ನಗರದಲ್ಲಿ ರೇಬಿಸ್‌ ನಿರ್ಮೂಲನೆಗೆ ಸಾಮೂಹಿಕ ಜಾಗೃತಿ : ಸುರಳ್ಕರ್‌

KannadaprabhaNewsNetwork |  
Published : Jul 08, 2025, 01:48 AM ISTUpdated : Jul 08, 2025, 11:19 AM IST
BBMP 3 | Kannada Prabha

ಸಾರಾಂಶ

ಬಿಬಿಎಂಪಿ ವ್ಯಾಪ್ತಿಯಲ್ಲಿ ರೇಬಿಸ್‌ ನಿರ್ಮೂಲನೆಗಾಗಿ ನಗರಾದ್ಯಂತ ಮೀಸಲು ವಾಹನಗಳ ಮೂಲಕ ಸಾಮೂಹಿಕ ರೇಬಿಸ್‌ ಜಾಗೃತಿ ಮೂಡಿಸಲಾಗುವುದು ಎಂದು ಬಿಬಿಎಂಪಿ ಆರೋಗ್ಯ ವಿಭಾಗದ ವಿಶೇಷ ಆಯುಕ್ತ ವಿಕಾಸ್‌ ಕಿಶೋರ್‌ ಸುರಳ್ಕರ್‌ ತಿಳಿಸಿದರು.

 ಬೆಂಗಳೂರು :  ಬಿಬಿಎಂಪಿ ವ್ಯಾಪ್ತಿಯಲ್ಲಿ ರೇಬಿಸ್‌ ನಿರ್ಮೂಲನೆಗಾಗಿ ನಗರಾದ್ಯಂತ ಮೀಸಲು ವಾಹನಗಳ ಮೂಲಕ ಸಾಮೂಹಿಕ ರೇಬಿಸ್‌ ಜಾಗೃತಿ ಮೂಡಿಸಲಾಗುವುದು ಎಂದು ಬಿಬಿಎಂಪಿ ಆರೋಗ್ಯ ವಿಭಾಗದ ವಿಶೇಷ ಆಯುಕ್ತ ವಿಕಾಸ್‌ ಕಿಶೋರ್‌ ಸುರಳ್ಕರ್‌ ತಿಳಿಸಿದರು.

ವಿಶ್ವ ಝೋನೋಸಿಸ್‌ ದಿನದ ಅಂಗವಾಗಿ ಬಿಬಿಎಂಪಿ ಕೇಂದ್ರ ಕಚೇರಿ ಆವರಣದಲ್ಲಿ ಸೋಮವಾರ ರೇಬಿಸ್‌ ರೋಗ ಹರಡದಂತೆ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳುವ ಸಂಬಂಧ ಜಾಗೃತಿ ವಾಹನಗಳಿಗೆ ಚಾಲನೆ ನೀಡಿ ಮಾತನಾಡಿದರು.

ಮನುಷ್ಯರು ನಾಯಿಗಳ ಜತೆಗೆ ಹೆಚ್ಚಿನ ಸಂಪರ್ಕದಲ್ಲಿರುತ್ತಾರೆ. ಆದರೆ, ನಾಯಿಗಳು ಕಚ್ಚಿದಾಗ ಹೆಚ್ಚು ಸಮಸ್ಯೆಗಳುಂಟಾಗುತ್ತವೆ. ಆ ಕಾರಣದಿಂದಾಗಿ ಪ್ರಾಣಿಗಳಿಗೆ ನಿರಂತರವಾಗಿ ರೇಬಿಸ್‌ ಲಸಿಕೆ ಹಾಕಿಸಬೇಕು. ಅದರೊಂದಿಗೆ ನಾಯಿ ಕಚ್ಚಿದಾಗ ಯಾವ ರೀತಿಯ ಕ್ರಮಗಳನ್ನು ಕೈಗೊಳ್ಳಬೇಕು ಎಂಬ ಬಗ್ಗೆ ಜನರಲ್ಲಿ ಹೆಚ್ಚಿನ ಅರಿವು ಮೂಡಿಸುವ ಅಗತ್ಯವಿದೆ. ಅದಕ್ಕಾಗಿ ಜಾಗೃತಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗಿದೆ. ಅದರಂತೆ ಎಲ್ಲ ವಾರ್ಡ್‌ಗಳಲ್ಲೂ ಎಲ್‌ಇಡಿ ವಾಹನಗಳು ಜಾಗೃತಿ ಮೂಡಿಸುವ ಕೆಲಸ ಮಾಡಲಿವೆ ಎಂದರು.

ರೇಬಿಸ್‌ ರೋಗವು ಒಂದು ವೈರಾಣುವಿನಿಂದ ಹರಡುವ ರೋಗವಾಗಿದ್ದು, ಲಸಿಕೆ ಹಾಕುವುದರಿಂದ ಸಂಪೂರ್ಣವಾಗಿ ನಿಯಂತ್ರಿಸಬಹುದು. ಪ್ರಾಣಿಗಳ ಜೊಲ್ಲು, ಕಚ್ಚುವುದು, ನೆಕ್ಕುವುದರಿಂದಲೂ ರೇಬಿಸ್‌ ರೋಗ ಹರಡುತ್ತದೆ. ಈ ರೋಗದಿಂದ ಪ್ರಪಂಚದಾದ್ಯಂತ ವಾರ್ಷಿಕ ಅಂದಾಜು 59 ಸಾವಿರಕ್ಕೂ ಹೆಚ್ಚಿನ ಜನರು ಸಾವಿಗೀಡಾಗುತ್ತಿದ್ದಾರೆ. ಅದರಲ್ಲಿ ಶೇ.97ಕ್ಕೂ ಹೆಚ್ಚು ಪ್ರಕರಣಗಳಲ್ಲಿ ನಾಯಿಗಳು ಕಾರಣವಾಗಿವೆ ಎಂದು ವಿವರಿಸಿದರು.

ಬಿಬಿಎಂಪಿ ಪಶುಪಾಲನಾ ವಿಭಾಗದ ಜಂಟಿ ನಿರ್ದೇಶಕ ಡಾ. ಚಂದ್ರಯ್ಯ, ಮುಖ್ಯ ಆರೋಗ್ಯಾಧಿಕಾರಿ ಡಾ. ಎಸ್‌.ಎಸ್‌. ಮದನಿ, ಚಾರ್ಲೀಸ್‌ ರೆಸ್ಕ್ಯೂ ಸಂಸ್ಥೆಯ ಸ್ಥಾಪಕ ಟ್ರಸ್ಟಿ ಸುಧಾ, ಮಿಷನ್‌ ರೇಬಿಸ್‌ ಸಂಸ್ಥೆಯ ನಿರ್ದೇಶಕ ಡಾ. ಬಾಲಚಂದ್ರಶೇಖರ್‌ ಇತರರಿದ್ದರು.ಬಿಬಿಎಂಪಿ ವ್ಯಾಪ್ತಿಯಲ್ಲಿ ಪ್ರಾಣಿಜನ್ಯ ರೋಗಗಳ ನಿಯಂತ್ರಣ ಕಾರ್ಯಕ್ರಮಗಳು

* ಐಐಎಸ್ಸಿ ಜತೆಗೂಡಿ ಬೆಂಗಳೂರು ಸೈನ್ಸ್‌ ಆ್ಯಂಡ್‌ ಟೆಕ್ನಾಲಜಿ ಕ್ಲಸ್ಟರ್‌ ಸ್ಥಾಪನೆ

* ಐ ಆ್ಯಮ್‌ ಒನ್ ಹೆಲ್ತ್‌ ಕಾರ್ಯಕ್ರಮದ ಅಡಿ ವಿಶ್ವೇಶ್ವರಯ್ಯ ತಾಂತ್ರಿಮ ಮ್ಯೂಸಿಯಂನಲ್ಲಿ ಡೆಂಘೆ, ರೇಬಿಸ್‌ ಸೇರಿದಂತೆ ಇನ್ನಿತರ ರೋಗಗಳ ಬಗ್ಗೆ ಅರಿವು ಮೂಡಿಸಲಾಗುತ್ತಿದೆ

* ನಾಯಿಗಳ ಸಾಮೂಹಿಕ ಸಂತಾನ ಶಕ್ತಿ ಹರಣ, ಲಸಿಕಾಕರಣ

* ನಾಯಿಗಳಲ್ಲಿ ಸಾಂಕ್ರಾಮಿಕ ರೋಗ ಹರಡುವುದನ್ನು ತಪ್ಪಿಸಲು 5 ಇನ್‌ 1 ಲಸಿಕೆ

* ನಾಯಿಗಳಿಗೆ ಓರಲ್‌ ರೇಬಿಸ್ ನಿರೋಧಕ ಲಸಿಕೆ ಹಾಕುವುದು

PREV
Read more Articles on