ವಿವಾಹವು ಪವಿತ್ರ ಸಂಸ್ಕಾರವಾಗಿದ್ದು, ಸರಳ ವಿವಾಹಗಳ ಮೂಲಕ ಸಮಾಜದಲ್ಲಿ ಸಮಾನತೆ ಮತ್ತು ಸದ್ಭಾವನೆ ಬೆಳೆಯುತ್ತದೆ
ಕುಷ್ಟಗಿ: ವೈಯಕ್ತಿಕ ಕುಟುಂಬದ ಮದುವೆ ಸಂಭ್ರಮ ಸಮಾಜಮುಖಿ ಕಾರ್ಯವಾಗಿ ರೂಪಿಸಿದ ಅಪರೂಪದ ಘಟನೆ ಪಟ್ಟಣದ ಸಮಾಜ ಸೇವಕ ರವಿಕುಮಾರ ಸ್ವಾಮಿ ಹಿರೇಮಠ ಸಹೋದರನ ಪುತ್ರನ ವಿವಾಹದ ಜತೆಗೆ 51 ಜೋಡಿಗಳಿಗೆ ಉಚಿತ ಸಾಮೂಹಿಕ ವಿವಾಹ ನೆರವೇರಿಸಿ ಸಮಾಜದಲ್ಲಿ ಮೆಚ್ಚುಗೆಗೆ ಪಾತ್ರರಾದರು.
ರಂಭಾಪುರಿ ಪೀಠದ ಜಗದ್ಗುರು, ಶ್ರೀಶೈಲ ಪೀಠದ ಜಗದ್ಗುರು ಸಾನ್ನಿಧ್ಯದಲ್ಲಿ ಆರ್ಥಿಕ ಸಂಕಷ್ಟದಿಂದ ಪಾರು ಮಾಡಲು ಬಡ ಹಾಗೂ ಮಧ್ಯಮ ವರ್ಗದ ಕುಟುಂಬಗಳಿಗೆ ನೆರವಾಗುವ ಉದ್ದೇಶದಿಂದ ಈ ಸಾಮೂಹಿಕ ವಿವಾಹ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಪಟ್ಟಣ ಸೇರಿದಂತೆ ವಿವಿಧ ಗ್ರಾಮಗಳಿಂದ ಆಗಮಿಸಿದ ಸರ್ವಧರ್ಮದ ವಧು-ವರರ ವಿವಾಹವನ್ನು ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಸಾಂಪ್ರದಾಯಿಕವಾಗಿ ನೆರವೇರಿಸಲಾಯಿತು.ನೂತನ ದಂಪತಿಗಳಿಗೆ ಮಂಗಳಸೂತ್ರ, ಉಡುಪು, ಸೇರಿದಂತೆ ಅಗತ್ಯ ವಸ್ತು ವಿತರಿಸಲಾಯಿತು. ವಿವಾಹದ ಸಂಪೂರ್ಣ ವೆಚ್ಚ ಆಯೋಜಕರು ಹೊತ್ತು ಕೊಂಡಿದ್ದು ಹಲವು ಕುಟುಂಬಗಳಿಗೆ ಆರ್ಥಿಕ ಭಾರದಿಂದ ಮುಕ್ತಿ ದೊರಕಿತು.
ಶಾಸಕ ದೊಡ್ಡನಗೌಡ ಪಾಟೀಲ ಮಾತನಾಡಿ, ವಿವಾಹವು ಪವಿತ್ರ ಸಂಸ್ಕಾರವಾಗಿದ್ದು, ಸರಳ ವಿವಾಹಗಳ ಮೂಲಕ ಸಮಾಜದಲ್ಲಿ ಸಮಾನತೆ ಮತ್ತು ಸದ್ಭಾವನೆ ಬೆಳೆಯುತ್ತದೆ ಎಂದು ಹೇಳಿದರು.
ಅನವಶ್ಯಕ ಖರ್ಚು ತಪ್ಪಿಸಿ ಸಂಸ್ಕಾರಯುತ ಜೀವನ ನಡೆಸುವಂತೆ ನವದಂಪತಿಗಳಿಗೆ ಕರೆ ನೀಡಿದ ಅವರು, ಸಾಮೂಹಿಕ ವಿವಾಹ ಕೈಗೊಂಡ ರವಿಕುಮಾರಸ್ವಾಮಿ ಹಿರೇಮಠ ಕಾರ್ಯ ಮಾದರಿಯಾಗಿದೆ ಎಂದರು.
ಮಾಜಿ ಸಚಿವ ಅಮರೇಗೌಡ ಬಯ್ಯಾಪೂರ ಮಾತನಾಡಿ, ಕುಟುಂಬ ವ್ಯವಸ್ಥೆಯ ಮೌಲ್ಯ ಕಾಪಾಡಿಕೊಂಡು ಪರಸ್ಪರ ಗೌರವದಿಂದ ಜೀವನ ಸಾಗಿಸಬೇಕು ಎಂದ ಅವರು, ಸಮಾಜದಲ್ಲಿ ಅತಿರೇಕದ ವೆಚ್ಚದ ವಿವಾಹಗಳಿಗಿಂತ ಸಾಮೂಹಿಕ ವಿವಾಹಗಳು ಸಮಾನತೆ ಮಾನವೀಯ ಮೌಲ್ಯ ಬಲಪಡಿಸುತ್ತವೆ ಎಂದು ಹೇಳಿದರು.
ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಮಾತನಾಡಿ, ಸಾಮೂಹಿಕ ವಿವಾಹ ಬಡ, ಮಧ್ಯಮ ವರ್ಗದ ಕುಟುಂಬಗಳಿಗೆ ಸಹಾಯಕವಾಗುವ ಮಹತ್ವದ ಕಾರ್ಯಕ್ರಮಗಳಾಗಿದ್ದು ಇಂತಹ ಉತ್ತಮ ಮಾದರಿ ಕಾರ್ಯ ಮಾಡಿರುವ ರವಿಕುಮಾರ ಸ್ವಾಮಿ ಕಾರ್ಯ ಶ್ಲಾಘನೀಯ ಎಂದು ತಿಳಿಸಿದರು.
ರಂಭಾಪುರಿ ಪೀಠದ ಜಗದ್ಗುರು ಹಾಗೂ ಶ್ರೀಶೈಲ ಪೀಠದ ಜಗದ್ಗುರು ಭಾಗವಹಿಸಿ ಆಶೀರ್ವಚನ ನೀಡಿದರು. ಈ ಸಂದರ್ಭದಲ್ಲಿ ಚಳಗೇರಿ ವೀರಸಂಗಮೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು, ಕುಷ್ಟಗಿ ಮದ್ದಾನೇಶ್ವರ ಮಠದ ಕರಿಬಸವಶಿವಾಚಾರ್ಯರು, ನಿಡಶೇಸಿ ಚನ್ನಬಸವ ಶಿವಾಚಾರ್ಯ ಮಹಾಸ್ವಾಮಿಗಳು, ದೋಟಿಹಾಳದ ಚಂದ್ರಶೇಖರ ದೇವರು, ಬಿಜಕಲ್ ಶಿವಲಿಂಗ ಶಿವಾಚಾರ್ಯ ಮಹಾಸ್ವಾಮಿಗಳು, ರಾಜಕೀಯ ಗಣ್ಯರು, ಸಾರ್ವಜನಿಕರು ಇದ್ದರು. 51 ಜೋಡಿಗಳು ವೈವಾಹಿಕ ಜೀವನಕ್ಕೆ ಕಾಲಿಟ್ಟರು. ನವದಂಪತಿಗಳಿಗೆ ಜಗದ್ಗುರು, ರಾಜಕೀಯ ಗಣ್ಯರು ಅಕ್ಷತೆ ಹಾಕಿ ಶುಭಹಾರೈಸಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.