ಸಾಮೂಹಿಕ ಆಚರಣೆಗಳು ಸಾಮರಸ್ಯದ ಜೀವನಕ್ಕೆ ವೇದಿಕೆ

KannadaprabhaNewsNetwork | Published : May 16, 2025 2:04 AM
Follow Us

ಸಾರಾಂಶ

ಗುಂಡನಬೆಳ್ಳೂರು ಗ್ರಾಮದಲ್ಲಿ ಪುನರುಜ್ಜೀವನಗೊಂಡ ಶ್ರೀ ಮಲ್ಲೇಶ್ವರಸ್ವಾಮಿ ದೇವಾಲಯ ಜೀರ್ಣೋದ್ಧಾರ ಮತ್ತು ಜಂಪೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ, ಆಶೀರ್ವಚನ ನೀಡುತ್ತಾ, ಮನುಷ್ಯ ತಮ್ಮಲ್ಲಿರುವ ದ್ವೇಷ, ಅಸೂಯೆಗಳನ್ನು ಬದಿಗೊತ್ತಿ ನಾವೆಲ್ಲರೂ ಒಂದೇ ಎಂಬ ಭಾವನೆಯನ್ನು ಮೂಡಿಸಿಕೊಳ್ಳಬೇಕು. ಧರ್ಮ ಮಾರ್ಗದಲ್ಲಿ ಸಾಗಿದರೆ ಮನುಷ್ಯನಿಗೆ ಸಹಜವಾಗಿಯೇ ಶಾಂತಿ, ನೆಮ್ಮದಿ ದೊರಕುತ್ತದೆ. ಗ್ರಾಮಗಳಲ್ಲಿರುವ ದೇವಸ್ಥಾನಗಳು ಮನುಷ್ಯರಿಗೆ ಶಾಂತಿ- ನೆಮ್ಮದಿ ನೀಡುವ ಧಾರ್ಮಿಕ ಕೇಂದ್ರಗಳಾಗಿವೆ ಎಂದರು.

ಕನ್ನಡಪ್ರಭ ವಾರ್ತೆ ಆಲೂರು

ಸಾಮೂಹಿಕ ಆಚರಣೆಗಳಿಂದ ಸಮಾಜದಲ್ಲಿ ಒಗ್ಗಟ್ಟು ಮೂಡುವುದರೊಂದಿಗೆ ಸಾಮರಸ್ಯದ ಜೀವನಕ್ಕೂ ವೇದಿಕೆಯಾಗಲಿದೆ ಎಂದು ಶ್ರೀಮದ್ ರಂಭಾಪುರಿ ವೀರಸಿಂಹಾಸನ ಶಾಖಾ ಶ್ರೀ ಸಂಸ್ಥಾನ ಹಿರೇಮಠ ಕಾರ್ಜುವಳ್ಳಿಯ ಪೀಠಾಧ್ಯಕ್ಷರಾದ ಶ್ರೀ ಸದಾಶಿವ ಶಿವಾಚಾರ್ಯ ಮಹಾಸ್ವಾಮೀಜಿ ತಿಳಿಸಿದರು.

ತಾಲೂಕಿನ ಪಾಳ್ಯ ಹೋಬಳಿ ಗುಂಡನಬೆಳ್ಳೂರು ಗ್ರಾಮದಲ್ಲಿ ಪುನರುಜ್ಜೀವನಗೊಂಡ ಶ್ರೀ ಮಲ್ಲೇಶ್ವರಸ್ವಾಮಿ ದೇವಾಲಯ ಜೀರ್ಣೋದ್ಧಾರ ಮತ್ತು ಜಂಪೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ, ಆಶೀರ್ವಚನ ನೀಡುತ್ತಾ, ಮನುಷ್ಯ ತಮ್ಮಲ್ಲಿರುವ ದ್ವೇಷ, ಅಸೂಯೆಗಳನ್ನು ಬದಿಗೊತ್ತಿ ನಾವೆಲ್ಲರೂ ಒಂದೇ ಎಂಬ ಭಾವನೆಯನ್ನು ಮೂಡಿಸಿಕೊಳ್ಳಬೇಕು. ಧರ್ಮ ಮಾರ್ಗದಲ್ಲಿ ಸಾಗಿದರೆ ಮನುಷ್ಯನಿಗೆ ಸಹಜವಾಗಿಯೇ ಶಾಂತಿ, ನೆಮ್ಮದಿ ದೊರಕುತ್ತದೆ. ಗ್ರಾಮಗಳಲ್ಲಿರುವ ದೇವಸ್ಥಾನಗಳು ಮನುಷ್ಯರಿಗೆ ಶಾಂತಿ- ನೆಮ್ಮದಿ ನೀಡುವ ಧಾರ್ಮಿಕ ಕೇಂದ್ರಗಳಾಗಿವೆ ಎಂದರು.

ಶಾಸಕ ಸಿಮೆಂಟ್ ಮಂಜು ಮಾತನಾಡಿ, ದೇವಾಲಯ ನಿರ್ಮಾಣ ಮಾಡುವುದು ಸುಲಭದ ಕಾರ್ಯವಲ್ಲ. ನೂತನ ದೇವಾಲಯ ನಿರ್ಮಾಣದಿಂದ ಧಾರ್ಮಿಕ ಶ್ರದ್ಧೆ, ಭಕ್ತಿ ಮತ್ತು ಸಂಸ್ಕೃತಿಗಳ ಪುನರುತ್ಥಾನವಾಗುತ್ತದೆ. ನಮ್ಮ ಪೂರ್ವಿಕರು ಆಚರಿಸಿ ಬೆಳೆಸಿಕೊಂಡು ಬಂದಿರುವ ಸಂಸ್ಕಾರಯುತ ಕಾರ್ಯಗಳನ್ನು ನಾವು ನಮ್ಮ ಮುಂದಿನ ಪೀಳಿಗೆಗೆ ಪರಿಚಯಿಸಬೇಕು. ಯಾವುದೆ ದೇವಾಲಯದ ನಿರ್ಮಾಣದ ನಂತರ ಪೂಜೆ- ಪುನಸ್ಕಾರಗಳೊಂದಿಗೆ ಅದರ ನಿರ್ವಹಣೆ ಕಾರ್ಯ ವ್ಯವಸ್ಥಿತವಾಗಿರಬೇಕು. ಪ್ರತಿಯೊಬ್ಬರೂ ದೇವರು, ಗುರು- ಹಿರಿಯರನ್ನು ಪೂಜಿಸಿ, ಗೌರವಿಸುವುದರೊಂದಿಗೆ ಉತ್ತಮ ಸಮಾಜ ನಿರ್ಮಾಣಕ್ಕೆ ಮುಂದಾಗಬೇಕು ಎಂದರು.

ತಣ್ಣೀರುಹಳ್ಳ ಮಠದ ಶ್ರೀಗಳಾದ ಶ್ರೀ ಮ.ನಿ.ಪ್ರ. ವಿಜಯಕುಮಾರ ಸ್ವಾಮೀಜಿ ಕಲಶಾರೋಹಣ ಕಾರ್ಯವನ್ನು ನೆರವೇರಿಸಿ ಮಾತನಾಡಿ, ಯಾವುದೇ ಗ್ರಾಮಕ್ಕೆ ಕಾಲಿಟ್ಟರೂ ಗ್ರಾಮಸ್ಥರ ಶಕ್ತಿಗನುಸಾರ ಒಂದು ದೇವಾಲಯದ ಜೀರ್ಣೋದ್ಧಾರ ಕಾಣಬಹುದು. ಇದು ಜನ ದೇವರ ಬಗ್ಗೆ ಇಟ್ಟಿರುವ ನಂಬಿಕೆ ಹಾಗೂ ಭಕ್ತಿ ತೋರಿಸುತ್ತದೆ ಎಂದರು.

ಬಿಜೆಪಿ ಜಿಲ್ಲಾಧ್ಯಕ್ಷ ಸಿದ್ದೇಶ್ ನಾಗೇಂದ್ರ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಸನಾತನ ಧರ್ಮ, ಸಂಸ್ಕೃತಿಯ ಪ್ರತೀಕವಾದ ಮಠಮಾನ್ಯಗಳು ಹಾಗೂ ಧಾರ್ಮಿಕ ಕೇಂದ್ರಗಳಾದ ದೇವಾಲಯಗಳು, ಮನುಷ್ಯನಿಗೆ ಸುಖ, ಶಾಂತಿ, ನೆಮ್ಮದಿ ಕರುಣಿಸುವ ಶ್ರದ್ಧಾ ಕೇಂದ್ರಗಳಾಗಿವೆ ಎಂದರು.

ಕಾರ್ಯಕ್ರಮದಲ್ಲಿ ಸಂಕ್ಲಾಪುರ ಮಠದ ಶ್ರೀ ಧರ್ಮರಾಜೇಂದ್ರ ಸ್ವಾಮೀಜಿ, ಹಾಸನ ಲೋಕಸಭಾ ಸದಸ್ಯ ಶ್ರೇಯಸ್ ಪಟೇಲ್, ಮಾಜಿ ಶಾಸಕ ಎಚ್.ಕೆ. ಕುಮಾರಸ್ವಾಮಿ, ಕೆ. ಎಸ್ ಮಂಜೇಗೌಡ, ಹೆಮ್ಮಿಗೆ ಮೋಹನ್, ಜಿಲ್ಲಾ ಸಹಕಾರ ಒಕ್ಕೂಟಗಳ ಅಧ್ಯಕ್ಷ ಎಸ್. ಎನ್ ಪ್ರಕಾಶ್, ಬಸವಣ್ಣ, ಬಿ. ರೇಣುಕಾ ಪ್ರಸಾದ್, ಡಾ. ಜಯರಾಜ್, ಅಜಿತ್ ಚಿಕ್ಕಕಣಗಾಲ್, ಬಿ.ಡಿ ಧರ್ಮಪ್ಪ, ಸಂದೀಪ, ಲಿಂಗರಾಜು, ಬಸವರಾಜು, ಬಿ.ಕೆ ಪ್ರಕಾಶ್ ಮತ್ತು ದೇವಾಲಯ ಜೀರ್ಣೋದ್ಧಾರ ಸಮಿತಿಯವರು, ಗುಂಡನಬೆಳ್ಳೂರು, ಬೂದನಹಳ್ಳಿ ಹಾಗೂ ಕೆಂಚನಹಳ್ಳಿಪುರ ಗ್ರಾಮಸ್ಥರು ಭಾಗವಹಿಸಿದ್ದರು.

------