ಸಮತಾ ಸಮಾಜ ನಿರ್ಮಾಣ ಅಂಬೇಡ್ಕರ್ ಚಿಂತನೆ: ಜನಾರ್ದನ ಬಿ.

KannadaprabhaNewsNetwork | Published : Apr 17, 2025 12:02 AM

ಸಾರಾಂಶ

ತಾಲೂಕು ಆಡಳಿತ, ತಾಲೂಕು ಪಂಚಾಯಿತಿ, ಸಮಾಜ ಕಲ್ಯಾಣ ಇಲಾಖೆ ಹಾಗೂ ನಗರಸಭೆ ಆಶ್ರಯದಲ್ಲಿ ಪುತ್ತೂರು ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಸೋಮವಾರ ಡಾ. ಬಿ.ಆರ್. ಅಂಬೇಡ್ಕರ್ ೧೩೪ನೇ ಜನ್ಮ ದಿನಾಚರಣೆ ನೆರವೇರಿತು.

ಕನ್ನಡಪ್ರಭ ವಾರ್ತೆ ಪುತ್ತೂರು

ಸಮತಾ ಸಮಾಜ ನಿರ್ಮಾಣದ ಗುರಿಯೇ ಡಾ. ಅಂಬೇಡ್ಕರ್ ಚಿಂತನೆಯಾಗಿತ್ತು. ಅವರ ಚಿಂತನೆ ಉಳಿಸಿ ಬೆಳೆಸಿಕೊಂಡು ಹೋಗುವಲ್ಲಿ ಎಲ್ಲರ ಪ್ರಯತ್ನಗಳಾಗಬೇಕು ಎಂದು ಮೈಸೂರು ಸಹಾಯಕ ಸರ್ಕಾರಿ ಅಭಿಯೋಜಕ ಜನಾರ್ದನ ಬಿ ಅಭಿಪ್ರಾಯಪಟ್ಟಿದ್ದಾರೆ.

ತಾಲೂಕು ಆಡಳಿತ, ತಾಲೂಕು ಪಂಚಾಯಿತಿ, ಸಮಾಜ ಕಲ್ಯಾಣ ಇಲಾಖೆ ಹಾಗೂ ನಗರಸಭೆ ಆಶ್ರಯದಲ್ಲಿ ಪುತ್ತೂರು ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಸೋಮವಾರ ನಡೆದ ಡಾ. ಬಿ.ಆರ್. ಅಂಬೇಡ್ಕರ್ ೧೩೪ನೇ ಜನ್ಮ ದಿನಾಚರಣೆಯಲ್ಲಿ ಮುಖ್ಯ ಉಪನ್ಯಾಸ ನೀಡಿದರು.

ಡಾ. ಅಂಬೇಡ್ಕರ್ ಅವರ ಹೆಸರು ಮತ್ತು ಭಾವಚಿತ್ರಗಳನ್ನು ಬಳಸಿಕೊಂಡು ಲಾಭ ಪಡೆದುಕೊಳ್ಳುವವರು ಸಾಕಷ್ಟು ಮಂದಿ ಇದ್ದಾರೆ. ಅಂತಹ ವ್ಯಕ್ತಿಗಳ ಬಗ್ಗೆ ಎಚ್ಚರದಿಂದ ಇರಬೇಕು ಎಂದರು

ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಸಕ ಅಶೋಕ್ ಕುಮಾರ್ ರೈ ಮಾತನಾಡಿ, ಶ್ರೇಷ್ಠ ದಾರ್ಶನಿಕ ಹಾಗೂ ಚಿಂತಕ ಡಾ..ಬಿ.ಆರ್.ಅಂಬೇಡ್ಕರ್ ಅವರು ತಮ್ಮ ಸಂವಿಧಾನದ ಮೂಲಕ ಪ್ರತಿಯೊಬ್ಬರಿಗೂ ಪ್ರಶ್ನೆ ಮಾಡುವ ಅಧಿಕಾರ ನೀಡಿದ್ದಾರೆ. ಇಂತಹ ಮಹಾನ್ ವ್ಯಕ್ತಿಯ ಬದುಕು ಆದರ್ಶಪ್ರಾಯವಾಗಿದೆ ಎಂದರು.

ಸಂಸ್ಮರಣಾ ಜ್ಯೋತಿ ಪ್ರಜ್ವಲನೆ ಮಾಡಿದ ಪುತ್ತೂರು ಉಪವಿಭಾಗಾಧಿಕಾರಿ ಸ್ಟೆಲ್ಲಾ ವರ್ಗೀಸ್ ಮಾತನಾಡಿದರು.

ಪೂಡಾ ಅಧ್ಯಕ್ಷ ಅಮಲ ರಾಮಚಂದ್ರ, ತಹಸೀಲ್ದಾರ್ ಪುರಂದರ ಹೆಗ್ಡೆ, ಡಿವೈಎಸ್ಪಿ ಅರುಣ್ ನಾಗೇಗೌಡ, ತಾ.ಪಂ. ಕಾರ್ಯನಿರ್ವಹಣಾಧಿಕಾರಿ ನವೀನ್‌ಕುಮಾರ್ ಭಂಡಾರಿ, ಪೌರಾಯುಕ್ತ ಮಧು ಎಸ್ ಮನೋಹರ್, ಕ್ಷೇತ್ರ ಶಿಕ್ಷಣಾಧಿಕಾರಿ ಲೊಕೇಶ್ ಎಸ್ ಆರ್ ಉಪಸ್ಥಿತರಿದ್ದರು.

ಹಾಸ್ಟೆಲ್‌ನ ಅಡುಗೆ ಸಹಾಯಕಿ ದೇವಮ್ಮ, ಜಿಡೆಕಲ್ಲು ಪದವಿ ಕಾಲೇಜಿನ ಪ್ರಾಂಶುಪಾ ಸುಬ್ಬಪ್ಪ ಕೈಕಂಬ ಹಾಗೂ ಸರ್ಕಾರಿ ಸಹಾಯಕ ಅಭಿಯೋಜಕ ಜನಾರ್ದನ ಬಿ ಅವರನ್ನು ಗೌರವಿಸಲಾಯಿತು.

ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕಿ ವಿನಯಕುಮಾರಿ ಕೆ.ಬಿ ಸ್ವಾಗತಿಸಿದರು. ವಾರ್ಡನ್ ಪ್ರೇಮಲತಾ ವಂದಿಸಿದರು. ವಾರ್ಡನ್ ಸವಿತಾ ಕೆ.ಪಿ ನಿರೂಪಿಸಿದರು.

Share this article