ಆರ್ಥಿಕ ಹೊರೆ ತಗ್ಗಿಸುವ ಸಾಮೂಹಿಕ ವಿವಾಹಗಳು

KannadaprabhaNewsNetwork | Published : Dec 24, 2023 1:45 AM

ಸಾರಾಂಶ

ಹಗರಿಬೊಮ್ಮನಹಳ್ಳಿಯ ಹಾಲಸ್ವಾಮಿ ಮಠದಲ್ಲಿ ಹಾಲಸ್ವಾಮಿ ಜಾತ್ರೋತ್ಸವದ ಪ್ರಯುಕ್ತ ಸಾಮೂಹಿಕ ವಿವಾಹ ಆಯೋಜಿಸಲಾಗಿತ್ತು. ಏಳು ಜೋಡಿ ವಧು-ವರರು ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಮುಳ್ಳುಗದ್ದುಗೆ ಉತ್ಸವವೂ ಜರುಗಿತು.

ಹಗರಿಬೊಮ್ಮನಹಳ್ಳಿ: ಭಕ್ತರ ಸಹಕಾರದಿಂದ ಹಾಲಸ್ವಾಮಿ ಮಠದಲ್ಲಿ ಪ್ರತಿವರ್ಷ ಅರ್ಥಪೂರ್ಣವಾಗಿ ಸಾಮೂಹಿಕ ವಿವಾಹಗಳನ್ನು ಮಾಡುತ್ತಾ ಬಂದಿದ್ದೇವೆ ಎಂದು ಹಾಲಸ್ವಾಮಿ ಮಠದ ಹಾಲಸಿದ್ದೇಶ್ವರ ಸ್ವಾಮೀಜಿ ಹೇಳಿದರು.

ಪಟ್ಟಣದ ಹಾಲಸ್ವಾಮಿ ಮಠದಲ್ಲಿ ಹಾಲಸ್ವಾಮಿ ಜಾತ್ರೋತ್ಸವದ ಪ್ರಯುಕ್ತ ನಡೆದ ಸಾಮೂಹಿಕ ಉಚಿತ ವಿವಾಹ ಕಾರ್ಯಕ್ರಮದಲ್ಲಿ ಸಾನ್ನಿಧ್ಯವಹಿಸಿ ಅವರು ಮಾತನಾಡಿದರು. ಮಠದಲ್ಲಿ ಸಾಮೂಹಿಕ ಮದುವೆ ಪರಂಪರೆಯನ್ನು ಲಿಂಗೈಕ್ಯ ಹಾಲಸ್ವಾಮೀಜಿ ಹುಟ್ಟುಹಾಕಿದ್ದರು. ಸಾಮೂಹಿಕ ವಿವಾಹಗಳು ಆರ್ಥಿಕ ಹೊರೆಯನ್ನು ತಗ್ಗಿಸುತ್ತವೆ. ಇಂತಹ ವಿವಾಹಗಳಿಂದ ಸಾಮರಸ್ಯ ಹೆಚ್ಚುತ್ತದೆ ಎಂದು ತಿಳಿಸಿದರು.ಜಾನುಕೋಟಿ ಮಠದ ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿ ಉದ್ಘಾಟಿಸಿ ಮಾತನಾಡಿ, ಹಾಲಸ್ವಾಮಿ ಮಠ ಸಮಾಜಮುಖಿ ಕಾರ್ಯದಲ್ಲಿ ನಿರಂತರವಾಗಿ ತೊಡಗಿಸಿಕೊಂಡಿದೆ. ಸಾಮೂಹಿಕ ವಿವಾಹಗಳು ಬಡತನದ ಕುಟುಂಬಗಳಿಗೆ ಆಸರೆಯಾಗಿವೆ. ಉಳ್ಳವರು ಇಂತಹ ಕಾರ್ಯಕ್ರಮಗಳಿಗೆ ನೆರವು ನೀಡಿ ಪ್ರೋತ್ಸಾಹಿಸಬೇಕು ಎಂದು ತಿಳಿಸಿದರು. ಇದೇವೇಳೆ ಒಟ್ಟು ೭ ಜೋಡಿ ವಧುವರರು ದಾಂಪತ್ಯ ಜೀವನಕ್ಕೆ ಕಾಲಿರಿಸಿದರು. ಇದಕ್ಕೂ ಮುನ್ನ ನಡೆದ ರಕ್ತದಾನ ಶಿಬಿರದಲ್ಲಿ ಒಟ್ಟು ೩೨ ಜನರು ಸ್ವಯಂ ಪ್ರೇರಿತರಾಗಿ ರಕ್ತದಾನ ಮಾಡಿದರು. ಉತ್ತಂಗಿ ಸೋಮಶಂಕರ ಸ್ವಾಮೀಜಿ ಸಾನ್ನಿಧ್ಯವಹಿಸಿ ಮಾತನಾಡಿದರು. ನಂದಿಪುರ ಮಹೇಶ್ವರ ಸ್ವಾಮೀಜಿ, ಬೆಣ್ಣಿಹಳ್ಳಿ ಪಂಚಾಕ್ಷರಿ ಸ್ವಾಮೀಜಿ, ಕ್ಯಾರಕಟ್ಟಿ ಅಜ್ಜಯ್ಯ ಸ್ವಾಮೀಜಿ, ಉಕ್ಕಡಗಾತ್ರಿ ಹಾಲಶಂಕರ ಸ್ವಾಮೀಜಿ, ನಂದಿಗಾವಿ ಮಹೇಶ್ವರ ಸ್ವಾಮೀಜಿ, ಅಡವಿಹಳ್ಳಿ ವೀರಗಂಗಾಧರ ಸ್ವಾಮೀಜಿ, ಮುತ್ತಿಗಿ ಹಾಲಸ್ವಾಮೀಜಿ ಸಾನ್ನಿಧ್ಯವಹಿಸಿದ್ದರು. ಪುರಸಭೆ ಸದಸ್ಯ ದೀಪಕ್ ಸಾ ಕಠಾರೆ, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಕೆ.ಎಂ. ತಿಪ್ಪೇಸ್ವಾಮಿ, ಮುಖಂಡರಾದ ಖಾನವಳಿ ಬಸವರಾಜಪ್ಪ, ಚಿತ್ತವಾಡಗಿ ಪ್ರಕಾಶ್, ಆರ್. ಕೊಟ್ರೇಶ್, ಎಂ.ಎಂ. ಉಮಾಪತಿ, ಶ್ರೀಶೈಲ, ಬಿ.ಜಿ. ಬಡಿಗೇರ, ಹೊಟೇಲ್ ಸಿದ್ದರಾಜು, ನಾಗಯ್ಯ ಸ್ವಾಮಿ ಇತರರಿದ್ದರು. ಕಾರ್ಯಕ್ರಮವನ್ನು ಕರಿಬಸವನಗೌಡ, ಶಾರದಾ ಮಂಜುನಾಥ, ರೇವಣಸಿದ್ದಾಚಾರ್ ನಿರ್ವಹಿಸಿದರು.

ಸಾಮೂಹಿಕ ವಿವಾಹಕ್ಕೂ ಮುನ್ನಾದಿನ ಶುಕ್ರವಾರ ರಾತ್ರಿ ಮಠದ ಆವರಣದಿಂದ, ಪಟ್ಟಣದ ಪ್ರಮುಖ ಬೀದಿಗಳಲ್ಲಿ ಹಾಲಸ್ವಾಮಿ ಮುಳ್ಳುಗದ್ದುಗೆ ಉತ್ಸವ ವಿಜೃಂಭಣೆಯಿಂದ ಜರುಗಿತು. ಜಾತ್ರೋತ್ಸವದ ಪ್ರಯುಕ್ತ ಹಾಲಸ್ವಾಮಿ ಮೂರ್ತಿಯನ್ನು ವಿವಿಧ ಹೂಗಳಿಂದ ಅಲಂಕರಿಸಲಾಗಿತ್ತು. ಹಾಲಸ್ವಾಮಿ ದೇಗುಲದಲ್ಲಿ ಮಹಾರುದ್ರಾಭೀಷೇಕ, ಪಂಚಾಮೃತ ಅಭಿಷೇಕ ಸೇರಿ ವಿಶೇಷ ಪೂಜೆ ನಡೆಯಿತು.

Share this article