ಡಂಬಳ: ಸಾಮೂಹಿಕ ವಿವಾಹಗಳು ದುಂದುವೆಚ್ಚಕ್ಕೆ ಕಡಿವಾಣ ಹಾಕುವುದಲ್ಲದೆ, ನೆಮ್ಮದಿ ಜೀವನಕ್ಕೆ ನಾಂದಿ ಹಾಡುತ್ತವೆ ಎಂದು ವಿರೂಪಾಪುರದ ಗುರು ಮುದಕೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು ಹೇಳಿದರು.
ಇಂತಹ ದುಬಾರಿ ಸಮಯದಲ್ಲಿ ಮನೆ ಕಟ್ಟುವುದು ಮತ್ತು ಮದುವೆ ಮಾಡುವುದು ಬಹಳ ಕಷ್ಟದ ಕೆಲಸ. ಜೊತೆಗೆ ಆರ್ಥಿಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಇದನ್ನು ಮನಗಂಡು ತ್ರಿವಿಧ ದಾಸೋಹಿಗಳಾದ ಹಾಲೇಶ್ವರ ಶಿವಶರಣರು ಪ್ರತಿ ವರ್ಷ ಬಡವರಿಗಾಗಿ ಜಾತ್ರಾಮಹೋತ್ಸವದಲ್ಲಿ ಬಡವರ ಹಿತಕ್ಕಾಗಿ ಇಲ್ಲಿಯವರೆಗೆ 460ಕ್ಕೂ ಹೆಚ್ಚು ಜೋಡಿಗಳಿಗೆ ಮದುವೆ ಮಾಡಿಸಿದ್ದು ಪ್ರಶಂಸನೀಯ ಎಂದು ಹೇಳಿದರು.
ತ್ರಿವಿಧ ದಾಸೋಹಿ ಹಾಲೇಶ್ವರ ಶಿವಶರಣರು ಮಾತನಾಡಿ, ವಧು–ವರರು ದಾಂಪತ್ಯ ಜೀವನವನ್ನು ಮಾದರಿಯಾಗಿ ನಡೆಸುವ ಮೂಲಕ ಸಮಾಜಕ್ಕೆ ಮಾದರಿಯಾಗಬೇಕು. ಇಂದಿನ ದಿನಮಾನಗಳಲ್ಲಿ ಆರ್ಥಿಕವಾಗಿ ಹಿಂದುಳಿದ ಕುಟುಂಬಗಳಿಗೆ ಮದುವೆ ಕಬ್ಬಿಣದ ಕಡಲೆ ಇದ್ದಂತೆ. ಉಳ್ಳವರು ಸಾಮೂಹಿಕ ವಿವಾಹದಂತಹ ಸತ್ಕಾರ್ಯಕ್ಕೆ ಮುಂದಾಗಿ ಬಡವ, ಶ್ರೀಮಂತ, ಮೇಲು, ಕೀಳೆನ್ನದೆ ಎಲ್ಲರೂ ಒಂದೇ ಎನ್ನುವ ಭಾವನೆಯೊಂದಿಗೆ ನಡೆಸುವ ಎಲ್ಲ ಸತ್ಕಾರ್ಯ ಮಾಡಬೇಕು. ಇಂತಹ ಸಾಮಾಜಿಕ ಕಳಕಳಿಯೊಂದಿಗೆ ಭಕ್ತರ ಸಹಕಾರದಿಂದಾಗಿ ಜಾತ್ರಾಮಹೋತ್ಸವದಲ್ಲಿ ಸಾಮೂಹಿಕ ವಿವಾಹ ಜರುಗಲು ಕಾರಣವಾಗಿರುವುದು ನಿಜಕ್ಕೂ ಶ್ಲಾಘನೀಯ ಎಂದು ಹೇಳಿದರು.ಈ ಸಂದರ್ಭದಲ್ಲಿ 10 ಜೋಡಿಗಳು ಕಂಕಣ ಭಾಗ್ಯ ಪಡೆದರು.