ಶಿವಮೊಗ್ಗ: ಕರ್ನಾಟಕ ರಕ್ಷಣಾ ವೇದಿಕೆಯ ಜಿಲ್ಲಾ ಘಟಕದ ಅಧ್ಯಕ್ಷರ ಆಯ್ಕೆಯಲ್ಲಿ ರಾಜ್ಯಾಧ್ಯಕ್ಷರು ಅನುಸರಿಸಿದ ಏಕ ಪಕ್ಷೀಯ ನಿರ್ಧಾರ ತಮಗೆ ತೀವ್ರ ಬೇಸರ ತರಿಸಿದ್ದು, ಇದರಿಂದ ಬೇಸತ್ತು ಜಿಲ್ಲೆಯ ವಿವಿಧ ತಾಲೂಕು ಘಟಕಗಳ ಅಧ್ಯಕ್ಷರು ಹಾಗೂ ನೂರಾರು ಮಂದಿ ಪದಾಧಿಕಾರಿಗಳೊಂದಿಗೆ ತಾವು ನಾರಾಯಣ ಗೌಡ ನೇತೃತ್ವದ ಕರ್ನಾಟಕ ರಕ್ಷಣಾ ವೇದಿಕೆಗೆ ಸಾಮೂಹಿಕ ರಾಜೀನಾಮೆ ನೀಡುತ್ತಿದ್ದೇವೆ ಎಂದು ಕರವೇ ರಾಜ್ಯ ಸಂಘಟನಾ ಕಾರ್ಯದರ್ಶಿ ಎಂ.ಆರ್.ವೆಂಕಟೇಶ್ ಹೆಗಡೆ ತಿಳಿಸಿದರು.
ರಾಜ್ಯಾಧ್ಯಕ್ಷರ ಸಂಘಟನೆಯ ಬದ್ಧತೆ, ಕಾಳಜಿ ಬಗ್ಗೆ ತಮ್ಮದೇನು ತಕರಾರು ಇಲ್ಲ. ಅವರ ಮಾರ್ಗದರ್ಶನದಲ್ಲಿಯೇ ಇಷ್ಟು ವರ್ಷ ಜೊತೆಗಿದ್ದು ಕೆಲಸ ಮಾಡಿದ್ದೇವೆ. ಆದರೆ ಜಿಲ್ಲಾ ಘಟಕದ ಅಧ್ಯಕ್ಷರನ್ನು ನೇಮಕ ಮಾಡುವಾಗ, ಸಂಘಟನೆಗಾಗಿ ದುಡಿದ ಪದಾಧಿಕಾರಿಗಳನ್ನು ಒಮ್ಮೆಯಾದರೂ ಸಂಪರ್ಕ ಮಾಡಬೇಕಿತ್ತು. ಯಾರನ್ನು ನೇಮಕ ಮಾಡಿದರೆ ಸೂಕ್ತ ಎನ್ನುವ ಅಭಿಪ್ರಾಯ ಕೇಳಬೇಕಿತ್ತು. ಆದರೆ, ಅದ್ಯಾವುದನ್ನು ಪರಿಗಣಿಸದೆ ಏಕಾಏಕಿ ಯಾರನ್ನೋ ತಮಗೆ ಬೇಕಾದವರನ್ನು ಜಿಲ್ಲಾಧ್ಯಕ್ಷರನ್ನಾಗಿ ಮಾಡಿದ್ದು ತಮಗಷ್ಟೇ ಅಲ್ಲದೆ, ಜಿಲ್ಲಾ ಘಟಕದ ಅಷ್ಟು ಪದಾಧಿಕಾರಿಗಳಿಗೆ ತೀವ್ರ ಬೇಸರ ತಂದಿದೆ. ಅದೇ ಕಾರಣಕ್ಕೆ ತಾವೀಗ ನಾರಾಯಣ ಗೌಡ ಬಣದ ಕರ್ನಾಟಕ ರಕ್ಷಣಾ ವೇದಿಕೆಗೆ ಸಾಮೂಹಿಕವಾಗಿ ರಾಜೀನಾಮೆ ನೀಡಲು ನಿರ್ಧರಿಸಿದ್ದೇವೆ. ತೀರ್ಥಹಳ್ಳಿ ತಾಲೂಕು ಘಟಕ ಹೊರತುಪಡಿಸಿ, ಉಳಿದ ಎಲ್ಲಾ ತಾಲೂಕು ಘಟಕಗಳ ಪದಾಧಿಕಾರಿಗಳು ಹಾಗೂ ನೂರಾರು ಮಂದಿ ಕಾರ್ಯಕರ್ತರು ಈ ಕ್ಷಣದಿಂದಲೇ ರಾಜೀನಾಮೆ ನೀಡುತ್ತಿದ್ದೇವೆ ಎಂದರು.
ಕರವೇ ರಾಜ್ಯ ಕಾರ್ಯದರ್ಶಿ ಮಂಜುನಾಥ್ ಕೋಟ್ಯಾನ್ ಮಾತನಾಡಿ, ರಾಜ್ಯಾಧ್ಯಕ್ಷರ ನೇಮಕದ ನಿರ್ಧಾರವನ್ನು ನಾವು ಪ್ರಶ್ನಿಸುವುದಿಲ್ಲ, ಆದರೆ ಈಗ ಅವರು ಜಿಲ್ಲಾ ಘಟಕಕ್ಕೆ ನೇಮಕ ಮಾಡಿರುವ ಜಿಲ್ಲಾಧ್ಯಕ್ಷರು ಹಾಗೂ ಮಹಿಳಾ ಘಟಕದ ಅಧ್ಯಕ್ಷರ ಜತೆಗೆ ನಮಗೆ ಕೆಲಸ ಮಾಡಲು ಇಷ್ಟವಿಲ್ಲ. ನಾವು ಸಂಘಟನೆಯಲ್ಲಿ ಇಷ್ಟು ವರ್ಷ ಬದ್ಧತೆ ಮತ್ತು ಶಿಸ್ತಿನಿಂದ ಕೆಲಸ ಮಾಡುತ್ತಾ ಬಂದಿದ್ದೇವೆ. ಹಾಗಾಗಿ ಈಗ ನಾರಾಯಣ ಗೌಡ ಬಣದ ಕರ್ನಾಟಕ ರಕ್ಷಣಾ ವೇದಿಕೆಗೆ ರಾಜೀನಾಮೆ ಕೊಟ್ಟು, ಮುಂದೆ ಪ್ರವೀಣ್ ಶೆಟ್ಟಿ ಬಣದ ಕರ್ನಾಟಕ ರಕ್ಷಣಾ ವೇದಿಕೆಗೆ ಸೇರ್ಪಡೆ ಯಾಗುತ್ತಿದ್ದೇವೆ ಎಂದರು.ಜಿಲ್ಲಾ ಗೌರವಾಧ್ಯಕ್ಷ ನಿಂಬೆಹಣ್ಣು ಮಂಜುನಾಥ್ ಮಾತನಾಡಿ, ತಾವು ಸೇರಿದಂತೆ ಹಲವರು ಈ ಹಿಂದೆ ಪ್ರವೀಣ್ ಶೆಟ್ಟಿ ಬಣದ ಕರವೇಯಲ್ಲಿದ್ದವರು. ಹಾಗಾಗಿ ವಾಪಾಸ್ ಅಲ್ಲಿಗೆ ಹೋಗುವ ಸಂಬಂಧ ಈಗಾಗಲೇ ಮಾತುಕತೆ ನಡೆದಿದೆ. ಪದಾಧಿಕಾರಿಗಳ ಹುದ್ದೆಯ ವಿಚಾರದಲ್ಲೂ ಸಾಕಷ್ಟು ಚರ್ಚೆ ನಡೆದಿದೆ. ಹುದ್ದೆಗಳು ಎನ್ನುವುದಕ್ಕಿಂತ ಕನ್ನಡ ಪರ ಕೆಲಸಕ್ಕೆ ಎಲ್ಲರೂ ಒಟ್ಟಾಗಿ ಕೆಲಸ ಮಾಡೋಣ ಎನ್ನುವ ನಿಟ್ಟಿನಲ್ಲಿ ನಾವು ಒಂದಾಗುತ್ತಿದ್ದೇವೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಬಲೀಂದ್ರಪ್ಪ ಸೊರಬ, ಸುರೇಂದ್ರ, ಜ್ಯೋತಿ ದಿಲೀಪ್ ತೀರ್ಥಹಳ್ಳಿ, ಮನೋಜ್ ಕುಗ್ವೆ ಸಾಗರ, ಪ್ರವೀಣ್ ಗೌಡ ಹೊಸನಗರ, ಲಿಂಗರಾಜ್, ವಿನಯ್, ಪರಮೇಶ್ವರ್, ರಂಗನಾಥ್ ಮತ್ತಿತರರು ಇದ್ದರು.