ಸಾಮರಸ್ಯ-ಸೌಹಾರ್ದತೆ ಹೆಚ್ಚಿಸುವ ಸಾಮೂಹಿಕ ವಿವಾಹ: ತಂಗಡಗಿ

KannadaprabhaNewsNetwork |  
Published : Apr 17, 2025, 12:03 AM IST
ಪೋಟೊ16ಕೆಎಸಟಿ2: ಕುಷ್ಟಗಿ ತಾಲೂಕಿನ ಕೊರಡಕೇರಾ ಗ್ರಾಮದಲ್ಲಿ ನಡೆದ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವ ಶಿವರಾಜ ತಂಗಡಗಿ ಮಾತನಾಡಿದರು.ಪೋಟೊ16ಕೆಎಸಟಿ2: ಕುಷ್ಟಗಿ ತಾಲೂಕಿನ ಕೊರಡಕೇರಾ ಗ್ರಾಮದಲ್ಲಿ ನಡೆದ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವ ಶಿವರಾಜ ತಂಗಡಗಿ ಹಾಗೂ ಶಾಸಕ ದೊಡ್ಡನಗೌಡ ಪಾಟೀಲ ಅವರು ನೂತನ ವಧುವರರಿಗೆ ಅಕ್ಷತೆಯನ್ನು ಹಾಕಿ ಶುಭ ಹಾರೈಸಿದರು. | Kannada Prabha

ಸಾರಾಂಶ

ಸಾಮೂಹಿಕ ವಿವಾಹ ಕಾರ್ಯಕ್ರಮಗಳಿಂದ ಆರ್ಥಿಕವಾಗಿ ಹಿಂದುಳಿದ ಕುಟುಂಬಗಳ ಆರ್ಥಿಕ ಹೊರೆ ತಪ್ಪಿಸಬಹುದಾಗಿದೆ. ಪ್ರಜ್ಞಾಪೂರ್ವಕವಾಗಿ ಸರಳತೆಗೆ ಸಾಮೂಹಿಕ ವಿವಾಹ ಮಾದರಿಯಾಗಿದೆ. ಸಮಾಜದಲ್ಲಿನ ಎಲ್ಲ ಸಮುದಾಯಗಳು ಒಗ್ಗೂಡಿ ನಡೆಸುವ ಇಂತಹ ಕಾರ್ಯಕ್ರಮಗಳಿಂದ ಸಮಾಜದಲ್ಲಿ ಸೌಹಾರ್ದತೆ, ಸಾಮರಸ್ಯದ ಬಾಂಧವ್ಯ ಬೆಳೆಯಲಿದೆ.

ಕುಷ್ಟಗಿ:

ಸಾಮೂಹಿಕ ವಿವಾಹಗಳಿಂದ ಸಾಮರಸ್ಯದ ಜತೆಗೆ ಸೌಹಾರ್ದತೆ ಬೆಳೆಯಲಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವ ಶಿವರಾಜ ತಂಗಡಗಿ ಹೇಳಿದರು.

ತಾಲೂಕಿನ ಕೊರಡಕೇರಾ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಿರುವ ಶ್ರೀಅಮೋಘ ಸಿದ್ದೇಶ್ವರ ನೂತನ ಗೋಪುರ, ದ್ವಾರಬಾಗಿಲು ಲೋಕಾರ್ಪಣೆ ಹಾಗೂ ಸರ್ವಧರ್ಮಗಳ ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಸಾಮೂಹಿಕ ವಿವಾಹ ಕಾರ್ಯಕ್ರಮಗಳಿಂದ ಆರ್ಥಿಕವಾಗಿ ಹಿಂದುಳಿದ ಕುಟುಂಬಗಳ ಆರ್ಥಿಕ ಹೊರೆ ತಪ್ಪಿಸಬಹುದಾಗಿದೆ. ಪ್ರಜ್ಞಾಪೂರ್ವಕವಾಗಿ ಸರಳತೆಗೆ ಸಾಮೂಹಿಕ ವಿವಾಹ ಮಾದರಿಯಾಗಿದೆ. ಸಮಾಜದಲ್ಲಿನ ಎಲ್ಲ ಸಮುದಾಯಗಳು ಒಗ್ಗೂಡಿ ನಡೆಸುವ ಇಂತಹ ಕಾರ್ಯಕ್ರಮಗಳಿಂದ ಸಮಾಜದಲ್ಲಿ ಸೌಹಾರ್ದತೆ, ಸಾಮರಸ್ಯದ ಬಾಂಧವ್ಯ ಬೆಳೆಯಲಿದೆ ಎಂದರು.

ಇಂದು ಆರ್ಥಿಕವಾಗಿ ಹಿಂದುಳಿದ ಕುಟುಂಬಗಳಿಗೆ ಮದುವೆ ಕಬ್ಬಿಣದ ಕಡಲೆ ಇದ್ದಂತೆ. ಉಳ್ಳವರು ಸಾಮೂಹಿಕ ವಿವಾಹದಂತಹ ಸತ್ಕಾರ್ಯಕ್ಕೆ ಮುಂದಾಗಿ ಬಡವ, ಶ್ರೀಮಂತ, ಮೇಲು, ಕೀಳೇನ್ನದೆ ಒಂದೇ ಎನ್ನುವ ಭಾವನೆಯೊಂದಿಗೆ ಸತ್ಕಾರ್ಯ ಮಾಡಬೇಕು ಎಂದು ಕರೆ ನೀಡಿದರು.

ಸಂಸದ ರಾಜಶೇಖರ ಹಿಟ್ನಾಳ ಮಾತನಾಡಿ, ಸಾಮೂಹಿಕ ವಿವಾಹಗಳಲ್ಲಿ ಮದುವೆಯಾಗುವರರು ಪುಣ್ಯವಂತರು. ಇಲ್ಲಿ ಅನೇಕ ಶ್ರೀಗಳ ಆಶೀರ್ವಾದವೂ ಸಿಗುತ್ತದೆ. ಇಂತಹ ಅವಕಾಶಗಳು ಇಲ್ಲಿ ಮಾತ್ರ ಸಿಗಲಿದ್ದು ಉತ್ತಮ ಜೀವನ ನಡೆಸುವಂತೆ ನೂತನ ವಧು-ವರರಿಗೆ ಹಾರೈಸಿದರು.

ಶಾಸಕ ದೊಡ್ಡನಗೌಡ ಪಾಟೀಲ ಮಾತನಾಡಿ, ಸಾಮೂಹಿಕ ವಿವಾಹಗಳು ದುಂದುವೆಚ್ಚಕ್ಕೆ ಕಡಿವಾಣ ಹಾಕುವುದಲ್ಲದೆ, ನೆಮ್ಮದಿ ಜೀವನಕ್ಕೆ ನಾಂದಿ ಹಾಡುತ್ತವೆ. ವಧು-ವರರು ದಾಂಪತ್ಯ ಜೀವನವನ್ನು ಮಾದರಿಯಾಗಿ ನಡೆಸುವ ಮೂಲಕ ಸಮಾಜಕ್ಕೆ ಮಾದರಿಯಾಗಬೇಕು ಎಂದರು.

ತಿಂಥಣಿಯ ಕನಕಗುರುಪೀಠದ ಸಿದ್ದರಾಮಾನಂದಪುರಿ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಈ ವೇಳೆ ಕರಿಬಸವಶಿವಾಚಾರ್ಯರು, ಚನ್ನಬಸವ ಶಿವಾಚಾರ್ಯರು, ಸಿದ್ದಯ್ಯಸ್ವಾಮಿ ಗುರುವಿನ್, ಸಿದ್ದರಾಮಯ್ಯ ತಾತ, ಸಿದ್ದಯ್ಯತಾತ ಗುರುವಿನ, ತೇಜಯ್ಯ ಗುರುವಿನ, ಸಿದ್ದಯ್ಯ ಗುರುವಿನ, ಕಳಕಯ್ಯ ಗುರುವಿನ, ಶಿವಾನಂದಯ್ಯ ಗುರುವಿನ ಸೇರಿದಂತೆ ಹಾಲುಮತ ಸಮಾಜದ ಗುರುಗಳು ಪಾಲ್ಗೊಂಡಿದ್ದರು.

ಮುಖಂಡರಾದ ವಿಜಯಕುಮಾರ ಹಿರೇಮಠ, ಮಲ್ಲಣ್ಣ ಪಲ್ಲೇದ, ಫಕೀರಪ್ಪ ಚಳಗೇರಿ, ಪರಸಪ್ಪ ಕತ್ತಿ, ಶೈಲಜಾ ಬಾಗಲಿ, ಮಹಾಂತೇಶ ಬಾದಾಮಿ, ಮಾನಪ್ಪ ತಳವಾರ, ಕಲ್ಲೇಶ ತಾಳದ ಸೇರಿದಂತೆ ಕೊರಡಕೇರಾ ಗ್ರಾಮ ಪಂಚಾಯಿತಿ ಸದಸ್ಯರು ಇದ್ದರು.

ಬೆಳಗ್ಗೆ ಶ್ರೀಅಮೋಘಸಿದ್ದೇಶ್ವರ ದೇವಸ್ಥಾನದಲ್ಲಿ ನೂತನವಾಗಿ ನಿರ್ಮಿಸಿದ ಗೋಪುರ ಹಾಗೂ ನೂತನ ದ್ವಾರ ಬಾಗಿಲು ಲೋಕಾರ್ಪಣೆಗೊಂಡಿತು. ಸಾಮೂಹಿಕ ವಿವಾಹಗಳಲ್ಲಿ ಒಟ್ಟು 11 ಜೋಡಿಗಳು ಹೊಸ ಜೀವನಕ್ಕೆ ಕಾಲಿಟ್ಟರು.

PREV

Recommended Stories

ಡೆಂಘೀ ವಿರುದ್ಧ ಹೋರಾಟಕ್ಕೆ ಯುರೋಪ್ - ಭಾರತ ವಿಜ್ಞಾನಿಗಳ ಮೈತ್ರಿ
2 ಕೋಟಿ ವಹಿವಾಟಿನ ಬೆಲ್ಲದ ಬ್ರ್ಯಾಂಡ್ ‘ಪಾವನಾ’ ಕಟ್ಟಿದ ಟೆಕಿ