ವೈಭವದ ಉಜ್ಜಯಿನಿ ಮರುಳಸಿದ್ದೇಶ್ವರ ಸ್ವಾಮಿ ಶಿಖರ ತೈಲಾಭಿಷೇಕ

KannadaprabhaNewsNetwork | Published : May 4, 2025 1:30 AM

ಸಾರಾಂಶ

ಕೊಟ್ಟೂರು ತಾಲೂಕಿನ ಉಜ್ಜಯಿನಿ ಶ್ರೀ ಗುರು ಮರುಳಸಿದ್ದೇಶ್ವರ ಸ್ವಾಮಿಯ ದೇವಸ್ಥಾನದಲ್ಲಿ ಶನಿವಾರ ಸಂಜೆ 5.55ಕ್ಕೆ ಶಿಖರ ತೈಲಾಭಿಷೇಕ ಕಾರ್ಯಕ್ರಮ ಅಪಾರ ಭಕ್ತರ ನಡುವೆ ಅದ್ಧೂರಿಯಾಗಿ ನಡೆಯಿತು. ಸಚಿವ ವಿ. ಸೋಮಣ್ಣ ಹಾಗೂ ಹಲವು ಶಿವಾಚಾರ್ಯರು ಪಾಲ್ಗೊಂಡಿದ್ದರು.

ಕೊಟ್ಟೂರು: ತಾಲೂಕಿನ ಉಜ್ಜಯಿನಿ ಶ್ರೀ ಗುರು ಮರುಳಸಿದ್ದೇಶ್ವರ ಸ್ವಾಮಿಯ ದೇವಸ್ಥಾನದಲ್ಲಿ ಶನಿವಾರ ಸಂಜೆ 5.55ಕ್ಕೆ ಶಿಖರ ತೈಲಾಭಿಷೇಕ ಕಾರ್ಯಕ್ರಮ ಅಪಾರ ಭಕ್ತರ ನಡುವೆ ಅದ್ಧೂರಿಯಾಗಿ ನಡೆಯಿತು.

ಸಂಜೆಯ ಗೋಧೂಳಿ ಸಮಯದಲ್ಲಿ ಶಿಖರ ತೈಲಾಭಿಷೇಕ ನೆರವೇರುತ್ತಿದ್ದಂತೆ ನೆರೆದಿದ್ದ ಅಪಾರ ಸಂಖ್ಯೆಯ ಜನಸ್ತೋಮ ಸ್ವಾಮಿಗೆ ಜಯಕಾರ ಅರ್ಪಿಸಿ, ಬಾಳೆಹಣ್ಣುಗಳನ್ನು ರಾಶಿಯೋಪಾದಿಯಲ್ಲಿ ತೂರಿ ಭಕ್ತಿ ಸಮರ್ಪಿಸಿದರು.

ಎಲ್ಲೆಡೆ ದೇವಸ್ಥಾನಗಳಲ್ಲಿ ದೇವರ ಮೂರ್ತಿಗೆ ರುದ್ರಾಭಿಷೇಕ, ಕ್ಷೀರಾಭಿಷೇಕ, ಜಲಾಭಿಷೇಕ ಮಾಡುವುದು ರೂಢಿಯಲ್ಲಿದ್ದರೆ ಉಜ್ಜಯಿನಿ ಶ್ರೀ ಮರುಳಸಿದ್ದ ಸ್ವಾಮಿಗೆ ತೈಲಾಭಿಷೇಕ ನೆರವೇರಿಸಲಾಗುತ್ತದೆ.

ಸಂಪ್ರದಾಯದಂತೆ ಜರ್ಮಲಿ ಪಾಳೆಗಾರ ಮನೆತನದವರು ಮಣ್ಣಿನ ಕುಡಿಕೆಯಲ್ಲಿ ಕಳುಹಿಸಿದ್ದ ತೈಲವನ್ನು ಆಯಾಗಾರ ಬಳಗದವರು ಶಿಖರದ ಮೇಲೆ ಸುರಿದರು. ಆನಂತರ ಇತರ ಭಕ್ತರು ಡಬ್ಬಗಟ್ಟಲೆ ಭಕ್ತಿಯ ಕಾಣಿಕೆಯಾಗಿ ನೀಡಿದ ಎಣ್ಣೆಯನ್ನು ಅಡಿಯಿಂದ ಮುಡಿಯವರೆಗೆ ಧಾರೆ ಎರೆಯಲಾಯಿತು.

ಶಾಪ ವಿಮೋಚನೆಯ ಕಾರಣಕ್ಕಾಗಿ ಜರ್ಮಲಿ ಪಾಳೆಗಾರ ವಂಶಸ್ಥರು ಶ್ರೀ ಗುರುಮರುಳಸಿದ್ದೇಶ್ವರ ಸ್ವಾಮಿಗೆ ಎಣ್ಣೆಯನ್ನು ಕಳುಹಿಸಿಕೊಡುವ ಪದ್ಧತಿ ಇದೆ. ಅದರಂತೆ ಪಾಳೆಗಾರ ಮನೆತನದ ಕೆಲವರು ಪಾದಯಾತ್ರೆ ಮೂಲಕ ಎರಡು ಮಡಿಕೆಯ ಕೊಡಗಳಲ್ಲಿ ಎಣ್ಣೆಯನ್ನು ದೂರದ ಜರ್ಮಲಿಯಿಂದ ಉಜ್ಜಯಿನಿಗೆ ಶನಿವಾರದ ಮಧ್ಯಾಹ್ನದ ವೇಳೆಗೆ ತಂದರು. ಆನಂತರ ಈ ಎಣ್ಣೆಯನ್ನು ಸದ್ಧರ್ಮ ಪೀಠದ ಆಯಗಾರ ಬಳಗದವರು ಬರಮಾಡಿಕೊಂಡು ಮೆರವಣಿಗೆಯೊಂದಿಗೆ ದೇವಸ್ಥಾನಕ್ಕೆ ತಂದರು. ಉಜ್ಜಯಿನಿ ಪೀಠದ ಜಗದ್ಗುರು ಸಿದ್ದಲಿಂಗ ರಾಜದೇಶಿಕೇಂದ್ರ ಸ್ವಾಮೀಜಿ ಎಣ್ಣೆ ಗಡಿಗೆಗಳಿಗೆ ಆಶೀರ್ವಾದ ಮಾಡಿದರು. ಬಳಿಕ ಶಿಖರಕ್ಕೆ ಅಭಿಷೇಕ ನೆರವೇರಿಸಲು ಸಂಜೆ 5.55ರ ಸುಮಾರಿಗೆ ಹಸಿರು ನಿಶಾನೆ ತೋರಿದರು. ಈ ಘಳಿಗೆಯಿಂದಲೇ ಶಿಖರಕ್ಕೆ ಎಣ್ಣೆಯಿಂದ ಮಜ್ಜನಗೊಳಿಸುವ ಕಾರ್ಯ ಸುಮಾರು ಮುಕ್ಕಾಲು ಗಂಟೆ ವರೆಗೆ ನಡೆಯಿತು. ಎಣ್ಣೆಯ ಮಜ್ಜನದಿಂದ ಶಿಖರ ಸಂಪೂರ್ಣ ಒದ್ದೆಯಾಗಿತು. ಈ ಬಗೆಯ ಶಿಖರದ ಮೇಲೆ ನಿಂತೆ 20ಕ್ಕೂ ಹೆಚ್ಚು ಆಯಗಾರ ಬಳಗದವರು ತೈಲಾಭಿಷೇಕ ನೆರವೇರಿಸುತ್ತಾರೆ. ಈ ವೇಳೆ ಕೆಳಗೆ ಜಾರಿ ಬೀಳುವ ಅಪಾಯವಿದ್ದರೂ ಅವರು ಲೆಕ್ಕಿಸುವುದಿಲ್ಲ.

ರೈಲ್ವೆ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ , ಮಾಜಿ ಸಚಿವ ಬಿ. ಶ್ರೀರಾಮುಲು, ಕೂಡ್ಲಿಗಿ ಬಿಜೆಪಿ ಮಂಡಳ ಅಧ್ಯಕ್ಷ ಕಾಮಶೆಟ್ಟಿ ನಾಗರಾಜ, ಹರಪನಹಳ್ಳಿಯ ವರಸದ್ಯೋಜಾತ ಶಿವಾಚಾರ್ಯ ಸ್ವಾಮಿ, ರಾಘವಾಂಕ ಶಿವಾಚಾರ್ಯ ಸ್ವಾಮೀಜಿ, ಚಾನುಕೋಟಿ ಸಿದ್ದಲಿಂಗಶಿವಚಾರ್ಯ ಸ್ವಾಮೀಜಿ, ಮಹೇಶ್ವರ ಸ್ವಾಮೀಜಿ ಹಾಗೂ ವಿವಿಧ ಮಠದ ಶಿವಾಚಾರ್ಯರು ಉಪಸ್ಥಿತರಿದ್ದರು.

Share this article