ರಾಮನಗರ: ಜಾತಿ ಕಾರಣಕ್ಕೆ ಹುಬ್ಬಳ್ಳಿಯ ಇನಾಂ ವೀರಾಪುರದಲ್ಲಿ ಗರ್ಭಿಣಿ ಮಾನ್ಯ ಪಾಟೀಲರ ಮರ್ಯಾದೆಗೇಡು ಹತ್ಯೆ ಪ್ರಕರಣದ ತನಿಖೆಯನ್ನು ವಿಶೇಷ ತನಿಖಾ ತಂಡಕ್ಕೆ ವಹಿಸಬೇಕು ಎಂದು ಆಗ್ರಹಿಸಿ ದಲಿತ ಸಂಘಟನೆಗಳ ಒಕ್ಕೂಟದ ಪದಾಧಿಕಾರಿಗಳು ಜಿಲ್ಲಾಧಿಕಾರಿಗಳು ಮನವಿ ಸಲ್ಲಿಸಿದರು.
ದಲಿತ ಯುವಕನನ್ನು ಮದುವೆಯಾದ ಕಾರಣಕ್ಕೆ ಧಾರವಾಡ ಜಿಲ್ಲೆಯ ಹುಬ್ಬಳ್ಳಿ ತಾಲೂಕಿನ ಇನಾಂ ವೀರಾಪುರದಲ್ಲಿ ತನ್ನ ಕುಟುಂಬದವರಿಂದಲೇ ಗರ್ಭಿಣಿ ಮಾನ್ಯ ಪಾಟೀಲ ಕೊಲೆಯಾಗಿದ್ದಾಳೆ. ಆಕೆಯ ಗಂಡ ವಿವೇಕಾನಂದ ದೊಡ್ಡಮನಿ ಸೇರಿದಂತೆ ಇಡೀ ಕುಟುಂಬದವರ ಮೇಲೆಯೂ ಹಲ್ಲೆ ನಡೆದಿದೆ. ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿರುವ ದೊಡ್ಡಮನಿ ಅವರ ತಂದೆ-ತಾಯಿ ಇಂದಿಗೂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಲಿಂಗಾಯತ ರೆಡ್ಡಿ ಸವರ್ಣಿಯ ಸಮುದಾಯದ ಮಾನ್ಯ ಪಾಟೀಲ ಹಾಗೂ ದಲಿತ ಮಾದಿಗ ಸಮುದಾಯಕ್ಕೆ ಸೇರಿದ ವಿವೇಕಾನಂದ ದೊಡ್ಡಮನಿ ಇಬ್ಬರೂ ಒಂದೇ ಊರಿನವರು. ಇಬ್ಬರೂ ಪರಸ್ಪರ ಪ್ರೀತಿಸಿ, ಮಾನ್ಯ ಕುಟುಂಬದವರ ವಿರೋಧದ ನಡುವೆಯೂ ಮದುವೆಯಾಗಿ ಹೊರಗೆ ನೆಲೆಸಿದ್ದರು. ಮಾನ್ಯ ಗರ್ಭಿಣಿಯಾದ ಬಳಿಕ ದಂಪತಿ ಊರಿಗೆ ಬಂದಿದ್ದರು. ಇದನ್ನು ಸಹಿಸದ ಮಾನ್ಯ ಕುಟುಂಬ ಅಮಾನವೀಯವಾಗಿ ಗರ್ಭಿಣಿ ಮಗಳನ್ನು ಹೊಡೆದು ಕೊಂದು ಕ್ರೌರ್ಯ ಮೆರೆದಿದ್ದಾರೆ.
ಜಾತಿ ಕಾರಣಕ್ಕೆ ನಡೆಯುವ ಇಂತಹ ಕ್ರೌರ್ಯವನ್ನು ನಾಗರಿಕ ಸಮಾಜ ಖಂಡಿಸಬೇಕು. ಜಾತಿ ಆಧಾರಿತ ದೌರ್ಜನ್ಯ, ಹಲ್ಲೆ, ಅತ್ಯಾಚಾರ, ಕೊಲೆಗಳಿಗೆ ಕಠಿಣ ಶಿಕ್ಷೆ ವಿಧಿಸಬೇಕು. ಕೃತ್ಯದ ವಿರುದ್ಧ ಎಲ್ಲಾ ಜಾತಿ ಮತ್ತು ಧರ್ಮಗಳ ಸ್ವಾಮೀಜಿಗಳು, ಗುರುಗಳು, ರಾಜಕಾರಣಿಗಳು, ಸಾಹಿತಿಗಳು, ಚಿಂತಕರು, ಸೆಲೆಬ್ರೆಟಿಗಳು ದನಿ ಎತ್ತಬೇಕು ಎಂದು ಒತ್ತಾಯಿಸಿದರು.8ಕೆಆರ್ ಎಂಎನ್ 8.ಜೆಪಿಜಿ
ದಲಿತ ಸಂಘಟನೆಗಳ ಒಕ್ಕೂಟದ ಪದಾಧಿಕಾರಿಗಳು ಜಿಲ್ಲಾಧಿಕಾರಿಗಳು ಮನವಿ ಸಲ್ಲಿಸಿದರು.