ಹೊಸಪೇಟೆ: ಮಹಿಳೆಯರ ಬೆಳವಣಿಗೆಯ ಹಿಂದೆ ಸಮೂಹ ಮಾಧ್ಯಮಗಳ ಪಾತ್ರ ಹಿರಿದಾಗಿದೆ ಎಂದು ಕನ್ನಡ ವಿವಿಯ ಮಾನವಶಾಸ್ತ್ರ ವಿಭಾಗದ ಸಂಶೋಧನಾರ್ಥಿ ಲಕ್ಷ್ಮೀ ಜಿ.ಬಿ. ಹೇಳಿದರು.
ಸಮೂಹ ಮಾಧ್ಯಮಗಳಲ್ಲಿ ಮಹಿಳೆಯರ ಚಿತ್ರಣ ಇಂದಿನ ಸಮಾಜದ ಪ್ರಮುಖ ಚರ್ಚೆಯ ವಿಷಯವಾಗಿದೆ. ಪತ್ರಿಕೆ, ದೂರದರ್ಶನ, ಚಲನಚಿತ್ರ, ರೇಡಿಯೋಗಳು ಸಾಮಾಜಿಕ ಮಾಧ್ಯಮಗಳಲ್ಲಿ ಮಹಿಳೆಯರನ್ನು ವಿವಿಧ ಪಾತ್ರಗಳಲ್ಲಿ ಚಿತ್ರಿಸಲಾಗುತ್ತಿದೆ. ಮಹಿಳೆಗೆ ಜಾಗೃತಿ ನೀಡುವಲ್ಲಿ ವಿದ್ಯಾಭ್ಯಾಸ, ಪಡೆಯುವಲ್ಲಿ, ಸರ್ಕಾರದ ಯೋಜನೆ ಮತ್ತು ಸೌಲಭ್ಯಗಳ ಕುರಿತು ಜಾಗೃತಿ ಮೂಡಿಸುವಲ್ಲಿ ಸಮೂಹ ಮಾಧ್ಯಮಗಳು ಸಾಕಷ್ಟು ಶ್ರಮಿಸುತ್ತಿವೆ ಎಂದು ಪ್ರಶಂಸಿದರು.
ಶಿಕ್ಷಣ, ಕ್ರೀಡೆ, ಉದ್ಯೋಗ, ಉದ್ಯಮ, ಇತ್ಯಾದಿ ರಂಗಗಳಲ್ಲಿ ಮಹಿಳೆ ಇಂದು ಮುಂದೆ ಬರಬೇಕಾಗಿದೆ. ವೈಚಾರಿಕ ಜೀವನ ಅಳವಡಿಸಿಕೊಳ್ಳಲು ಸಮೂಹ ಮಾಧ್ಯಮಗಳು ಪ್ರೇರಣದಾಯಕವಾಗಿವೆ. ದೇಶದ ಅಭಿವೃದ್ಧಿ, ಕಾನೂನು ಪಾಲನೆ ವಿಷಯಗಳಲ್ಲಿಸಮೂಹ ಮಾಧ್ಯಮಗಳ ಪಾತ್ರ ಪ್ರಮುಖವಾಗಿದೆ ಎಂದರು.ಅಧ್ಯಕ್ಷತೆ ವಹಿಸಿ ಪ್ರಾಧ್ಯಾಪಕ ಡಾ. ತಾರಿಹಳ್ಳಿ ಹನುಮಂತಪ್ಪ ಮಾತನಾಡಿ, ಮಹಿಳೆಯರು ತಮ್ಮ ಹಕ್ಕುಗಳನ್ನು ಚಲಾಯಿಸಲು ಉದ್ಯೋಗ, ಚುನಾವಣೆ ಇತ್ಯಾದಿ ವಿವಿಧ ರಂಗಗಳಲ್ಲಿ ಮೀಸಲಾತಿ ಪಡೆದುಕೊಳ್ಳಲು, ಶಿಕ್ಷಣ ವಾತಾವರಣವನ್ನು ತಿಳಿಗೊಳಿಸಲು ಸಮಾನತೆ ಮತ್ತು ಸಾಮಾಜಿಕ ಸಮಸ್ಯೆ, ಲಿಂಗ ತಾರತಮ್ಯ, ಮೌಢ್ಯ ಸಂಪ್ರದಾಯಗಳ ವಿರುದ್ಧ ಪ್ರತಿರೋಧ ಸಂಘ-ಸಂಸ್ಥೆಗಳನ್ನು ಕಟ್ಟಿಕೊಳ್ಳುವ ಮೂಲಕ ಹೋರಾಡಲು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಲು ಸಮೂಹ ಮಾಧ್ಯಮಗಳು ಪ್ರಮುಖ ಸಾಧನಗಳಾಗಿವೆ ಎಂದರು.
ಗುಳೇದಗುಡ್ಡದ ಗುರುಸಿದ್ಧ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಸಹ ಸಂಚಾಲಕ ಕುಮಾರ್ ಡಿ.ಬಿ. ಉಪಸ್ಥಿತರಿದ್ದರು. ಸಂಶೋಧನಾ ವಿದ್ಯಾರ್ಥಿ ರಾಮಾಂಜನೇಯ ನಿರೂಪಿಸಿದರು. ವಿಭಾಗದ ಪ್ರಾಧ್ಯಾಪಕರು, ಸಿಬ್ಬಂದಿ, ಸ್ನಾತಕೋತ್ತರ ಮತ್ತು ಸಂಶೋಧನಾ ವಿದ್ಯಾರ್ಥಿಗಳು, ವಿದ್ಯಾರ್ಥಿನಿಯರು ಪಾಲ್ಗೊಂಡಿದ್ದರು.