ಗೋಕರ್ಣ: ಅಶೋಕೆಯಲ್ಲಿ ರಾಘವೇಶ್ವರ ಭಾರತೀ ಶ್ರೀಗಳ ಸ್ವಭಾಷಾ ಚಾತುರ್ಮಾಸ್ಯದ ಹಿನ್ನೆಲೆಯಲ್ಲಿ ಶ್ರೀಮಠದಲ್ಲಿ ಉತ್ಸರ್ಜನ ಮತ್ತು ಯಜುರ್ ಉಪಾಕರ್ಮ ವಿಧ್ಯುಕ್ತವಾಗಿ ನಡೆಯಿತು.
"ಉತ್ಸರ್ಜನ ಮತ್ತು ಉಪಾಕರ್ಮ ಪ್ರತಿಯೊಬ್ಬ ದ್ವಿಜರೂ ಮಾಡಲೇಬೇಕಾದ ಕರ್ತವ್ಯ. ಬ್ರಾಹ್ಮಣರು, ಕ್ಷತ್ರಿಯರು ಮತ್ತು ವೈಶ್ಯರು ಹೀಗೆ ವೇದಾಧ್ಯಯನದ ಅಧಿಕಾರ ಇರುವ ಪ್ರತಿಯೊಬ್ಬರಿಗೂ ಇದು ನಿತ್ಯಕರ್ಮ. ಅದರಲ್ಲೂ ವೇದ ಅಧ್ಯಾಪನದ ಅಧಿಕಾರ ಇರುವ ಬ್ರಾಹ್ಮಣರಂತೂ ವಿಧಿವತ್ತಾಗಿ ಮಾಡಲೇಬೇಕಾದ ಕರ್ತವ್ಯ " ಎಂದು ಕರ್ಮಚಿಂತನೆ ನೆರವೇರಿಸಿದ ನರಸಿಂಹ ಭಟ್ ನುಡಿದರು.
ವೇದಾಧ್ಯಯನ ಮತ್ತು ಅಧ್ಯಾಪನದ ಅಧಿಕಾರಗಳು ಇರುವುದು ಬ್ರಾಹ್ಮಣರಿಗೆ ಮಾತ್ರ. ಆದ್ದರಿಂದ ಉಪಾಕರ್ಮ ಬ್ರಾಹ್ಮಣ ಸಮುದಾಯಕ್ಕೆ ವಿಶೇಷ ಎಂದರು.ನಿರಂತರ ವೇದಾಧ್ಯಯನದಿಂದ ಬರಬಹುದಾದ ಜಡತ್ವ ನಿವಾರಣೆಗಾಗಿ ಉತ್ಸರ್ಜನ ಮಾಡಿ ಆ ಬಳಿಕ ಉಪಾಕರ್ಮ ಕೈಗೊಂಡು ವೇದಾಧ್ಯಯನ ನಡೆಸುವುದು ರೂಢಿ ಎಂದು ವಿವರಿಸಿದರು.
ಯಜುರ್ವೇದಿಗಳು ಶ್ರಾವಣ ಮಾಸದ ಪೌರ್ಣಮಿಯಂದು ಉಪಾಕರ್ಮ ನೆರವೇರಿಸಿ, ಮರುದಿನ ಅಂದರೆ ಪ್ರತಿಪದೆಯಂದು ಚೈತನ್ಯ ವೃದ್ಧಿಗಾಗಿ ಸಾಧ್ಯವಾದಷ್ಟು ಗಾಯತ್ರಿ ಮಂತ್ರವನ್ನು ಪಠಿಸಬೇಕು. ಮೂರು ದಿನಗಳ ವಿರಾಮದ ಬಳಿಕ ವೇದಾಧ್ಯಯನ ಮುಂದುವರಿಸುವುದು ಸಂಪ್ರದಾಯ ಎಂದು ಬಣ್ಣಿಸಿದರು.
ಯಜ್ಞೋಪವೀತ ಎನ್ನುವುದು ಯಜ್ಞಕ್ಕೆ ಸೂತ್ರ. ಅಂದರೆ ಒಂದರ್ಥದಲ್ಲಿ ನಮ್ಮ ಬದುಕಿನ ಸೂತ್ರ. ೯೬ ತತ್ವಗಳನ್ನು ನೆನಪಿಸುವ ಸಲುವಾಗಿ ತ್ರಿಮೂರ್ತಿಗಳು, ನವತಂತು ದೇವತೆಗಳನ್ನು ಆವಾಹನೆ ಮಾಡಿ ಧಾರಣೆ ಮಾಡಬೇಕು. ಯಜ್ಞೋಪವೀತ ಆಹುತಿ, ದಾನ ಮತ್ತು ಧಾರಣೆಯ ಮೂಲಕ ಬದುಕಿನ ಸಾರ್ಥಕತೆಯ ಸೂತ್ರವನ್ನು ಹೊಂದಬಹುದು ಎಂದು ಅಭಿಪ್ರಾಯಪಟ್ಟರು.
ಬಳ್ಳಾರಿಯ ಸಾಮಾಜಿಕ ಕಾರ್ಯಕರ್ತ ಅಮರೇಶ, ಬೀರ‍್ನ ರಾಮಚಂದ್ರ ಅವರು ಶ್ರೀಗಳ ದರ್ಶನ- ಆಶೀರ್ವಾದ ಪಡೆದರು. ವಿವಿವಿ ಹಿರಿಯ ಲೋಕಸಂಪರ್ಕಾಧಿಕಾರಿ ಜಿ.ಕೆ.ಹೆಗಡೆ ಗೋಳಗೋಡು, ಸರ್ವ ಸಮಾಜ ಸಂಯೋಜಕ ಕೆ.ಎನ್.ಹೆಗಡೆ ಮತ್ತಿತರರು ಉಪಸ್ಥಿತರಿದ್ದರು.