ರಟ್ಟಿಹಳ್ಳಿ: ಸ್ವಾತಿ ಬ್ಯಾಡಗಿ ಎಂಬ ಯುವತಿಯ ಹತ್ಯೆ ಖಂಡಿಸಿ ವಿಶ್ವ ಹಿಂದೂ ಪರಿಷತ್ ಹಾಗೂ ಬಜರಂಗದಳ ಸಂಘಟನೆಯವರು ಸೋಮವಾರ ತಾಲೂಕಿನ ಮಾಸೂರು ಗ್ರಾಮವನ್ನು ಬಂದ್ ಮಾಡಿ ಆಕ್ರೋಶ ವ್ಯಕ್ತಪಡಿಸಿದರು.
ಬಂದ್ ಕರೆ ಹಿನ್ನೆಲೆ ಸೋಮವಾರ ಬೆಳಗ್ಗೆಯಿಂದ ಗ್ರಾಮದ ಎಲ್ಲ ಅಂಗಡಿ- ಮುಂಗಟ್ಟುಗಳು ಬಾಗಿಲು ಹಾಕಿದ್ದವು. ರಸ್ತೆಗಳು ವಾಹನ ಸಂಚಾರ ಇಲ್ಲದೇ ಬಿಕೋ ಎನ್ನುತ್ತಿದ್ದವು. ಮಧ್ಯಾಹ್ನ 2 ಗಂಟೆಯವರೆಗೆ ಸಾರಿಗೆ ವ್ಯವಸ್ಥೆ ಸಂಪೂರ್ಣ ಸ್ತಬ್ಧವಾಗಿತ್ತು. ಆದರೆ ದ್ವಿತೀಯ ಪಿಯುಸಿ ಪರೀಕ್ಷೆಗಳು ಎಂದಿನಂತೆ ನಡೆದವು.ವಿಶ್ವ ಹಿಂದೂ ಪರಿಷತ್, ಬಜರಂಗ ದಳದ ಪದಾಧಿಕಾರಿಗಳು ಗ್ರಾಮದ ಪ್ರಮುಖ ಬೀದಿಗಳಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿ ಆಕ್ರೋಶ ಹೊರಹಾಕಿದರು. ಪ್ರತಿಭಟನೆಯ ನೇತೃತ್ವ ವಹಿಸಿದ್ದ ವಿಶ್ವ ಹಿಂದು ಪರಿಷತ್‌ನ ಜಿಲ್ಲಾ ಕಾರ್ಯದರ್ಶಿ ಅನಿಲ ಹಲವಾಗಲ್ ಮಾತನಾಡಿ, ಸ್ವಾತಿ ಬ್ಯಾಡಗಿ ಹತ್ಯೆ ಅತ್ಯಂತ ಅಮಾನವೀಯ ಘಟನೆಯಾಗಿದೆ. ರಾಜ್ಯ ಸರ್ಕಾರ ತಕ್ಷಣ ಮೃತರ ಕುಟುಂಬಕ್ಕೆ ₹50 ಲಕ್ಷ ಪರಿಹಾರ ನೀಡಬೇಕು ಹಾಗೂ ತನಿಖೆಯನ್ನು ಎನ್‌ಐಎಗೆ ವಹಿಸಬೇಕು ಎಂದು ಆಗ್ರಹಿಸಿದರು.
ರಾಜ್ಯದಲ್ಲಿ ಹಿಂದು ಹೆಣ್ಣುಮಕ್ಕಳನ್ನು ಲವ್ ಜಿಹಾದ್ ಹೆಸರಿನಲ್ಲಿ ಪ್ರೀತಿ, ಪ್ರೇಮದ ಬಲೆಗೆ ಬೀಳಿಸಿ ಹತ್ಯೆ ಮಾಡುತ್ತಿರುವುದು ಹಿಂದುಗಳ ಸಹನೆಯನ್ನು ಕೆಣಕುತ್ತಿದೆ. ಸ್ವಾತಿ ಬ್ಯಾಡಗಿ ಹತ್ಯೆಯಲ್ಲಿ ಭಾಗಿಯಾದ ಮೂವರನ್ನು ತಕ್ಷಣ ಗಲ್ಲಿಗೇರಿಸಬೇಕು ಎಂದು ಒತ್ತಾಯಿಸಿದರು.ಬಿಜೆಪಿ ಮುಖಂಡ ಪಾಲಾಕ್ಷಗೌಡ ಪಾಟೀಲ್ ಮಾತನಾಡಿ, ಸ್ವಾತಿ ಬ್ಯಾಡಗಿ ಹತ್ಯೆಯಲ್ಲಿ ಭಾಗಿಯಾದ ಮೂವರಿಗೆ ಕಠಿಣ ಶಿಕ್ಷೆ ವಿಧಿಸಬೇಕು. ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಸಿಎಂ ಸಿದ್ದರಾಮಯ್ಯ ಅವರ ನೇತೃತ್ವದ ಸರ್ಕಾರವು ಒಂದು ಸಮಾಜದ ಓಲೈಕೆಗಾಗಿ ಹಿಂದುಗಳನ್ನು ಕಡೆಗಣಿಸುತ್ತಿದೆ ಎಂದು ಆರೋಪಿಸಿದರು.
ಸೂಕ್ತ ಬಂದೋಬಸ್ತ್: ಬಂದ್ ಹಿನ್ನೆಲೆ ಗ್ರಾಮದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಂಶುಕುಮಾರ ನೇತೃತ್ವದಲ್ಲಿ ಪೊಲೀಸ್ ಇಲಾಖೆ ವತಿಯಿಂದ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿತ್ತು. ವಿಎಚ್‌ಪಿ ಜಿಲ್ಲಾ ಉಪಾಧ್ಯಕ್ಷ ನಾಗರಾಜ ನರಸಾಪುರ, ಜಿಲ್ಲಾ ಸಂಯೋಜಕ ಕಿಟ್ಟಿ ಪಾಟೀಲ್, ಜಿಲ್ಲಾ ಪ್ರಮುಖ ವಿನಾಯಕ ಕರ್ನೂಲ್, ಮುತ್ತು ಬೆಣ್ಣಿ, ತಾಲೂಕು ಸಂಯೋಜಕ ನವೀನ ಮಾದರ, ಪ್ರಶಾಂತ, ಶಂಭುಗೌಡ, ಸಂದೀಪ ಕಲಾಲ, ಸಂತೋಷ ಬೆಳಗುತ್ತಿ, ಆಕಾಶ ಪಾಟೀಲ್, ರಮೇಶ, ಮಣಿ, ವಿನಯಗೌಡ, ಬಸವರಾಜ ಓಲೇಕಾರ, ಕಾವ್ಯ ಪಾಟೀಲ್ ಹಾಗೂ ಜಿಲ್ಲೆಯ ವಿವಿಧ ಹಿಂದು ಕಾರ್ಯಕರ್ತರು ಇದ್ದರು.ಸ್ವಾತಿ ನಾನು ಬಾಲ್ಯದಿಂದ ಸ್ನೇಹಿತೆಯಾಗಿದ್ದು, ಅವಳು ಹಿಂದು ಸಂಘಟನೆಯಲ್ಲಿ ಸಕ್ರಿಯವಾಗಿ ತೊಡಗಿದ್ದಳು. ಅವಳು ಬಹಳ ಧೈರ್ಯವಂತೆಯಾಗಿದ್ದಳು. ಆದರೂ ಯಾವುದೋ ಷಡ್ಯಂತ್ರಕ್ಕೆ ಬಲಿಯಾಗಿದ್ದು ಅತ್ಯಂತ ನೋವಿನ ಸಂಗತಿ ಎಂದು ಹತ್ಯೆಯಾದ ಸ್ವಾತಿ ಸ್ನೇಹಿತೆ ಅನು ಉಣಕಿ ತಿಳಿಸಿದರು.