ಅಡಗಿರುವ ನಟನ ಅಭಿನಯ ಪ್ರೌಢಿಮೆ ಅನಾವರಣಗೊಳಿಸಿದರು. ನಾಟಕ ರಚನೆ, ವಿನ್ಯಾಸ, ಸಂಗೀತ, ನಿರ್ದೇಶನ ಹನ್ಮಂತ್ ಪೂಜಾರ್ ಅವರದ್ದಾಗಿದ್ದು, ನಾಟಕ ನಿರ್ವಹಣೆ ಮತ್ತು ಬೆಳಕು ಎಸ್.ಎಸ್.ಸಿದ್ಧರಾಜು ಎಂದಿನಂತೆ ಪೂಜೆಯಂತೆ ತಮ್ಮ ಕೆಲಸವನ್ನು ಅಚ್ಚುಕಟ್ಟಾಗಿ ನಿರ್ವಹಿಸಿ, ಗಮನ ಸೆಳೆದರು. ರಂಗವನ್ನು ಶಂಭುಲಿಂಗ ಕೊಟ್ಟೂರು ನಿರ್ವಹಿಸಿ, ಕಳೆ ತಂದರು. ನಾಟಕಕ್ಕೆ ಉಚಿತ ಪ್ರವೇಶ ಅವಕಾಶವಿತ್ತು.

- - -

-24ಕೆಡಿವಿಜಿ8: ಹುತಾತ್ಮರು ಏಕವ್ಯಕ್ತಿ ನಾಟಕದಲ್ಲಿ ರವೀಂದ್ರ ಅರಳಗುಪ್ಪಿ ಅಭಿನಯ. -24ಕೆಡಿವಿಜಿ9: ಹುತಾತ್ಮರು ಏಕವ್ಯಕ್ತಿ ನಾಟಕ ಪ್ರದರ್ಶನ ಉದ್ಘಾಟನೆಯಲ್ಲಿ ಡಾ. ಎಂ.ಜಿ.ಈಶ್ವರಪ್ಪ ಮಾತನಾಡಿದರು.

PREV

Recommended Stories

ನೀಲಿ ಮೊಟ್ಟೆ ಇಟ್ಟ ಚನ್ನಗಿರಿಯ ನಾಟಿ ಕೋಳಿ: ಸ್ಥಳೀಯರಲ್ಲಿ ತೀವ್ರ ಕುತೂಹಲ
ಸಿಗಂದೂರಿನಲ್ಲಿ ವಾಟರ್ ಏರೋಡ್ರೋಮ್: ವಿಮಾನ ಟೇಕಾಫ್‌, ಲ್ಯಾಂಡಿಂಗ್‌! ಪ್ರವಾಸೋದ್ಯಮಕ್ಕೆ ಹೊಸ ಹೆಜ್ಜೆ?