ಜೆಎನ್ ಕೋಟೆಯಲ್ಲಿ ಕೋಳಿ ಫಾರಂ ಆರಂಭಕ್ಕೆ ವಿರೋಧ

KannadaprabhaNewsNetwork | Published : Apr 17, 2025 12:03 AM

ಸಾರಾಂಶ

ಜೆ.ಎನ್.ಕೋಟೆಯಲ್ಲಿ ಕೋಳಿ ಫಾರಂ ಆರಂಭಕ್ಕೆ ಅನುಮತಿ ನೀಡಬಾರದೆಂದು ಆಗ್ರಹಿಸಿ ರಾಜ್ಯ ರೈತ ಸಂಘದ ಕಾರ್ಯಕರ್ತರು ಬುಧವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ರೈತ ಸಂಘದಿಂದ ಜಿಲ್ಲಾಧಿಕಾರಿ ಕಚೇರಿ ಬಳಿ ಪ್ರತಿಭಟನೆ । ಮನವಿ ಸಲ್ಲಿಕೆಕನ್ನಡಪ್ರಭ ವಾರ್ತೆ ಚಿತ್ರದುರ್ಗ

ಚಿತ್ರದುರ್ಗ ತಾಲೂಕಿನ ಜೆ.ಎನ್.ಕೋಟೆ ಗ್ರಾಮದಲ್ಲಿ ಆಂದ್ರ ಪ್ರದೇಶದ ಉದ್ಯಮಿಯೋರ್ವರು ಕೋಳಿ ಫಾರಂ ಆರಂಭಿಸಲು ಮುಂದಾಗಿರುವುದಕ್ಕೆ ರೈತ ಸಂಘದ ಜಿಲ್ಲಾ ಘಟಕ ತೀವ್ರ ವಿರೋಧ ವ್ಯಕ್ತಪಡಿಸಿದ್ದು, ಈ ಸಂಬಂಧ ಬುಧವಾರ ಜಿಲ್ಲಾಧಿಕಾರಿ ಕಚೇರಿ ಬಳಿ ಪ್ರತಿ ಭಟನೆ ನಡೆಸಿ ಮನವಿ ಸಲ್ಲಿಸಲಾಯಿತು.

ಸುಮಾರು 40 ಎಕರೆ ವಿಸ್ತೀರ್ಣದಲ್ಲಿ ಕೋಳಿ ಫಾರಂ ಆರಂಭಿಸಲು ಉದ್ದೇಶಿಸಿದ್ದು, ಗ್ರಾಮ ಪಂಚಾಯಿತಿ ಅನುಮತಿ ಪಡೆಯದೇ ಕಾಮಗಾರಿ ಆರಂಭಿಸಿದ್ದಾರೆ. ನಾವ್ಯಾರೂ ಕೂಡ ಕೋಳಿ ಫಾರಂ ವಿರೋಧಿಯಲ್ಲ. ಕುಕ್ಕುಟೋದ್ಯಮ ಕೂಡಾ ರೈತರ ಅಭಿವೃದ್ಧಿ ಪೂರಕವಾಗಿದ್ದು ತಾಂತ್ರಿಕತೆ ಮೂಲಕ ಕೋಳಿ ಫಾರಂ ನಿರ್ವಹಣೆ ಮಾಡಬೇಕಿದೆ.

ಹಾಲಿ ಕೋಳಿ ಫಾರಂ ನಿರ್ಮಿಸಲು ಉದ್ದೇಶಿಸಿರುವ ಪ್ರದೇಶ ನಾಲ್ಕು ಹಳ್ಳಿಗಳು ಸೇರಿರುವ ವೃತ್ತವಾಗಿದ್ದು, ಬಸ್ ನಿಲ್ದಾಣವಾಗಿದೆ. ದಿನಂಪ್ರತಿ ಕಸವನಹಳ್ಳಿ ಹಾಗೂ ನೆರೇನಹಾಳು ಗ್ರಾಮದ ಶಾಲಾ ಕಾಲೇಜು ವಿದ್ಯಾರ್ಥಿಗಳು ಇಲ್ಲಿಯೇ ಬಸ್ ಹತ್ತಿಕೊಂಡು ವಿದ್ಯಾಭ್ಯಾಸಕ್ಕೆ ತೆರಳುತ್ತಿದ್ದಾರೆ. ಕೋಳಿ ಫಾರಂ ಆರಂಭಿಸಿದರೆ ಅದರಿಂದ ಹೊರ ಸೂಸುವ ಕೆಟ್ಟ ವಾಸನೆ ಗ್ರಾಮೀಣ ಜನರ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.

ಈಗಾಗಲೇ ಜೆ.ಎನ್.ಕೋಟೆ ಬಳಿ ಒಂದು ಕೋಳಿ ಫಾರಂ ಇದ್ದು ಅದನ್ನು ಆರಂಭಿಸುವ ಮುನ್ನ ರೈತರು ವಿರೋಧ ವ್ಯಕ್ತಪಡಿಸಿರಲಿಲ್ಲ. ನಂತರ ಈ ಫಾರಂನಿಂದ ಪರಿಸರ ಹಾನಿ ಹಾಗೂ ರೈತರ ಬದುಕಿನ ಮೇಲೆ ಬೀರಿದ ಗಂಭೀರ ಪರಿಣಾಮಗಳು ನಿತ್ಯವೂ ಇಮ್ಮಡಿಯಾಗುತ್ತಿವೆ. ಜೆ.ಎನ್.ಕೋಟೆಯಿಂದ 1 ಕಿ.ಮೀ ದೂರದಲ್ಲಿರುವ ಈ ಕೋಳಿ ಫಾರಂ ತ್ಯಾಜ್ಯ ಮಳೆ ಬಂದಾಗ ಒಂದೆಡೆ ಕೆರೆಗೆ ಹರಿದು ಬರುತ್ತಿದ್ದರೆ, ಮತ್ತೊಂದೆಡೆ ನೊಣಗಳ ಹಾವಳಿ ವಿಪರೀತವಾಗಿದೆ. ಗ್ರಾಮದಲ್ಲಿ ನೆಮ್ಮದಿಯಿಂದ ಊಟ ಮಾಡಲು ಸಾಧ್ಯವಾಗದಂತಹ ವಾತಾವರಣ ಸೃಷ್ಟಿಯಾಗಿದೆ. ಅಸಹನೀಯ ಪರಿಸ್ತಿತಿಯಲ್ಲಿ ಜನತೆ ಬದುಕುತ್ತಿದ್ದಾರೆ ಆತಂಕ ವ್ಯಕ್ತಪಡಿಸಿದರು.

ಚಿತ್ರದುರ್ಗ ಸಮೀಪದ ಹಂಪಯ್ಯನ ಮಾಳಿಗೆ ಬಳಿ ಚಿತ್ರದುರ್ಗ ನಗರಸಭೆ ಘನತ್ಯಾಜ್ಯ ವಿಲೇವಾರಿ ಘಟಕವಿದ್ದು ಇಲ್ಲಿಂದ ಹೊರ ಸೂಸುವ ಕೆಟ್ಟ ವಾಸನೆ ಹಾಗೂ ನೊಣಗಳ ಹಾವಳಿಯಿಂದ ಅಲ್ಲಿನ ಜನತೆ ಬೇಸತ್ತಿದ್ದಾರೆ. ಇದೇ ಪರಿಸ್ಥಿತಿ ಜೆ.ಎನ್.ಕೋಟೆ ಆಸುಪಾಸಿನ ಗ್ರಾಮಸ್ಥರದ್ದಾಗುತ್ತದೆ. ಆಂಧ್ರ ಮೂಲದ ಉದ್ಯಮಿ ಗ್ರಾಮ ಪಂಚಾಯಿತಿಯಿಂದ ಅನುಮತಿ ಪಡೆಯದೇ ಕಾಮಗಾರಿ ಆರಂಭಿಸಿರುವುದು ಭವಿಷ್ಯದಲ್ಲಿ ಆತ ನಿಯಮಾವಳಿ ಮೀರಿ ವರ್ತಿಸುವ ಸಾಧ್ಯತೆಗಳ ಮೊದಲೇ ಗೋಚರಿಸಿದಂತಾಗಿದೆ. ಕೋಳಿ ಫಾರಂಗೆ ಅನುಮತಿ ನೀಡುವ ಮುನ್ನ ಗ್ರಾಮಸ್ಥರ ಸಭೆ ಕರೆದು ಅವರ ಅಭಿಪ್ರಾಯ ಕೇಳಬೇಕು. ಇದರಿಂದ ಪರಿಸರದ ಮೇಲೆ ಆಗುವ ಅನಾಹುತಗಳ ಪರಿಗಣಿಸಬೇಕು. ಈ ತರಹದ ಯಾವುದೇ ಮುಂಜಾಗ್ರತೆ ಕ್ರಮಗಳ ಕೈಗೊಳ್ಳದೆ ನಿಯಮಾನುಸಾರ ನಡೆದುಕೊಳ್ಳದೆ ಕಾಮಗಾರಿ ಆರಂಭಿಸಲಾಗಿದೆ.

ಜಿಲ್ಲಾಡಳಿತ ಈ ಸಂಬಂಧ ಸ್ಥಳಕ್ಕೆ ಆಗಮಿಸಿ ಜೆ.ಎನ್.ಕೋಟೆ ಸುತ್ತ ಮುತ್ತಲಿನ ಗ್ರಾಮಸ್ತರ ಅಹವಾಲು ಆಲಿಸಬೇಕು. ಪರಿಸರದ ಮೇಲಾಗುವ ಪರಿಣಾಮಗಳ ಅವಲೋಕಿಸಬೇಕು. ಯಾರೋ ಓರ್ವ ಉದ್ಯಮಿ ತನ್ನ ಲಾಭಕ್ಕಾಗಿ ಕೈಗೊಳ್ಳುವ ಚಟುವಟಿಕೆಗೆ ರೈತ ಸಮೂಹ ತೊಂದರೆ ಪಡುವ ಅಗತ್ಯವಿಲ್ಲ. ಹಾಗಾಗಿ ಕೋಳಿ ಫಾರಂಗೆ ಅನುಮತಿ ನೀಡಬಾರದು. ಅವರು ಹಳ್ಳಿಗಳು ಇಲ್ಲದ ಕಡೆ, ಜನವಸತಿ ಪ್ರದೇಶ ಬಿಟ್ಟು ಕೋಳಿ ಫಾರಂ ಆರಂಭಿಸಿಕೊಳ್ಳಲು ನಮ್ಮದೇನೂ ವಿರೋದವಿಲ್ಲ. ಹಾಲಿ ಜೆ.ಎನ್.ಕೋಟೆ ಬಳಿ ಇರುವ ಕೋಳಿ ಫಾರಂ ಮಾಲೀಕರಿಗೆ ಪರಿಸರ ಹಾನಿಯಾಗದಂತೆ ಅಗತ್ಯ ಕ್ರಮ ಕೈಗೊಳ್ಳಲು ನಿರ್ದೇಶನ ನೀಡಬೇಕೆಂದು ಜಿಲ್ಲಾಧಿಕಾರಿಗೆ ಸಲ್ಲಿಸಲಾದ ಮನವಿಯಲ್ಲಿ ಆಗ್ರಹಿಸಲಾಗಿದೆ.

ಈ ಸಂದರ್ಭದಲ್ಲಿ ರೈತ ಸಂಘದ ರಾಜ್ಯ ಉಪಾಧ್ಯಕ್ಷ ಕೆ.ಪಿ.ಭೂತಯ್ಯ, ಜಿಲ್ಲಾಧ್ಯಕ್ಷ ಧನಂಜಯ ಹಂಪಯ್ಯನಮಾಳಿಗೆ, ರೈತ ಮುಖಂಡರಾದ ಚಿಕ್ಕಪ್ಪನಹಳ್ಳಿ ರುದ್ರಸ್ವಾಮಿ, ಕಾಂತರೆಡ್ಡಿ, ಈಶ್ವರಪ್ಪ, ಜಗನ್ನಾಥ, ಡಿ.ಪಿ.ಶಿವರುದ್ರಪ್ಪ, ಕೇಶವಪ್ಪ, ಕೆ.ಎಂ.ಕಾಂತರಾಜು, ಪಿ.ಆರ್.ಮಾರುತಿ, ಎನ್.ಚಂದ್ರಶೇಖರ್, ಡಿ.ಎಸ್.ಹಳ್ಳಿ ಮಲ್ಲಿಕಾರ್ಜುನ ಪ್ರತಿಭಟನೆ ನೇತೃತ್ವ ವಹಿಸಿದ್ದರು.

Share this article