ಎನ್‌ಡಿಎ ಅಧಿಕಾರಕ್ಕೆ ಬಂದ್ರೆ ಮೇಕೆದಾಟು ಡ್ಯಾಂ: ದೇವೇಗೌಡ

KannadaprabhaNewsNetwork |  
Published : Mar 25, 2024, 12:50 AM ISTUpdated : Mar 25, 2024, 11:39 AM IST
JDS press meet | Kannada Prabha

ಸಾರಾಂಶ

ಮೇಕೆದಾಟು ಯೋಜನೆ ಬಗ್ಗೆ ಲೋಕಸಭಾ ಚುನಾವಣೆ ಪ್ರಣಾಳಿಕೆಯಲ್ಲಿ ವಿರೋಧಿಸಿರುವ ಡಿಎಂಕೆ ಪಕ್ಷದ ನಡೆಯನ್ನು ಕಟುವಾಗಿ ಟೀಕಿಸಿರುವ ಜೆಡಿಎಸ್‌ ವರಿಷ್ಠ ಎಚ್‌.ಡಿ.ದೇವೇಗೌಡ, ಎನ್‌ಡಿಎ ಸರ್ಕಾರ ರಚನೆಯಾದ ಬಳಿಕ ಮೇಕೆದಾಟು ಯೋಜನೆ ಜಾರಿ ಮಾಡುವ ಕುರಿತು ಜೆಡಿಎಸ್‌ ಪ್ರಣಾಳಿಕೆಯಲ್ಲಿ ಸೇರಿಸಲಿದೆ ಎಂದು ತಿಳಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಮೇಕೆದಾಟು ಯೋಜನೆ ಬಗ್ಗೆ ಲೋಕಸಭಾ ಚುನಾವಣೆ ಪ್ರಣಾಳಿಕೆಯಲ್ಲಿ ವಿರೋಧಿಸಿರುವ ಡಿಎಂಕೆ ಪಕ್ಷದ ನಡೆಯನ್ನು ಕಟುವಾಗಿ ಟೀಕಿಸಿರುವ ಜೆಡಿಎಸ್‌ ವರಿಷ್ಠ ಎಚ್‌.ಡಿ.ದೇವೇಗೌಡ, ಎನ್‌ಡಿಎ ಸರ್ಕಾರ ರಚನೆಯಾದ ಬಳಿಕ ಮೇಕೆದಾಟು ಯೋಜನೆ ಜಾರಿ ಮಾಡುವ ಕುರಿತು ಜೆಡಿಎಸ್‌ ಪ್ರಣಾಳಿಕೆಯಲ್ಲಿ ಸೇರಿಸಲಿದೆ ಎಂದು ತಿಳಿಸಿದ್ದಾರೆ.

ಇದೇ ವೇಳೆ ಆಡಳಿತಾರೂಢ ಕಾಂಗ್ರೆಸ್, ಬಿಜೆಪಿ ಸಹ ತನ್ನ ಪ್ರಣಾಳಿಕೆಯಲ್ಲಿ ಮೇಕೆದಾಟು ಯೋಜನೆ ಜಾರಿ ಕುರಿತು ಪ್ರಸ್ತಾಪಿಸಬೇಕು ಎಂದು ಆಗ್ರಹಿಸಿದ್ದಾರೆ. 

ರಾಜ್ಯದ ಎಲ್ಲಾ ರಾಜಕೀಯ ಪಕ್ಷಗಳು ಮೇಕೆದಾಟು ಯೋಜನೆಯನ್ನು ಬೆಂಬಲಿಸಿ ಅದನ್ನು ಕಾರ್ಯಗತಗೊಳಿಸುವ ಅಚಲ ನಿರ್ಧಾರವನ್ನು ಚುನಾವಣೆ ಪ್ರಣಾಳಿಕೆಯಲ್ಲಿ ಪ್ರಕಟಿಸಬೇಕು. 

ಈ ನಿಟ್ಟಿನಲ್ಲಿ ದೃಢ ಹೆಜ್ಜೆಯನ್ನಿಡಬೇಕು ಎಂದು ಒತ್ತಾಯಿಸಿದ್ದಾರೆ. ಭಾನುವಾರ ಜೆಡಿಎಸ್‌ ಕಚೇರಿ ಜೆ.ಪಿ.ಭವನದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ತಮಿಳುನಾಡಿನ ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್‌ ತಮ್ಮ ಪಕ್ಷದ ಪ್ರಣಾಳಿಕೆಯಲ್ಲಿ ಮೇಕೆದಾಟು ಯೋಜನೆಯನ್ನು ವಿರೋಧಿಸುವ ಅಂಶವನ್ನು ಸೇರಿಸಿರುವುದು ಖಂಡನೀಯ. 

ಜೆಡಿಎಸ್ ಪಕ್ಷದ ಪ್ರಣಾಳಿಕೆಯಲ್ಲಿ ಮೇಕೆದಾಟು ಬೆಂಬಲಿಸಿ ಕುಡಿಯುವ ನೀರಿನ ಯೋಜನೆಯನ್ನು ಜಾರಿ ಮಾಡುತ್ತೇವೆ ಎಂಬುದಾಗಿ ಜನರಿಗೆ ತಿಳಿಸುತ್ತೇವೆ ಎಂದು ತಮಿಳುನಾಡಿಗೆ ಪ್ರತ್ಯುತ್ತರ ನೀಡಿದರು. 

ತಮಿಳುನಾಡಿನ ಬೆದರಿಕೆಗಳಿಗೆ ಯಾವುದೇ ರೀತಿಯ ಭಯ ಪಡಬೇಕಾಗಿಲ್ಲ. ಚುನಾವಣೆ ಮುಗಿದ ಮೇಲೆ ಮೇಕೆದಾಟು ಅಣೆಕಟ್ಟು ಕಟ್ಟಲು ನಾನೊಬ್ಬನೇ ಮಾತ್ರವಲ್ಲದೇ, ರಾಜ್ಯ ಸರ್ಕಾರ, ಮುಖ್ಯಮಂತ್ರಿ ಸಿದ್ದರಾಮಯ್ಯ, ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಸಮೇತ ಹೋರಾಟ ಮಾಡೋಣ ಎಂದರು. 

ತಮಿಳುನಾಡು ಪರ ವಕೀಲ ಶೇಖರ್ ನಫಾರ್ಡ್ ಅವರು ನ್ಯಾಯಾಲಯದಲ್ಲಿ ವಾದ ಮಂಡಿಸುವಾಗ ಮೇಕೆದಾಟು ಅಣೆಕಟ್ಟು ಕಟ್ಟಲಿ, ನಮ್ಮದೇನೂ ಅಭ್ಯಂತರ ಇಲ್ಲ ಎಂದಿದ್ದಾರೆ. 

ಹೀಗಾಗಿ ಈ ನಿಟ್ಟಿನಲ್ಲಿ ಸರ್ಕಾರ ಕ್ರಮ ಕೈಗೊಳ್ಳಬೇಕು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಬಜೆಟ್‌ನಲ್ಲಿಯೇ ಮೇಕೆದಾಟು ಯೋಜನೆಗೆ ಅವಕಾಶ ಮಾಡಿಕೊಟ್ಟಿದ್ದಾರೆ. ಮೂರು ಪಕ್ಷಗಳು ಒಟ್ಟುಗೂಡಿಯೇ ಹೋರಾಡಬೇಕು ಎಂದು ಹೇಳಿದರು. 

ಪ್ರಧಾನಿ ಅನುಮತಿ ಕೊಡಿಸಬೇಕು: ಇದು ಕಾಂಗ್ರೆಸ್, ಬಿಜೆಪಿ, ಡಿಎಂಕೆ ಅಥವಾ ಯಾವುದೇ ಪಕ್ಷದ ಯೋಜನೆಯಲ್ಲ, ಬದಲಿಗೆ ಜನಪರವಾದ ಯೋಜನೆಯಾಗಿದೆ. ಕುಡಿಯುವ ನೀರಿಗಾಗಿ ಜನತೆ ಸಮಸ್ಯೆಗೊಳಗಾಗಿದ್ದಾರೆ. 

ಕಾವೇರಿ ಕೊಳ್ಳದ ಒಂಬತ್ತು ಜಿಲ್ಲೆಗಳಲ್ಲಿ ಜಲ ಸಂಕಷ್ಟ ಎದುರಾಗಿದೆ. ಮೇಕೆದಾಟು ಯೋಜನೆಯಿಂದ ಐದು ಸಾವಿರ ಎಕರೆ ಮುಳುಗಡೆಯಾಗುವುದಿಲ್ಲ. 

ಈ ಅಂಶವನ್ನು ಪರಿಸರ ನಿಪುಣರು ಅರ್ಥ ಮಾಡಿಕೊಳ್ಳಬೇಕು ಎಂದು ತಿಳಿಸಿದರು. ಅಧಿಕಾರಿಗಳು, ನೀರಾವರಿ ತಜ್ಞರು ಮೇಕೆದಾಟು ಯೋಜನೆಯಿಂದ 30 ಟಿಎಂಸಿ ನೀರು ಬಳಕೆ ಮಾಡಿಕೊಳ್ಳಬಹುದು ಎಂದಿದ್ದಾರೆ. 

2018ರಲ್ಲಿಯೆ ಕೇಂದ್ರ ಸರ್ಕಾರ ಈ ಯೋಜನೆಯ ಕಾರ್ಯಸಾಧ್ಯತೆಯ ವರದಿಯನ್ನು ಕೇಂದ್ರೀಯ ಜಲ ಆಯೋಗಕ್ಕೆ ಸಲ್ಲಿಸಿದ್ದು, ವರದಿಯನ್ನು ಒಪ್ಪಿದ ನಂತರ ಸಮಗ್ರ ಯೋಜನಾ ವರದಿ ಸಲ್ಲಿಸುವಂತೆ ರಾಜ್ಯಕ್ಕೆ ಸೂಚಿಸಿತ್ತು. 

ಅದರಂತೆ 2019ರಲ್ಲಿ ರಾಜ್ಯ ಸರ್ಕಾರ ಡಿಪಿಆರ್‌ ಸಲ್ಲಿಸಿದೆ. ಇದಕ್ಕೆ ಪ್ರಧಾನಮಂತ್ರಿಗಳು ಅನುಮತಿ ಕೊಡಿಸಬೇಕು ಹಾಗೂ ಮೇಕೆದಾಟು ಯೋಜನೆ ವಿಚಾರದಲ್ಲಿ ಪ್ರಧಾನಿ ಮಧ್ಯಸ್ಥಿಕೆ ವಹಿಸಬೇಕು ಎಂದು ಆಗ್ರಹಿಸಿದರು. 

ಜೆಡಿಎಸ್ ರಾಜ್ಯ ಕೋರ್ ಕಮಿಟಿ ಅಧ್ಯಕ್ಷ ಜಿ.ಟಿ.ದೇವೇಗೌಡ, ವಿಧಾನ ಪರಿಷತ್ ಸದಸ್ಯ ತಿಪ್ಪೇಸ್ವಾಮಿ ಇತರರು ಉಪಸ್ಥಿತರಿದ್ದರು.

ಬರದಿಂದ ಜನ ವಲಸೆ ಹೋಗುತ್ತಿದ್ದಾರೆ: ಎಚ್‌ಡಿಡಿಕಾವೇರಿ ಕೊಳ್ಳದ 9 ಜಿಲ್ಲೆಯ 22 ತಾಲೂಕು ಮತ್ತು ಬೆಂಗಳೂರು ನಗರ ಸೇರಿ ಅನೇಕ ಕಡೆ ಕುಡಿಯುವ ನೀರಿನ ಸಮಸ್ಯೆ ತುಂಬಾ ಭೀಕರವಾಗಿದ್ದು, ಕಳೆದ ಐದು ದಿನಗಳಿಂದ ಕೆಲವರು ಮನೆಗಳಿಗೆ ಬೀಗ ಹಾಕಿ ವಲಸೆ ಹೋಗಿದ್ದಾರೆ ಎಂದು ಜೆಡಿಎಸ್‌ ವರಿಷ್ಠ ಎಚ್‌.ಡಿ.ದೇವೇಗೌಡ ಹೇಳಿದ್ದಾರೆ. 

ಕುಡಿಯಲು ನೀರಿಲ್ಲ, ಈ ಭೀಕರ ಸಮಸ್ಯೆಗೆ ಪರಿಹಾರ ಒದಗಿಸಲು ರಾಜ್ಯ ಸರ್ಕಾರದಿಂದ ಸಾಧ್ಯವಾಗಿಲ್ಲ. ಹೀಗಾಗಿ ಜನರು ತಮ್ಮ ಮನೆಗಳಿಗೆ ಬೀಗ ಹಾಕಿ ಬೇರೆ ಊರುಗಳಿಗೆ ಹೋಗುತ್ತಿದ್ದಾರೆ ಎಂದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬೇಲೂರು ದೇವಸ್ಥಾನಕ್ಕೆ ಡಿಸಿ ಭೇಟಿ
ವಾಕ್, ಶ್ರವಣ ಸಮಸ್ಯೆ ಪರಿಹರಿಸುವ ಪ್ರಯಾಸ್ ಯೋಜನೆ ಮಾದರಿ