- ಮಲೇಬೆನ್ನೂರು ರೈತರಲ್ಲಿ ಆತಂಕ । ದಿಗ್ಗೇನಹಳ್ಳಿ ಸಮೀಪದಲ್ಲಿ ಒಡೆದಿರುವ ನಾಲೆ ತೊಟ್ಟಿಲು
- 25 ಸಾವಿರ ಎಕರೆ ಬೆಳೆ ರಕ್ಷಣೆಗೆ ಶೀಘ್ರ ಕ್ರಮ ಕೈಗೊಳ್ಳಿ: ಭಾರತೀಯ ರೈತ ಒಕ್ಕೂಟ ಒತ್ತಾಯ- - - ಕನ್ನಡಪ್ರಭ ವಾರ್ತೆದಾವಣಗೆರೆ
ಭದ್ರಾ ಡ್ಯಾಂನ ಆನವೇರಿ ವಿಭಾಗದ ನಾಲಾ ತೊಟ್ಟಿಲು ದಿಗ್ಗೇನಹಳ್ಳಿ ಬಳಿ ಮೊನ್ನೆ ರಾತ್ರಿ ಒಡೆದಿದ್ದರಿಂದ ಅಪಾರ ಪ್ರಮಾಣದ ನೀರು ವ್ಯರ್ಥವಾಗುತ್ತಿದೆ. ಇದರಿಂದ ಹರಿಹರ ತಾಲೂಕು ಮಲೇಬೆನ್ನೂರು ಭಾಗದ 25 ಸಾವಿರ ಎಕರೆ ಅಚ್ಚುಕಟ್ಟು ಪ್ರದೇಶಕ್ಕೆ ನೀರಿಲ್ಲದಂತಾಗಿದೆ.13ನೇ ಕಿಮೀ ಬಳಿ ದಿಗ್ಗೇನಹಳ್ಳಿ ಸಮೀಪ ನಾಲೆ ತೊಟ್ಟಿಲು ಒಡೆದು, 300 ಕ್ಯುಸೆಕ್ ನೀರು ವ್ಯರ್ಥವಾಗಿ ಹರಿಯುತ್ತಿದೆ. ಮಲೇಬೆನ್ನೂರು ಭಾಗದ ಸುಮಾರು 25 ಸಾವಿರ ಎಕರೆಗೂ ಅಧಿಕ ಅಚ್ಚುಕಟ್ಟು ಪ್ರದೇಶ ಈಗ ಬೆಳೆ ಕಳೆದುಕೊಳ್ಳುವ ಭೀತಿಗೆ ಸಿಲುಕಿದೆ.
ಭಾರತೀಯ ರೈತ ಒಕ್ಕೂಟದ ಭದ್ರಾ ಶಾಖೆ ಅಧ್ಯಕ್ಷ ಶಾಬನೂರು ಎಚ್.ಆರ್. ಲಿಂಗರಾಜ ಈ ಬಗ್ಗೆ ಆತಂಕ ವ್ಯಕ್ತಪಡಿಸಿದ್ದು, ಕಾಲುವೆಯ ತೊಟ್ಟಿಲು ಒಡೆದ ಪರಿಣಾಮ ನೀರು ವ್ಯರ್ಥವಾಗಿ ಹರಿಯುತ್ತಿದೆ. ಈಗ ಅದನ್ನು ಸರಿಪಡಿಸುವುದು ಅಸಾಧ್ಯ. ಹಾಗಾಗಿ, 300 ಕ್ಯುಸೆಕ್ ಪೈಪ್‌ಲೈನ್ ಇನ್ನೊಂದು ವಾರದಲ್ಲಿ ಅಳವಡಿಸಿದರೆ ಸಾಸ್ವೇಹಳ್ಳಿ ಡಿವಿಜನ್‌ನ ಮಲೇಬೆನ್ನೂರು ಭಾಗದ 25 ಸಾವಿರ ಎಕರೆಗೆ ನೀರೊದಗಿಸಲು ಸಾಧ್ಯವಾಗುತ್ತದೆ. ಹೊಸದಾಗಿ ತೊಟ್ಟಿಲು ಕಾಲುವೆ ಮಾಡಲು ಕನಿಷ್ಠ 45 ದಿನ ಬೇಕು. ಅಷ್ಟರಲ್ಲಿ ನೀರಿಲ್ಲದೇ ಬೆಳೆ ಹಾಳಾಗುವ ಅಪಾಯವಿದೆ. ಸದ್ಯಕ್ಕೆ ತುರ್ತಾಗಿ 300 ಕ್ಯುಸೆಕ್ ಪೈಪ್‌ಲೈನ್ ಅಳವಡಿಸಲು ನೀರಾವರಿ ಇಲಾಖೆ ಮುಂದಾಗಲಿ ಎಂದು ಹೇಳಿದ್ದಾರೆ.ಬತ್ತ, ಅಡಕೆ, ಕಬ್ಬು ಸೇರಿದಂತೆ ಸ್ಟ್ಯಾಂಡಿಂಗ್ ಕ್ರಾಪ್‌ಗಳನ್ನು ಬೆಳೆದ ರೈತರಿಗೆ ನೀರಿಲ್ಲದೇ ತೊಂದರೆಯಾಗುವ ಅಪಾಯವಿದೆ. ಈ ಹಿನ್ನೆಲೆ ಸರ್ಕಾರವು ತುರ್ತಾಗಿ ಹಗಲು-ರಾತ್ರಿ ಎನ್ನದೇ ನಾಲೆ ದುರಸ್ತಿ ಕಾರ್ಯ ಕೈಗೆತ್ತಿಕೊಳ್ಳಬೇಕು. ನಾಲೆಯಲ್ಲಿ 300 ಕ್ಯೂಸೆಕ್ ನೀರು ಹರಿಯುತ್ತಿದೆ. ಸರ್ಕಾರ ಮೀನ-ಮೇಷ ಎಣಿಸಿದರೆ, ಪ್ರತಿ ಎಕರೆಗೆ ಕನಿಷ್ಠ ₹40 ಸಾವಿರ ಖರ್ಚು ಮಾಡಿರುವ ರೈತರು ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕುವ ಅಪಾಯವಿದೆ. ಸಮಾರೋಪಾದಿಯಲ್ಲಿ ಸರ್ಕಾರ ತೊಟ್ಟಿಲು ನಾಲೆಯಲ್ಲಿ 300 ಕ್ಯುಸೆಕ್ ಪೈಪ್‌ಲೈನ್ ಅಳವಡಿಸಿ, ತಾತ್ಕಾಲಿಕವಾಗಿ ನೀರು ಹರಿಸಲು ಕ್ರಮ ಕೈಗೊಳ್ಳಲಿ ಎಂದು ಶಾಬನೂರು ಲಿಂಗರಾಜ ಆಗ್ರಹಿಸಿದ್ದಾರೆ.
ಭದ್ರಾ ಬಲ ನಾಲೆ 105 ಕಿಮೀ ವ್ಯಾಪಿಸಿದ್ದು, ಅದರ ಆಯಸ್ಸು ಮುಗಿದಿರುವುದು, ಸರಿಯಾಗಿ ನಿರ್ವಹಣೆ ಮಾಡದಿರುವುದು, ಗೇಟ್‌ಗಳು ಸರಿಯಾಗಿಲ್ಲದೇ ಇರುವುದರಿಂದ ನಾಲೆಯುದ್ದಕ್ಕೂ ಹುಳು ತುಂಬಿದೆ. ಹಳ್ಳಗಳು ಬರುವ ಸಮೀಪದ ನಾಲೆ ತೊಟ್ಟಿಲುಗಳು ದುರಸ್ತಿ ಇಲ್ಲದೇ ಹಾಳಾಗುತ್ತಿವೆ. ಎಲ್ಲ ನಾಲಾ ತೊಟ್ಟಿಲುಗಳನ್ನು ರಿಪೇರಿ ಮಾಡಲು ಸರ್ಕಾರ ಮೊದಲ ಆದ್ಯತೆ ನೀಡಬೇಕು. ಮುಂದೆ ಇಂತಹ ಅನಾಹುತ, ಅಪಾಯಗಳು ಮರುಕಳಿಸದಂತೆ ಸರ್ಕಾರವು ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕು. ಈ ವಿಚಾರದಲ್ಲಿ ನೀರಾವರಿ ಅಧಿಕಾರಿಗಳು ಜವಾಬ್ದಾರಿ ಮೆರೆಯಬೇಕು ಎಂದಿದ್ದಾರೆ.ಅಲ್ಲದೇ, ಭದ್ರಾ ಅಣೆಕಟ್ಟೆ ನಿರ್ಮಿಸಿ 7 ದಶಕಗಳೇ ಕಳೆದಿವೆ. ಡ್ಯಾಂನ ಎಮರ್ಜೆನ್ಸಿ ಗೇಟ್, ಸರ್ವೀಸ್ ಗೇಟ್, ಕ್ರಸ್ಟ್ ಗೇಟ್ ಹಾಗೂ ಬಲನಾಲೆ, ಎಡನಾಲೆ ಗೇಟುಗಳು ಮೇಲೆ- ಕೆಳಗೆ ಹೋಗದೇ ತುಕ್ಕುಗಟ್ಟಿದಂತಾಗಿದೆ. ಇವುಗಳ ದುರಸ್ತಿಪಡಿಸಿ, ಗೇಟುಗಳನ್ನು ಮೇಲೆತ್ತುವ ರೂಫ್‌ಗಳನ್ನು ಬದಲಾಯಿಸಬೇಕು. ಭದ್ರಾ ಡ್ಯಾಂನಲ್ಲಿ ನೀರು ಸೋರಿಕೆ ಇರುವುದರಿಂದ ಅದನ್ನು ಸರಿಪಡಿಸಲಿ. ಸರ್ಕಾರ ಭದ್ರಾ ಡ್ಯಾಂ, ಭದ್ರಾ ನಾಲೆಗಳ ಭದ್ರತೆ, ದುರಸ್ತಿ, ಸುರಕ್ಷತೆ ದೃಷ್ಟಿಯಿಂದ ಎಲ್ಲ ಅಗತ್ಯ ಕ್ರಮ ಕೈಗೊಂಡು, ರೈತರ ಹಿತಕಾಯುವ ಕೆಲಸ ಮೊದಲು ಮಾಡಬೇಕು. ಭದ್ರಾ ಅಚ್ಚುಕಟ್ಟಿನ ಶಿವಮೊಗ್ಗ, ದಾವಣಗೆರೆ ಜಿಲ್ಲೆ, ವಿಜಯ ನಗರ ಜಿಲ್ಲೆ ಹರಪನಹಳ್ಳಿ ತಾಲೂಕಿನ ಶಾಸಕರು, ಜನಪ್ರತಿನಿಧಿಗಳು, ಆಡಳಿತ- ವಿಪಕ್ಷದವರು ಸರ್ಕಾರದ ಮೇಲೆ ಒತ್ತಡ ಹೇರುವ ಕೆಲಸ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.
- - - * ಭದ್ರಾದಲ್ಲೇ ನೀರಿಲ್ಲ, ತುಂಗಭದ್ರಾ ಡ್ಯಾಂಗೆ ಎಲ್ಲಿಂದ ಕೊಡ್ಬೇಕು?- ಸಿಂಧನೂರು ಶಾಸಕ, ಮುಖಂಡರ ಒತ್ತಾಯಕ್ಕೆ ಭಾರತೀಯ ರೈತ ಒಕ್ಕೂಟ ಆಕ್ಷೇಪ ಕನ್ನಡಪ್ರಭ ವಾರ್ತೆ ದಾವಣಗೆರೆ
ಭದ್ರಾ ಡ್ಯಾಂನಿಂದ ತುಂಗಭದ್ರಾ ಡ್ಯಾಂಗೆ 6 ಟಿಎಂಸಿ ನೀರು ಬಿಡುವಂತೆ ಸಿಂಧನೂರು ಶಾಸಕ ಹಂಪನಗೌಡ ಬಾದಲಿ ನೇತೃತ್ವದಲ್ಲಿ ರಾಯಚೂರು ಭಾಗದ ಮುಖಂಡರು ಸರ್ಕಾರದ ಮೇಲೆ ಒತ್ತಡ ಹೇರಿರುವುದಕ್ಕೆ ಭಾರತೀಯ ರೈತ ಒಕ್ಕೂಟದ ಭದ್ರಾ ಶಾಖೆ ತೀವ್ರ ಆಕ್ಷೇಪಿಸಿದೆ.ತುಂಗಭದ್ರಾ ಡ್ಯಾಂನಲ್ಲಿ 31 ಟಿಎಂಸಿ ಹೂಳು ತುಂಬಿದೆ, ತುಂಗಭದ್ರಾ ಅಚ್ಚುಕಟ್ಟು ವ್ಯಾಪ್ತಿ ರೈತರ ಬೆಳೆಗೆ 3 ಟಿಎಂಸಿ ನೀರಿನ ಕೊರತೆ ಇದೆ ಎಂದು ಅಲ್ಲಿನ ಶಾಸಕರು, ಮುಖಂಡರು ಸರ್ಕಾರಕ್ಕೆ ಭದ್ರಾ ಡ್ಯಾಂನಿಂದ 6 ಟಿಎಂಸಿ ನೀರು ಬಿಡುವಂತೆ ಒತ್ತಾಯಿಸಿದ್ದು ಸರಿಯಲ್ಲ ಎಂದಿದೆ.
ರೈತರ ಬಗ್ಗೆ ಕಾಳಜಿ ಇದ್ದರೆ ಸರ್ಕಾರದ ಮೇಲೆ ಒತ್ತಡ ಹೇರಿ, ತುಂಗಭದ್ರಾ ಡ್ಯಾಂ ಹೂಳೆತ್ತಿಸಲು ಒತ್ತಡ ಹೇರಲಿ. ಬೋಟ್‌ಗಳ ಮೂಲಕ ಹೂಳು, ಮರಳನ್ನು ಎತ್ತಿದರೆ ಆ ಭಾಗದ ಅಭಿವೃದ್ಧಿಗೂ ಅದೇ ಮರಳನ್ನು ಬಳಸಬಹುದು. ಅಲ್ಲಿನ ಜನಪ್ರತಿನಿಧಿಗಳು ಸರ್ಕಾರಕ್ಕೆ ಒತ್ತಾಯಿಸಿ, ಕೆಲಸ ಮಾಡಲಿ ಎಂದು ತಿಳಿಸಲಾಗಿದೆ.ತುಂಗಭದ್ರಾ ಅಚ್ಚುಕಟ್ಟು ಭಾಗಕ್ಕೆ ನೀರುಬೇಕೆಂದು ಕೇಳುತ್ತೀರಿ. ನಮ್ಮ ಭದ್ರಾ ಅಚ್ಚುಕಟ್ಟು ರೈತರಿಗೆ ನೀರು ಇಲ್ಲವೆಂದರೆ ನಾವು ಯಾರಿಗೆ ಕೇಳಬೇಕು, ಎಲ್ಲಿಂದ ನೀರು ಬಿಡಿಸಿಕೊಳ್ಳಬೇಕು? ಬೇಸಿಗೆ ಹಂಗಾಮಿಗೆ ಇನ್ನೂ 53 ದಿನ ಸತತ ನೀರು ಬಿಡಬೇಕು. ಕುಡಿಯುವ ನೀರು, ಕಾರ್ಖಾನೆಗಳಿಗೆ ನೀರು ಕೊಟ್ಟು, ಮಳೆಗಾಲದ ತೋಟ, ಕಬ್ಬು, ನರ್ಸರಿ ಮಾಡಲಿಕ್ಕೆ ಮಾತ್ರ 10 ಟಿಎಂಸಿ ಮಾತ್ರ ಉಳಿಯುತ್ತದೆ. ಇದರಲ್ಲೂ 6 ಟಿಎಂಸಿ ತುಂಗಭದ್ರಾಗೆ ಕೊಟ್ಟರೆ, ನಮ್ಮ ಗತಿ ಏನೆಂಬ ಕನಿಷ್ಠ ಆಲೋಚನೆ, ಪ್ರಶ್ನೆಯೂ ನಿಮ್ಮಲ್ಲಿ ಮೂಡಲಿಲ್ಲವೇ ಎಂದು ಒಕ್ಕೂಟ ಪ್ರಶ್ನಿಸಿದೆ.
ಭದ್ರಾ ಅಚ್ಚುಕಟ್ಟು ಭಾಗದ ಜನಪ್ರತಿನಿಧಿಗಳಾದ ಶಿವಮೊಗ್ಗ, ದಾವಣಗೆರೆ, ಹರಪನಹಳ್ಳಿ ಭಾಗದ ಸಂಸದರು, ಶಾಸಕರು, ಸಚಿವರು, ವಿಪ ಸದಸ್ಯರು ಪಕ್ಷಾತೀತವಾಗಿ ಸಿಂಧನೂರು ಶಾಸಕ, ಮುಖಂಡರ ಬೇಡಿಕೆ ವಿರುದ್ಧ ಧ್ವನಿ ಎತ್ತಬೇಕು. ಶಿವಮೊಗ್ಗ, ದಾವಣಗೆರೆ, ಹರಪನಹಳ್ಳಿ ಭಾಗದ ಅಚ್ಚುಕಟ್ಟು ರೈತರ ಹಿತಕಾಯಬೇಕು ಎಂದು ಒಕ್ಕೂಟದ ಅಧ್ಯಕ್ಷ ಶಾಬನೂರು ಎಚ್.ಆರ್.ಲಿಂಗರಾಜ, ಉಪಾಧ್ಯಕ್ಷ ಕೊಂಡಜ್ಜಿ ನಾಗರಾಜ ರಾವ್, ಪ್ರಧಾನ ಕಾರ್ಯದರ್ಶಿ ಎಂ.ಎಂ. ಮಂಜುನಾಥ, ಹನುಮಂತಪ್ಪ ಕುಂದುವಾಡ, ಮಹೇಶ ಕುಂದುವಾಡ ಇತರರು ಮನವಿ ಮಾಡಿದ್ದಾರೆ.- - - -17ಕೆಡಿವಿಜಿ1, 2, 3: ಭದ್ರಾ ಅಣೆಕಟ್ಟೆಯ ಆನವೇರಿ ವಿಭಾಗದ ಭದ್ರಾ ನಾಲೆಯು ದಿಗ್ಗೇನಹಳ್ಳಿ ಬಳಿ ತೊಟ್ಟಿಲು ಸೇವೆ ಒಡೆದು ಅಪಾರ ಪ್ರಮಾಣದ ನೀರು ಪೋಲಾಗುತ್ತಿರುವುದು.
-17ಕೆಡಿವಿಜಿ4: ಶಾಬನೂರು ಎಚ್.ಆರ್.ಲಿಂಗರಾಜ